'ಸಿಎಂ ಬದಲಾವಣೆಗೆ ಜಾತಿ ಬಣ್ಣ ಸಲ್ಲದು'

Published : Oct 09, 2022, 04:49 AM IST
 'ಸಿಎಂ ಬದಲಾವಣೆಗೆ ಜಾತಿ ಬಣ್ಣ ಸಲ್ಲದು'

ಸಾರಾಂಶ

ರಾಜ್ಯದಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ಬದಲಾವಣೆ ಸಮಯದಲ್ಲಿ ನಾವೆಂದೂ ಜಾತಿಯನ್ನು ತರಲಿಲ್ಲ. ಆದರೆ, ಬಿಜೆಪಿ ಶಾಪದ ರೂಪದಲ್ಲಿ ಕಾಂಗ್ರೆಸ್‌ನತ್ತ ಬೊಟ್ಟು ಮಾಡುತ್ತಾ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಟೀಕಿಸಿದರು.

  ಮಂಡ್ಯ (ಅ.09):ರಾಜ್ಯದಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ಬದಲಾವಣೆ ಸಮಯದಲ್ಲಿ ನಾವೆಂದೂ ಜಾತಿಯನ್ನು ತರಲಿಲ್ಲ. ಆದರೆ, ಬಿಜೆಪಿ ಶಾಪದ ರೂಪದಲ್ಲಿ ಕಾಂಗ್ರೆಸ್‌ನತ್ತ ಬೊಟ್ಟು ಮಾಡುತ್ತಾ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಟೀಕಿಸಿದರು.

ಕಾಂಗ್ರೆಸ್‌ನಿಂದ (Congress) ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು, ವೀರೇಂದ್ರಪಾಟೀಲ್‌ ಹಾಗೂ ಎಸ್‌.ಬಂಗಾರಪ್ಪ (S Bangarappa) ಬದಲಾವಣೆ ಕೇವಲ ಸಾಂದರ್ಭಿಕವಷ್ಟೇ. ಅದಕ್ಕೆ ಈಗ ಜಾತಿ ಬಣ್ಣ ಹಚ್ಚುವುದು ಸರಿಯಲ್ಲ. ಬಿಜೆಪಿಯೊಳಗೆ ಬಿ.ಎಸ್‌.ಯಡಿಯೂರಪ್ಪ, ಡಿ.ವಿ.ಸದಾನಂದಗೌಡರನ್ನು ಬದಲಾವಣೆ ಮಾಡಿದಾಗ ನಾವು ಜಾತಿಯನ್ನು ಮುಂದಿಟ್ಟುಕೊಂಡು ಟೀಕಿಸಲಿಲ್ಲ. ಬಿಜೆಪಿ ಜಾತಿ ರಾಜಕಾರಣಕ್ಕೆ ಇದು ಸಾಕ್ಷಿಯಲ್ಲವೇ ಎಂದು ಬಿಜೆಪಿ (BJP) ಆರೋಪಕ್ಕೆ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

ದೇಶದಲ್ಲಿ ಉಂಟಾಗುತ್ತಿರುವ ಅಸಹನೆ, ದೌರ್ಜನ್ಯ, ಜಾತಿ, ಧರ್ಮಗಳ ನಡುವೆ ಸಂಘರ್ಷ, ಕೋಮುವಾದಿತನ ಹೆಚ್ಚಾಗಿದೆ. ಇದರ ಬಗ್ಗೆ ಸಂಸತ್‌ನಲ್ಲಿ ಮಾತನಾಡಲು ಅವಕಾಶ ನೀಡದೆ ಬಿಜೆಪಿ ರಾಜಕೀಯ ಮಾಡುತ್ತಿದೆ. ಇದನ್ನು ಎತ್ತಿ ತೋರಿಸಬೇಕಾದ ಕೆಲವು ರಾಷ್ಟ್ರ ಮಟ್ಟದ ಮಾಧ್ಯಮಗಳು ಮೌನವಾಗಿವೆ. ಆದ್ದರಿಂದ ದೇಶದ ಜನರ ಸಮಸ್ಯೆ ಅರಿಯಲು ಜನರ ಬಳಿಯೇ ಹೋಗುತ್ತೇನೆ ಎಂದು ನಿರ್ಧರಿಸಿ ರಾಹುಲ್‌ ಗಾಂಧಿ ಅವರು ಪಾದಯಾತ್ರೆ ನಡೆಸುವ ಮೂಲಕ ಜನರ ಸಮಸ್ಯೆ ಅರಿಯುತ್ತಿದ್ದಾರೆ. ಇದರಲ್ಲಿ ಯಾವುದೇ ಅಧಿಕಾರ, ರಾಜಕೀಯವಿಲ್ಲ. ಯಾರು ಏನೇ ಟೀಕೆ ಮಾಡಿದರೂ ಪಾದಯಾತ್ರೆಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ದೃಢವಾಗಿ ಹೇಳಿದರು.

ಇಂದಿರಾಗಾಂಧಿ ಹತ್ಯೆಯಾದಾಗ ರಾಹುಲ್‌ ಇನ್ನೂ ಚಿಕ್ಕ ಮಗು, ರಾಜೀವ್‌ಗಾಂಧಿ ಹತ್ಯೆಯಾದಾಗ ಇನ್ನೂ ಪ್ರಾಪ್ತ ವಯಸ್ಸಿಗೆ ಬಂದಿರಲಿಲ್ಲ. ಇಂತಹ ಭಯದ ವಾತಾವರಣದೊಳಗೆ ಸೋನಿಯಾಗಾಂಧಿ ಅವರು ಮಗನನ್ನು ಏಕಾಂಗಿಯಾಗಿ ಬೆಳೆಸಿ, ಅಧಿಕಾರಕ್ಕೆ ಆಸೆ ಪಡದೆ ಸ್ವತಂತ್ರವಾಗಿ ಮತ್ತು ಅಷ್ಟೇ ಸಮರ್ಥವಾಗಿ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿಬೆಳೆಸಿದ್ದಾರೆ. ಅವರಿಬ್ಬರೂ ದೇಶದ ಆಸ್ತಿ ಎಂದು ಹೇಳಿದರು.

ಭ್ರಷ್ಟರದ್ದೇ ಒಂದು ಜಾತಿ, ಅದು ಬಿಜೆಪಿ: ದಿನೇಶ್‌

 ‘ಭ್ರಷ್ಟಾಚಾರ ಕಳಂಕದಿಂದ ಬಿಜೆಪಿಗೆ ಲಿಂಗಾಯತ ಮತಗಳು ಕೈ ತಪ್ಪಿ ಹೋಗುವ ಭೀತಿ ಎದುರಾಗಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಂಗಾಯತ ಕಾರ್ಡ್‌ ಬಳಸಿ ಅನುಕಂಪ ಗಿಟ್ಟಿಸಲು ಮುಂದಾಗಿದ್ದಾರೆ. ಭ್ರಷ್ಟಾಚಾರಿಗಳಿಗೆ ಯಾವುದೇ ಜಾತಿ ಇರುವುದಿಲ್ಲ. ಭ್ರಷ್ಟರದ್ದೇ ಒಂದು ಜಾತಿ, ಅದರ ಹೆಸರು ಬಿಜೆಪಿ’ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಟೀಕಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ಪೇ-ಸಿಎಂ ಅಭಿಯಾನದ ಮೂಲಕ ಕಾಂಗ್ರೆಸ್‌ ಯಾವ ಸಮುದಾಯವನ್ನೂ ಗುರಿಯಾಗಿಸುವ ಪ್ರಯತ್ನ ಮಾಡಿಲ್ಲ. ಅದು ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರದ ಮುಖವಾಡ ಕಳಚುವ ಪೋಸ್ಟರ್‌ಗಳೇ ಹೊರತು, ಯಾವುದೇ ಸಮುದಾಯದ ವಿರುದ್ಧದ ಪೋಸ್ಟರ್‌ಗಳು ಅಲ್ಲ. ಭ್ರಷ್ಟಾಚಾರದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಇಷ್ಟುಕೀಳು ತಂತ್ರಕ್ಕೆ ಇಳಿಯಬಾರದಿತ್ತು ಎಂದು ಕಿಡಿಕಾರಿದ್ದಾರೆ.

ಬಿಜೆಪಿಯವರಿಗಿಂತ ಲಿಂಗಾಯತ ವಿರೋಧಿಗಳು ಯಾರೂ ಇಲ್ಲ. ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿ ಕಣ್ಣೀರು ಹಾಕಿಸಿದ್ದು, ಲಿಂಗಾಯತ ಸಮುದಾಯಕ್ಕೆ ಮಾಡಿದ ದ್ರೋಹವಲ್ಲವೇ? ತಮ್ಮ ಭ್ರಷ್ಟಾಚಾರವನ್ನು ಮುಚ್ಚಿ ಹಾಕಿಕೊಳ್ಳಲು ಜಾತಿ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಭ್ರಷ್ಟಾಚಾರಿಗಳಿಗೆ ಯಾವುದೇ ಜಾತಿ, ಸಮುದಾಯ ಇರುವುದಿಲ್ಲ. ಭ್ರಷ್ಟರದ್ದೇ ಒಂದು ಜಾತಿ. ಅದರ ಹೆಸರೇ ಬಿಜೆಪಿ ಎಂದು ಟೀಕಿಸಿದರು.

ಬಿಎಸ್‌ವೈ ಬಗ್ಗೆ ಅನುಕಂಪ ಏಕಿಲ್ಲ?- ಪ್ರಿಯಾಂಕ್‌:

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಪ್ರಿಯಾಂಕ ಖರ್ಗೆ, ನಾವು 40% ಭ್ರಷ್ಟಸರ್ಕಾರದ ವಿರುದ್ಧ ಹೋರಾಟ ಮಾಡಲು ಮುಂದಾಗಿರುವಾಗ ಬಿಜೆಪಿಯವರು ಲಿಂಗಾಯತ ಕಾರ್ಡ್‌ ಮುಂದಿಟ್ಟು ಜಾತಿ ರಾಜಕಾರಣಕ್ಕೆ ಮುಂದಾಗಿದ್ದಾರೆ. ನಿಮಗೆ ಸಮುದಾಯಗಳ ಮೇಲೆ ನಿಜಕ್ಕೂ ಕಾಳಜಿ ಇದ್ದರೆ, ಕಳೆದ ವಾರವಷ್ಟೇ ಯಡಿಯೂರಪ್ಪನವರ ವಿರುದ್ಧ ವಿಚಾರಣೆ ನಡೆಸಬೇಕು ಎಂದು ಎಫ್‌ಐಆರ್‌ ದಾಖಲಿಸಿದಾಗ ಯಾಕೆ ಈ ಅನುಕಂಪ ತೋರಿಸಲಿಲ್ಲ. ಸಮುದಾಯದ ಅಂತಹ ದೊಡ್ಡ ನಾಯಕರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದು ಯಾಕೆ? ಅವರು ಕಣ್ಣೀರು ಹಾಕುವಂತೆ ಮಾಡಿದಾಗ ನಿಮ್ಮ ಅನುಕಂಪ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.

ಸಚಿವರೊಬ್ಬರು ಕಾಂಗ್ರೆಸ್‌ನವರು ಬಲಿಷ್ಠ ಸಮುದಾಯದವರ ಮೇಲೆ ಟಾರ್ಗೆಟ್‌ ಮಾಡುತ್ತಾರೆ ಎಂದಿದ್ದಾರೆ. ಹಾಗಿದ್ದರೆ ನೀವು ಜಗದೀಶ್‌ಶೆಟ್ಟರ್‌ ಅವರಿಗೆ ಯಾಕೆ ಯಾವುದೇ ಅವಕಾಶ ನೀಡಿಲ್ಲ? ರಾಷ್ಟ್ರಪತಿ ಕಾರ್ಯಕ್ರಮದಲ್ಲೂ ಶೆಟ್ಟರ್‌ ಹೆಸರನ್ನು ಯಾಕೆ ಹಾಕಿಲ್ಲ? ಸದಾನಂದಗೌಡರನ್ನು 11 ತಿಂಗಳಿಗೆ ಗಂಟೆಮೂಟೆ ಕಟ್ಟಿಸಿದ್ದು ಯಾಕೆ? ನೀವು ಒಕ್ಕಲಿಗ ವಿರೋಧಿ ಅಲ್ಲವೇ? ಎಂದು ಸಚಿವ ಸುಧಾಕರ್‌ ಹೇಳಿಕೆಗೆ ತಿರುಗೇಟು ನೀಡಿದರು.

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ