ಕೃಷಿಮೇಳಕ್ಕೆ ತೆರೆ: 8 ಲಕ್ಷ ಮಂದಿ ಭೇಟಿ, ಆನ್‌ಲೈನ್‌ನಲ್ಲೂ 38 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ!

Kannadaprabha News   | Asianet News
Published : Nov 15, 2021, 12:48 AM IST
ಕೃಷಿಮೇಳಕ್ಕೆ ತೆರೆ: 8 ಲಕ್ಷ ಮಂದಿ ಭೇಟಿ, ಆನ್‌ಲೈನ್‌ನಲ್ಲೂ 38 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ!

ಸಾರಾಂಶ

*ಲಕ್ಷಾಂತರ ಜನರ ವೀಕ್ಷಣೆಗೆ ಸಾಕ್ಷಿಯಾಗಿದ್ದ ಕೃಷಿಮೇಳಕ್ಕೆ ಭಾನುವಾರ ತೆರೆ  *ಕೃಷಿಮೇಳದಲ್ಲಿ ಒಟ್ಟು 4.25 ಕೋಟಿ ರು. ವಹಿವಾಟು *ಕಡಕ್‌ನಾಥ್‌ ಕೋಳಿ ಖರೀದಿ : ಹಲಸಿನ ಸಸಿಗೆ ಬೇಡಿಕೆ! *ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಜನರ ಆಸಕ್ತಿ  

ಬೆಂಗಳೂರು(ನ.15): ಅನ್ನದಾತರು ಆಸಕ್ತರು ಸೇರಿದಂತೆ ಲಕ್ಷಾಂತರ ಜನರ ವೀಕ್ಷಣೆಗೆ ಸಾಕ್ಷಿಯಾಗಿದ್ದ ಕೃಷಿಮೇಳಕ್ಕೆ (Krishi Mela) ಭಾನುವಾರ ತೆರೆ ಬಿತ್ತು. ಗುರುವಾರ ಮೇಳಕ್ಕೆ ಚಾಲನೆ ದೊರೆತಿದ್ದು ಎಡೆಬಿಡದೆ ಸುರಿದ ಮಳೆಯ ನಡುವೆಯೂ ಒಟ್ಟಾರೆ 8 ಲಕ್ಷಕ್ಕೂ ಅಧಿಕ ಜನ ಭೌತಿಕವಾಗಿ ಹಾಗೂ 38.11 ಲಕ್ಷ ಜನ ಆನ್‌ಲೈನ್‌ನಲ್ಲಿ (Online) ಮೇಳ ವೀಕ್ಷಿಸಿದ್ದಾರೆ.

ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (GKVK) ಗುರುವಾರ ಮೇಳಕ್ಕೆ ಚಾಲನೆ ನೀಡಿದ್ದು ಗುರುವಾರ ಮತ್ತು ಶುಕ್ರವಾರ ಮಳೆ ಬಿಡದೇ ಸುರಿದರೂ ಕ್ರಮವಾಗಿ 66 ಸಾವಿರ ಮತ್ತು 1.70 ಲಕ್ಷ ಜನ ಹಾಜರಾಗಿದ್ದರು. ಶನಿವಾರ ಮಧ್ಯಾಹ್ನದವರೆಗೂ ಮಳೆ ಬಿಡುವು ನೀಡಿದ್ದು ವಾರಾಂತ್ಯ ಆಗಿದ್ದರಿಂದ 3 ಲಕ್ಷ ಜನ ಮೇಳದ ಸೊಬಗನ್ನು ಕಣ್ತುಂಬಿಕೊಂಡಿದ್ದರು. ಭಾನುವಾರವೂ ಹೆಚ್ಚಿನ ಸಂಖ್ಯೆ ನಿರೀಕ್ಷಿಸಲಾಗಿತ್ತಾದರೂ 2.64 ಲಕ್ಷ ಜನರಷ್ಟೇ ಮೇಳದತ್ತ ಹೆಜ್ಜೆ ಹಾಕಿದ್ದಾರೆ. ಭಾನುವಾರ ಮಳೆ ಬಿಡುವು ನೀಡಿದ್ದರೂ ಜಿಕೆವಿಕೆಯತ್ತ ತೆರಳಿದವರ ಸಂಖ್ಯೆ ಶನಿವಾರಕ್ಕಿಂತ ಕಡಿಮೆ ಇತ್ತು.

2019ರಲ್ಲಿ 14 ಲಕ್ಷ ಜನ ವೀಕ್ಷಣೆ:

ನಾಲ್ಕು ದಿನದಲ್ಲಿ ಮಳಿಗೆಗಳಲ್ಲಿನ ವ್ಯಾಪಾರ ಸೇರಿದಂತೆ ಒಟ್ಟು 4.25 ಕೋಟಿ ರು. ವಹಿವಾಟು ನಡೆದಿದೆ. ಕೃಷಿ ವಿವಿಯ ರಿಯಾಯಿತಿ ಊಟದ ಹಾಲ್‌ನಲ್ಲಿ ಭಾನುವಾರ 7 ಸಾವಿರ ಜನರು ಮುದ್ದೆ ಊಟ ಸೇವಿಸಿದ್ದಾರೆ. ಗುರುವಾರ 8 ಸಾವಿರ, ಶುಕ್ರವಾರ 7 ಸಾವಿರ, ಶನಿವಾರ 8 ಸಾವಿರ ಮಂದಿ ಊಟ ಮಾಡಿದ್ದರು.

ಕಡಕ್‌ನಾಥ್‌ ಕೋಳಿ ಖರೀದಿ:

ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೋಳಿ ಖರೀದಿಗೆ ಮುಂದಾಗಿದ್ದರು, ಅದರಲ್ಲೂ ಮಧ್ಯಪ್ರದೇಶದ ಕಡುಗಪ್ಪು ಕಡಕ್‌ನಾಥ್‌  ಕೋಳಿಗಳನ್ನು (Kadaknath Chicken Breed) ಖರೀದಿಸಿದರು. ಕೆ.ಜಿ.ಗೆ 550 ರು.ನಂತೆ ಮಾರಾಟ ಮಾಡಲಾಗುತ್ತಿದ್ದು, ಕೋಳಿ ಹಿಡಿದುಕೊಂಡು ಹೋಗುತ್ತಿದ್ದವರನ್ನು ‘ಎಲ್ಲಿ ಮಾರಾಟ ಮಾಡುತ್ತಿದ್ದಾರೆ’ ಎಂದು ಬಹಳಷ್ಟುಜನ ವಿಚಾರಿಸಿದ್ದು ಕಂಡುಬಂತು. ಪೋಷಕರ ಜೊತೆ ಮಕ್ಕಳೂ ಬಂದಿದ್ದರಿಂದ ಕುರುಕಲು ತಿಂಡಿ, ಐಸ್‌ಕ್ರೀಂ, ಸಿಹಿ ತಿನಿಸು ಸವಿಯುವವರ ಸಂಖ್ಯೆ ಹೆಚ್ಚಾಗಿತ್ತು. ಮಾರಾಟಗಾರರೂ ವ್ಯಾಪಾರ ಪರವಾಗಿಲ್ಲ ಎಂದರು.

Krishi Mela: ರೈತರು ಹೊಸ ತಂತ್ರಜ್ಞಾನಗಳ ಬಳಕೆ ಕಲಿಯಬೇಕು: ರಾಜ್ಯಪಾಲ

2019ರಲ್ಲಿ ನಡೆದ ಕೃಷಿ ಮೇಳಕ್ಕೆ 14 ಲಕ್ಷ ಜನ ಆಗಮಿಸಿದ್ದರು. 2020ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಮೇಳವನ್ನು 2 ದಿನಕ್ಕೆ ಸೀಮಿತಗೊಳಿಸಲಾಗಿತ್ತು, ಸೋಂಕಿನ ಭೀತಿಯಿಂದಾಗಿ ಜನ ಜಿಕೆವಿಕೆಯತ್ತ ತೆರಳಿರಲಿಲ್ಲ. ಕೇವಲ 9 ಸಾವಿರ ಜನರಷ್ಟೇ ಕೃಷಿ ಮೇಳಕ್ಕೆ ಆಗಮಿಸಿದ್ದರು.

ಹಲಸಿನ ಸಸಿಗೆ ಬೇಡಿಕೆ

ಈ ಬಾರಿ ಮೇಳದಲ್ಲಿ ವಿವಿಧ ತಳಿಯ ಹಲಸಿನ ಸಸಿಗೆಳಿಗೆ ಜನರು ಮುಗಿಬಿದ್ದು ಖರೀದಿಸಿದರು. 20ಕ್ಕೂ ಅಧಿಕ ನರ್ಸರಿಯವರು ವಿವಿಧ ಸಸಿಗಳನ್ನು ಮಾರಾಟ ಮಾಡುತ್ತಿದ್ದು ಬಹುತೇಕರ ಬಳಿ ಹಲಸಿನ ಸಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ.

ಕೋಲಾರದ (Kolar) ಬೋಜರಪಲ್ಲಿಯ ಶಿವಾ ನರ್ಸರಿ, ಶಿವಮೊಗ್ಗದ ಸಕ್ರೆಬೈಲಿನ ವರಶ್ರೀ ಫಾರಂ ಮತ್ತು ನರ್ಸರಿ, ಬೆಂಗಳೂರು ಉತ್ತರ ತಾಲೂಕಿನ ಮುತ್ತಗದಹಳ್ಳಿಯ ಹಿತಕಾರಿ ನರ್ಸರಿ, ಯಲಹಂಕದ ಕಿತ್ತಗಾನಹಳ್ಳಿಯ ಬೆಂಗಳೂರು ನರ್ಸರಿ, ತುಮಕೂರಿನ ಗುಬ್ಬಿಯ ಸೀಗೇನಹಳ್ಳಿಯ ಸಿದ್ದು ನರ್ಸರಿ ಸೇರಿದಂತೆ ಬಹಳಷ್ಟುನರ್ಸರಿಗಳಲ್ಲಿ ಹಲಸಿನ ಸಸಿ ಮಾರಾಟ ಜೋರಾಗಿತ್ತು. ಭೈರಚಂದ್ರ, ಸಿದ್ದು, ಸಿಂಧೂರ, ನಾಗಚಂದ್ರ ತಳಿಗಳ ಸಸಿಗಳಿಗೆ ಹೆಚ್ಚು ಬೇಡಿಕೆ ಇತ್ತು.

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಸಕ್ತಿ!

ಕೊರೋನಾದ (corona) ಭೀಕರತೆ ಪರಿಣಾಮ ಜಿಕೆವಿಕೆಯಲ್ಲಿ ಏರ್ಪಡಿಸಿರುವ ಕೃಷಿಮೇಳಕ್ಕೆ ಆಗಮಿಸಿದವರಲ್ಲಿ ಬಹಳಷ್ಟುಜನರು ಆಯುಷ್‌ ಇಲಾಖೆಯ (Ayush Department) ಮಳಿಗೆಗೆ ಭೇಟಿ ನೀಡಿ ಆರೋಗ್ಯ ಸಂಬಂಧಿ ಮಾಹಿತಿ ಹೆಚ್ಚಾಗಿ ಪಡೆದಿದ್ದಾರೆ. ರೋಗ ನಿರೋಧಕ ಶಕ್ತಿ (Immunity) ಹೆಚ್ಚಿಸಿಕೊಳ್ಳಲು ಇರುವ ಮಾರ್ಗಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಮೇಳದಲ್ಲಿ 4 ಮಳಿಗೆಯನ್ನು ಆಯುಷ್‌ ಇಲಾಖೆಯಿಂದ ಹಾಕಿದ್ದು ಆರೋಗ್ಯ ಸಂಬಂಧಿ ಮಾಹಿತಿಗಳನ್ನು ನೀಡುತ್ತಿದ್ದುದಲ್ಲದೇ ಕರಪತ್ರಗಳನ್ನೂ ನೀಡಿ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ