* ಕೊಪ್ಪಳದ ಕನಸಿನ ನೀರಾವರಿ ಯೋಜನೆಗೆ ಆರಂಭದಲ್ಲಿಯೇ ವಿಘ್ನ
* ಟ್ರಯಲ್ ವೇಳೆ ಒಡೆದ ಪೈಪ್
* ಸಂಕಷ್ಟದಲ್ಲಿ ಸಿಲುಕಿದ ಅನ್ನದಾತ
ವರದಿ:- ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ, (ಏ.26): ಅದು ಕೊಪ್ಪಳ ಜಿಲ್ಲೆಯ ಕನಸಿನ ನೀರಾವರಿ ಯೋಜನೆ. ಆ ಆಯೋಜನೆ ಆರಂಭಕ್ಕೂ ಮುನ್ನವೇ ಅನೇಕ ವಿಘ್ನಗಳು ಎದುರಾಗುತ್ತಿವೆ. ಇಂದು(ಮಂಗಳವಾರ) ಬೆಳಿಗ್ಗೆಯಷ್ಟೇ ಟ್ರಯಲ್ ಆಗಿ ಪೈಪ್ ಮೂಲಕ ನೀರು ಬೀಡಲಾಯಿತು. ನೀರು ಬಿಟ್ಟಿದ್ದಷ್ಟೇ ತಡ, ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಅಷ್ಟಕ್ಕೂ ಎಲ್ಲಿ ಈ ಘಟನೆ ನಡೆದಿರೋದು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.
ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಆಲಮಟ್ಟಿ ಜಲಾಶಯ ಅನೇಕ ಜಿಲ್ಲೆಗಳ ಜೀವನಾಡಿಯಾಗಿದೆ. ಈ ಜಲಾಶಯದ ಮೂಲಕ ಲಕ್ಷಾಂತರ ಎಕರೆ ಪ್ರದೇಶ ನೀರಾವರಿಯಾಗಿದೆ. ಅದೇ ರೀತಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.ಕೃಷ್ಣ ಬಿ ಸ್ಕೀಂ ಯೋಜನೆಯಡಿ ಕೊಪ್ಪಳ ಏತ ನೀರಾವರಿ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ಪೈಪ್ ಮೂಲಕ ಕೊಪ್ಪಳ ಜಿಲ್ಲೆಗೆ ನೀರು ತರಲಾಗುತ್ತಿದೆ. ಈ ಕೃಷ್ಣ ಬಿ ಸ್ಕೀಂ ಯೋಜನೆಯ ಪೈಪ್ ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ.
Koppal: ಬಿರು ಬೇಸಿಗೆಯಲ್ಲಿ ಪಕ್ಷಿಗಳ ದಾಹ ನೀಗಿಸುವ ಪೊಲೀಸ್ ಅಧಿಕಾರಿಗೊಂದು ಸಲಾಂ..!
ಎಲ್ಲಿ ಪೈಪ್ ಒಡೆದಿರುವುದು?
ಕೃಷ್ಣ ಬಿ ಸ್ಕೀಂ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ನೀರಾವರಿ ಯೋಜನೆ ಆಗುತ್ತಿದೆ.ಇದಕ್ಕಾಗಿ ಆಲಮಟ್ಟಿ ಜಲಾಶಯದಿಂದ ಕೊಪ್ಪಳ ಜಿಲ್ಲೆಗೆ ಬೃಹತ್ ಪೈಪ್ ಗಳ ಮೂಲಕ ನೀರು ತರಲಾಗುತ್ತಿದೆ. ಇಂದು ಬೆಳಿಗ್ಗೆ ಕೊಪ್ಪಳ ಜಿಲ್ಲೆಗೆ ನೀರು ತರಿಸುವ ಪ್ರಾಯೋಗಿಕ ಪರೀಕ್ಷೆ ನಡೆಯಿತು.ಈ ವೇಳೆಯಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೇವಲಾಪೂರದ ಬಳಿ ಕೃಷ್ಣ ಬಿ ಸ್ಕೀಂ ಯೋಜನೆಯ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ.
ನೀರಿನಿಂದ ಏನೆಲ್ಲ ಹಾನಿ
ಇನ್ನು ಬೆಳಿಗ್ಗೆ ಪೈಪ್ ಒಡೆದ ಪರಿಣಾಮವಾಗಿ ನೀರು ರಭಸವಾಗಿ ಹರಿದು ಪಕ್ಕದ ಜಮೀನಿಗೆ ನುಗ್ಗಿದೆ. ಪರಿಣಾಮವಾಗಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸೂರ್ಯಕಾಂತಿ,ಶೇಂಗಾ ಬೆಳೆ,ಹತ್ತಿ, ತೋಟಗಾರಿಕೆ ಬೆಳೆಗಳು ಹಾಳಾಗಿವೆ. ಜೊತೆಗೆ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಚಂಡು ಹೂವಿನ ತೋಟವು ಸಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಸಂಕಷ್ಟದಲ್ಲಿ ಸಿಲುಕಿದ ಅನ್ನದಾತ
ಇನ್ನು ಕೃಷ್ಣ ಬಿ ಸ್ಕೀಂ ಯೋಜನೆಯ ಪೈಪ್ ಒಡೆದು ನೀರು ಜಮೀನಿಗೆ ನುಗ್ಗಿದ್ದರ ಪರಿಣಾಮವಾಗಿ ಅಪರಾ ಪ್ರಮಾಣದ ಬೆಳೆ ಹಾನಿಯಾಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.ಇನ್ನು ಸಾಲ ಮಾಡಿ ಬೆಳೆದಿದ್ದ ಬೆಳೆಗಳು ಇದೀಗ ನೀರಿಗಾಹುತಿ ಆಗಿದ್ದರಿಂದ ರೈತರಿಗೆ ಮಾಡಿದ್ದ ಸಾಲ ಹೇಗೆ ತಿರಿಸಬೇಕೆನ್ನುವ ಚಿಂತಿಗೆ ಸಿಲುಕಿದ್ದಾರೆ. ಜೊತೆಗೆ ನಮಗಾಗಿರುವ ನಷ್ಟವನ್ನು ಸರಕಾರ ತುಂಬಿಕೊಡಬೇಕೆಂದು ರೈತರು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಅಧಿಕಾರಿಗಳ ನಿರ್ಲ್ಯಕ್ಷದಿಂದಾಗಿ ಇದೀಗ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿವೆ. ಜೊತೆಗೆ ರೈತರ ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಆದರೆ ಏನೂ ತಪ್ಪು ಮಾಡದ ಅಮಾಯಕ ರೈತರು ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಸಂಬಂಧಪಟ್ಟ ಅಧಿಕಾರಿಗಳು ರೈತರ ನೆರವಿಗೆ ಧಾವಿಸುತ್ತಾರಾ ಅನ್ನೋದನ್ನ. ಕಾದುನೋಡಬೇಕಿದೆ.