ಸತೀಶಗೆ ಒಲಿದು ಬಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಪಟ್ಟ: ಜಾರಕಿಹೊಳಿ ಮುಂದಿದೆ ಬಿಗ್ ಚಾಲೆಂಜ್!

By Kannadaprabha News  |  First Published Mar 12, 2020, 12:29 PM IST

ಸತೀಶ ಜಾರಕಿಹೊಳಿಗೆ ಒಲಿದು ಬಂದ KPCC ಕಾರ್ಯಾಧ್ಯಕ್ಷ ಪಟ್ಟ|ಪಕ್ಷ, ಸಾಮಾಜಿಕ ಸಂಘಟನೆಗಳಲ್ಲಿ ನಿರಂತರ ತೊಡಗಿರುವ ಸತೀಶ ಜಾರಕಿಹೊಳಿ| ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವುದೇ ಒಂದು ದೊಡ್ಡ ಸವಾಲು| 


ಶ್ರೀಶೈಲ ಮಠದ 

ಬೆಳಗಾವಿ(ಮಾ.12): ಅಹಿಂದ ನಾಯಕ, ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಕಾರ್ಯಾಧ್ಯಕ್ಷ ಪಟ್ಟ ಒಲಿದು ಬಂದಿದೆ. ವಾಲ್ಮೀಕಿ ಸಮುದಾಯದ ಪ್ರಭಾವಿ ರಾಜಕಾರಣಿ ಸತೀಶ ಜಾರಕಿಹೊಳಿ ಅವರು ಸಂಘಟನಾ ಚತುರರೂ ಹೌದು. ಮಾನವ ಬಂಧುತ್ವ ವೇದಿಕೆಯ ಮೂಲಕ ರಾಜ್ಯದಲ್ಲಿ ತಮ್ಮದೇ ಆದ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದಾರೆ. 

Latest Videos

undefined

ಈ ಸಂಘಟನೆ ಮೂಲಕ ಸದಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ. ಮೂಢನಂಬಿಕೆ ವಿರೋಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಶ್ರಮಿಸುತ್ತಿದ್ದಾರೆ. ಈ ಹಿಂದೆ ಎಐಸಿಸಿ ಕಾರ್ಯದರ್ಶಿಯಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತೆಲಂಗಾಣ ರಾಜ್ಯದ ವಿಧಾನಸಭೆ ಚುನಾವಣೆ ಉಸ್ತುವಾರಿ ಹೊಣೆ ಹೊತ್ತಿದ್ದರು. ಅಲ್ಲದೇ, ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯಕ್ಕೆ ಸ್ವಂತ ಹೆಲಿಕಾಪ್ಟರ್ ಖರೀದಿಸಿ, ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದರು. ಸತೀಶ ಜಾರಕಿಹೊಳಿ ಹೆಲಿಕಾಪ್ಟರ್ ರಾಜ್ಯಾದ್ಯಂತ ಸದ್ದು ಮಾಡಿತ್ತು. ರಾಜಕೀಯಕ್ಕೆ ಅಷ್ಟೇ ಸೀಮಿತವಾಗದ ಸತೀಶ ಅವರು, ತಮ್ಮನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಾಯಕ ಸ್ಟುಡೆಂಟ್ ಫೆಡರೇಷನ್ ಶಾಲೆಯನ್ನು ಆರಂಭಿಸಿದರು. ಅಲ್ಲದೇ, ಸಕ್ಕರೆ ಉದ್ಯಮವನ್ನು ಪ್ರಾರಂಭಿಸಿದ್ದಾರೆ. 

ಪಕ್ಷದಲ್ಲಿಯೂ ಸಕ್ರಿಯವಾಗಿ ತೊಡಗಿ ಪಕ್ಷದ ಸಂಘಟನೆ ಮಾಡಿದ ಫಲವಾಗಿ ಇದೀಗ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಪಟ್ಟ ಒಲಿದುಬಂದಿದೆ. ಸತೀಶ ಜಾರಕಿಹೊಳಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆಯೇ ಜಿಲ್ಲಾ ಕಾಂಗ್ರೆಸ್ ಕಮಿಟಿಯಲ್ಲಿ ಹೊಸ ಚೈತನ್ಯ ಮೂಡಿದೆ. ಕಾಂಗ್ರೆಸ್‌ನ ಅನರ್ಹ ಶಾಸಕರಾಗಿದ್ದ ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ ಮತ್ತು ಮಹೇಶ ಕುಮಟಳ್ಳಿ ಕಾಂಗ್ರೆಸ್ ತೊರೆದು ಆಪರೇಷನ್ ಕಮಲಕ್ಕೆ ಒಳಗಾಗಿದ್ದರಿಂದ ಜಿಲ್ಲಾ ಕಾಂಗ್ರೆಸ್‌ನ ಸ್ಥಿತಿ ಹೀನಾಯವಾಗಿತ್ತು. ಇದೀಗ ಸತೀಶ ಅವರ ನೇಮಕ ಸಹಜವಾಗಿಯೇ ಜಿಲ್ಲಾ ಕಾಂಗ್ರೆಸ್‌ನಲ್ಲಿ ಹೊಸ ಆಶಾ ಭಾವನೆ ಮೂಡಿಸಿದೆ. 
1992 ರಲ್ಲಿ ಜನತಾ ಪರಿವಾರದ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟ ಸತೀಶ ಜಾರಕಿಹೊಳಿ ಅವರು 1998 ರಲ್ಲಿ ಮೊದಲ ಬಾರಿಗೆ ವಿಧಾನ ಪರಿಷತ್‌ಗೆ ಆಯ್ಕೆಯಾದರು. 2005 ರಲ್ಲಿ ವಿಧಾನ ಪರಿಷತ್‌ಗೆ ಪುನರ್ ಆಯ್ಕೆಯಾದರು. 2004 ರಲ್ಲಿ ಜವಳಿ ಖಾತೆ ಸಚಿವರಾದರು. 2013 ರಲ್ಲಿ ಅಬಕಾರಿ ಹಾಗೂ ಸಣ್ಣ ನೀರಾವರಿ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದರು. 2018 ರಲ್ಲಿ ಅರಣ್ಯಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. ಮೂಲತಃ ಜನತಾ ಪರಿವಾರದಲ್ಲಿದ್ದ ಸತೀಶ ಜಾರಕಿಹೊಳಿ ಅವರು ಬದಲಾದ ಕಾಲಘಟ್ಟದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಗೆ ಅಹಿಂದ ಚಳುವಳಿ ಮೂಲಕ ಗುರುತಿಸಿಕೊಂಡರು. ಬಳಿಕ ಜನತಾ ಪರಿವಾರದಿಂದ ಕಾಂಗ್ರೆಸ್‌ಗೆ ಸೇರಿದರು. ಕ್ಷೇತ್ರ ಪುನರ್ ವಿಂಗಡಣೆ ಯಿಂದ ಹೊಸದಾಗಿ ರಚನೆಗೊಂಡ ಯಮಕನಮರಡಿ ( ಎಸ್‌ಟಿ) ಮೀಸಲು ಕ್ಷೇತ್ರದಿಂದ 2008 ವಿಧಾನಸಭೆಗೆ ಆಯ್ಕೆಯಾದರು. 

ಸತತವಾಗಿ 2013, 2018 ರಲ್ಲಿ ಹೀಗೆ ಸತತವಾಗಿ ಯಕಮನಮರಡಿ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾದರು. ಅಪ್ಪಟ್ಟ ಅಹಿಂದ ನಾಯಕರಾಗಿ ಹೊರ ಹೊಮ್ಮಿರುವ ಸತೀಶ ಜಾರಕಿಹೊಳಿ ಅವರು ಈಗ ಕೆಪಿಸಿಸಿ ಕಾರ್ಯಾ ಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಜಾರಕಿ ಹೊಳಿ ಕುಟುಂಬದ ಮತ್ತೊಬ್ಬ ಸದಸ್ಯರು ರಾಷ್ಟ್ರೀಯ ಪಕ್ಷವೊಂದರ ಪ್ರಮುಖ ಹುದ್ದೆಗೇರಿದಂತಾಗಿದೆ. 

ಸತೀಶಗೆ ಸವಾಲುಗಳೇನು? 

* ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಸತೀಶ ಜಾರಕಿಹೊಳಿ ಅವರ ಮುಂದೆ ಹಲವಾರು ಸವಾಲುಗಳು ಎದುರಾಗಿವೆ. ಇದೀಗ ಸತೀಶ ಕೇವಲ ಒಂದೇ ಕ್ಷೇತ್ರ, ಜಿಲ್ಲೆಗೆ ಸೀಮಿತವಲ್ಲ.ಅವರ ಕಾರ್ಯವ್ಯಾಪ್ತಿ ರಾಜ್ಯಮಟ್ಟದ್ದು. 

* ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವುದೇ ಒಂದು ದೊಡ್ಡ ಸವಾಲಾಗಿದೆ. ಎಲ್ಲ ಸಮುದಾಯದ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸುಲಭದ ಕೆಲಸವಲ್ಲ. ವಿಶೇಷವಾಗಿ ಉತ್ತರಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವುದು, ಅಲ್ಲದೇ, ಚುನಾವಣೆಗೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರನ್ನು ಗೆಲ್ಲಿಸುವುದು. 

* ಒಂದು ಕಾಲದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗಟ್ಟಿ ನೆಲೆಯೂರಿತ್ತು. ಆದರೆ, ಈಗ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಂಡಿದೆ. ಸತೀಶ ಅವರ ಸಹೋದರ ರಮೇಶ ಜಾರಕಿಹೊಳಿ ಸೇರಿದಂತೆ ಮೂವರು ಕಾಂಗ್ರೆಸ್‌ನ ಅನರ್ಹ ಶಾಸಕರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದು ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಕಾಂಗ್ರೆಸ್‌ನ ಕಾರ್ಯಕರ್ತರು ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದಾರೆ. ಅವರನ್ನು ಮರಳಿ ಕಾಂಗ್ರೆಸ್ಸಿನತ್ತ ಕರೆತರುವುದು ದೊಡ್ಡ ಸವಾಲಿನ ಕೆಲಸ. ಅಲ್ಲದೇ, ಕಾಂಗ್ರೆಸ್ ನಾಯಕರಲ್ಲಿನ ಭಿನ್ನಮತ ನಿವಾರಣೆ, ವಿವಿಧ ಸಮುದಾಯಗಳ ನಾಯಕರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸಬೇಕಿದೆ.
 

click me!