ಸಿಬಿಐ ಸೇರಿ ದೇಶದ ಸ್ವಾಯುತ್ತ ಸಂಸ್ಥೆಗಳು ಬಿಜೆಪಿಯ ಪಂಜರದ ಗಿಳಿಗಳಾಗಿವೆ: ಖಂಡ್ರೆ

By Kannadaprabha NewsFirst Published Oct 8, 2020, 3:41 PM IST
Highlights

ಡಿಕೆಶಿ ಮನೆ ಮೇಲಿನ ದಾಳಿ ರಾಜಕೀಯ ಪ್ರೇರಿತ| ಉಪ ಚುನಾವಣೆ ಸೋಲಿನ ಭೀತಿಯಲ್ಲಿ ಬಿಜೆಪಿಯಿಂದ ಅಧಿಕಾರ ದುರುಪಯೋಗ: ಈಶ್ವರ ಖಂಡ್ರೆ| ಕಾಂಗ್ರೆಸ್‌ ಮುಖಂಡರ ಮೇಲೆ ಬಿಜೆಪಿ ಎಷ್ಟೇ ದಾಳಿಗಳನ್ನು ನಡೆಸಿದರೂ ಭಯಪಡುವುದಿಲ್ಲ| 

ರಾಯಚೂರು(ಅ.08): ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಮನೆ ಮೇಲೆ ದಾಳಿ ನಡೆಸಿದ್ದು ಇದೊಂದು ರಾಜಕೀಯ ಪ್ರೇರಿತವಾಗಿದ್ದು, ಉಪ ಚುನಾವಣೆಯಲ್ಲಿ ಸೋಲುತ್ತೇವೆ ಎನ್ನುವ ಭೀತಿಯಿಂದ ಬಿಜೆಪಿ ಸರ್ಕಾರವು ಅಧಿಕಾರ ದುರ್ಬಳಕೆ ಮಾಡಿಕೊಂಡು ದಾಳಿ ನಡೆಸಿರುವುದು ಖಂಡನೀಯ ವಿಷಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಗರದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು. ಸಿಬಿಐ ಸೇರಿ ದೇಶದ ಸ್ವಾಯುತ್ತ ಸಂಸ್ಥೆಗಳು ಬಿಜೆಪಿಯ ಪಂಜರದ ಗಿಳಿಗಳಾಗಿವೆ. ಸರ್ಕಾರದ ಏಜಂಟರಾಗಿ ಸಿಬಿಐ ಕೆಲಸ ಮಾಡುತ್ತಿದ್ದು, ಇಂತಹ ಐಟಿ ದಾಳಿಗಳಿಗೆ ಡಿಕೆಶಿಯಾಗಲಿ, ನಾವಗಲಿ ಪಕ್ಷದ ಯಾವುದೇ ಮುಖಂಡರಾಗಲಿ ಹೆದರುವುದಿಲ್ಲ ಎಂದು ಹೇಳಿದ್ದಾರೆ. 

ಮಸ್ಕಿ ಬೈಎಲೆಕ್ಷನ್‌: ದಿನಾಂಕ ನಿಗದಿ ಮುನ್ನವೇ ಕಾಂಗ್ರೆಸ್- ಬಿಜೆಪಿಯಿಂದ ಭರ್ಜರಿ ಪ್ರಚಾರ..!

ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ದುರಾಡಳಿತ, ಅಕ್ರಮಗಳ ಕುರಿತು ಈಗಾಗಲೇ ದಾಖಲೆ ಸಮೇತ ಅನೇಕ ದೂರುಗಳನ್ನು ಸಲ್ಲಿಸಲಾಗಿದೆ ರಾಜ್ಯಪಾಲರಿಗೂ ಮನವಿ ಸಹ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ 14 ವರ್ಷದ ಬಾಲಕಿ ಮೇಲೆ ಭೀಕರವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿ, ರಾತ್ರೋರಾತ್ರಿ ಬಾಲಕಿ ವಶವನ್ನು ಅಂತ್ಯಸಂಸ್ಕಾರ ಮಾಡಿರುವ ಅಲ್ಲಿನ ಯೋಗಿ ನೇತೃತ್ವದ ಸರ್ಕಾರ ತನ್ನ ನ್ಯೂನ್ಯತೆ ಮುಚ್ಚಿಟ್ಟಿದೆ. ರಾಷ್ಟ್ರೀಯ ಯುವ ನಾಯಕ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಸಂತ್ರಸ್ತರನ್ನು ಭೇಟಿಯಾಗಲು ತೆರಳಿದ ಸಂದರ್ಭದಲ್ಲಿ ಅವರಿಗೆ ಬಾಲಕಿಯನ್ನು ಕಳೆದುಕೊಂಡು, ತೀವ್ರ ನೋವಿನಲ್ಲಿರುವ ಕುಟುಂಬದೊಂದಿಗೆ ಭೇಟಿಯಾಗಲು ಅವಕಾಶ ನೀಡಲಿಲ್ಲ. ಅವರ ಮೇಲೆ ಪೊಲೀಸ್‌ ದಾಳಿಯೂ ಮಾಡಲಾಯಿತು. ರಾಷ್ಟ್ರೀಯ ನಾಯಕರಿಗೆ ಸೂಕ್ತ ಭದ್ರತೆ ಕಲ್ಪಿಸದ ಸರ್ಕಾರವು ಗುಂಡಾ ಮಾದರಿಯಲ್ಲಿ ವರ್ತಿಸಿದೆ. ಇಂತಹ ದುಷ್ಟಸರ್ಕಾರವನ್ನು ಕೂಡಲೇ ಜವಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಮುಖಂಡರ ಮೇಲೆ ಬಿಜೆಪಿ ಎಷ್ಟೇ ದಾಳಿಗಳನ್ನು ನಡೆಸಿದರೂ ಭಯಪಡುವುದಿಲ್ಲ. ಇದೀಗ ನಡೆಯುತ್ತಿರುವ ಆರ್‌ಆರ್‌ ನಗರ ಮತ್ತು ಶಿರಾ ಉಪ ಚುನಾವಣೆಯಲ್ಲಿ ಯಾರಿಗೆ ಮತಹಾಕಬೇಕು ಎನ್ನುವುದನ್ನು ಜನ ನಿರ್ಧರಿಸಲಿದ್ದಾರೆ. ಜಿಲ್ಲೆ ಮಸ್ಕಿ ಉಪಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಲು ಐದಾರು ಜನ ಆಕಾಂಕ್ಷಿಗಳು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ಅಭ್ಯರ್ಥಿಯನ್ನು ಪಕ್ಷದಿಂದ ಕಣಕ್ಕಿಳಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.
 

click me!