ಸಂಭ್ರಮದ ಕೊಟ್ಟೂರು ಸ್ವಾಮಿ ರಥೋತ್ಸವ: ದೇವದಾಸಿಯರಿಂದ ಆರತಿ, 6-7 ಲಕ್ಷ ಭಕ್ತರು ಭಾಗಿ

By Kannadaprabha News  |  First Published Feb 19, 2020, 12:51 PM IST

ವೈಭವದ ಕೊಟ್ಟೂರು ಸ್ವಾಮಿ ರಥೋತ್ಸವ ಗೋಧೂಳಿ ಸಮಯದಲ್ಲಿ ಜಾತ್ರೆಗೆ ಚಾಲನೆ| ಭಕ್ತರಿಂದ ‘ಕೊಟ್ಟೂರೇಶ್ವರ ಮಹಾರಾಜ್ ಕೀ ಜೈ’ ಎಂಬ ಉದ್ಘೋಷ| 70 ಅಡಿ ಎತ್ತರದ ರಥೋತ್ಸವ ರಾಜಗಾಂಭೀರ್ಯದೊಂದಿಗೆ ತೇರು ಬಯಲಿನಲ್ಲಿ ಸಾಗಿತು|


ಜಿ.ಸೋಮಶೇಖರ 

ಕೊಟ್ಟೂರು(ಫೆ.19): ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಕೊಟ್ಟೂರೇಶ್ವರ ಸ್ವಾಮಿಯ ಮಹಾರಥೋತ್ಸವ ಶ್ರದ್ಧಾಭಕ್ತಿಯಿಂದ ಮಂಗಳವಾರ ಸಂಜೆ ನೆರವೇರಿದೆ. 

Tap to resize

Latest Videos

ಆಗಸದಲ್ಲಿ ಸೂರ್ಯ ಮುಳುಗುವ ಹೊತ್ತಿಗೆ ಇತ್ತ ರಥೋತ್ಸವವು ಜನಸಾಗರದ ಮಧ್ಯೆ ಗೋಧೂಳಿ ಸಮಯದ ಸಂಜೆ 5 ಗಂಟೆಗೆ ಚಾಲನೆ ದೊರೆಯಿತು. ರಾಜ್ಯದ ಪ್ರಸಿದ್ಧ ರಥೋತ್ಸವಗಳಲ್ಲಿ ತನ್ನದೇ ಆದ ಹಿರಿಮೆ-ಗರಿಮೆಯೊಂದಿಗೆ ಶ್ರೇಷ್ಠತೆಯನ್ನು ಪಡೆದಿರುವ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಪ್ರಾರಂಭಗೊಳ್ಳುತ್ತಿದ್ದಂತೆಯೇ ಲಕ್ಷಾಂತರ ಭಕ್ತರು ‘ಕೊಟ್ಟೂರೇಶ್ವರ ಮಹಾರಾಜ್ ಕೀ ಜೈ’ ಎಂಬ ಉದ್ಘೋಷ ಮಾಡಿದರು. 

ಕೊಟ್ಟೂರೇಶ್ವರ ಜಾತ್ರೆ: ಹರಿಜನ ದೇವದಾಸಿ ಯುವತಿಯಿಂದ 5 ದಿನ ಉಪವಾಸ

ಎಂದಿನಂತೆ ಮೂಲಾ ನಕ್ಷತ್ರವಿರುವ ಘಳಿಗೆಯಲ್ಲಿ 70 ಅಡಿ ಎತ್ತರದ ರಥೋತ್ಸವ ರಾಜಗಾಂಭೀರ್ಯದೊಂದಿಗೆ ತೇರು ಬಯಲಿನಲ್ಲಿ ಸಾಗಿತು. ಇದಕ್ಕೂ ಮೊದಲು ಶ್ರೀ ಸ್ವಾಮಿಯನ್ನು ಮಧ್ಯಾಹ್ನದ ಪೂಜಾ ಕೈಂಕರ್ಯದ ನಂತರ ಮೂಲ ಹಿರೇಮಠದಿಂದ ಧರ್ಮಕರ್ತ ಮತ್ತು ಪೂಜಾ ಬಳಗದವರು ಸಕಲ ಬಿರುದಾವಳಿಗಳೊಂದಿಗೆ ಹೊರ ತಂದು ಬೆಳ್ಳಿ ಪಲ್ಲಕ್ಕಿಯಲ್ಲಿ ಆಸೀನಪಡಿಸಿ ಸಂಭ್ರಮದ ಮೆರವಣಿಗೆ ಕೈಗೊಂಡರು. 

ದೇವದಾಸಿಯರಿಂದ ಆರತಿ: 

ಆಕರ್ಷಕ ಸಮಾಳ, ಲಯಬದ್ಧ ನಂದಿಕೋಲು ಕುಣಿತದ ನಿನಾದದೊಂದಿಗೆ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ಗಾಂಧಿ ವೃತ್ತದ ಬಳಿ ಬರುತ್ತಿದ್ದಂತೆ ಶ್ರೀಸ್ವಾಮಿಗೆ ಆರತಿ ಬೆಳಗುವ ಕಾರಣಕ್ಕಾಗಿ ಕಳೆದ 5 ದಿನಗಳಿಂದ ಹರಕೆ ಹೊತ್ತು ಉಪವಾಸ ವ್ರತ ಕೈಗೊಂಡಿದ್ದ ದಲಿತ ದೇವದಾಸಿ ದುರ್ಗಮ್ಮ ಮತ್ತು ಊಡಸಲಮ್ಮ ಶ್ರೀಸ್ವಾಮಿಗೆ ಕಳಸದೊಂದಿಗೆ ಧೂಪದಾರತಿಯನ್ನು ಬೆಳಗಿದರು. ನಂತರ ಪಲ್ಲಕ್ಕಿ ಉತ್ಸವ ತೇರು ಬಜಾರ ಮೂಲಕ ಸಾಗಿ ತೇರು ಬಯಲು ತಲುಪುತ್ತಿದ್ದಂತೆಯೇ ರಥದ ಸುತ್ತಲೂ ಧರ್ಮಕರ್ತ ಬಳಗ ಸ್ವಾಮಿಯ ಮೂಲ ಮೂರ್ತಿಯೊಂದಿಗೆ 5 ಸುತ್ತು ಪ್ರದಕ್ಷಿಣೆ ಹಾಕಿ ನಂತರ ರಥದ ಒಳಗೆ ಸ್ವಾಮಿಯನ್ನು ಏಣಿಗೆಯ ಮೂಲಕ ಕೊಂಡೊಯ್ದರು. ಈ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡರು. ರಥೋತ್ಸವದಲ್ಲಿ ಸುಮಾರು 6 ರಿಂದ 7 ಲಕ್ಷ ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವದ ಸಂದರ್ಭದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಶಾಸಕ ಭೀಮಾನಾಯ್ಕ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. 

ವಿದ್ಯುತ್ ಆಘಾತ:

ಮಧ್ಯಾಹ್ನ 2.45 ರ ವೇಳೆಗೆ ಇಲ್ಲಿನ ತೇರು ಬಯಲು ಬಸವಣ್ಣ ದೇವಸ್ಥಾನದ ಮನೆಯ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಮುಟ್ಟಿದ ವ್ಯಕ್ತಿಗೆ ಹಠಾತ್ತನೆ ವಿದ್ಯುತ್ ತಗುಲಿದ್ದರ ಪರಿಣಾಮ ಅಂಬ್ಯುಲೆನ್ಸ್ ಮೂಲಕ ಆತನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕೊಂಡೊಯ್ದರು. ವ್ಯಕ್ತಿ ಬಿಳ್ಚೋಡು ಬಳಿಯ ಕೆರನಹಳ್ಳಿ ಗ್ರಾಮದ ಕೊಟ್ರೇಶ ಎನ್ನಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದನೆಂದು ಮಾಹಿತಿ ಲಭ್ಯವಾಗಿದೆ.

ಹೂವಿನಹಡಗಲಿ: ಫೆ. 18ರಿಂದ ಪುಣ್ಯ ಕ್ಷೇತ್ರ ಕುರುವತ್ತಿ ಬಸವೇಶ್ವರ ಜಾತ್ರೆ

ಹರಿದ ಮಿಣಿ (ಹಗ್ಗ) ರಥೋತ್ಸವದ ಮಿಣಿ (ಹಗ್ಗ) ಎಳೆಯಲು ಚಾಲನೆ ದೊರಕುತ್ತಿದ್ದಂತೆ ನೆರೆದಿದ್ದ ಅಷ್ಟೂ ಜನ ತಾವು ಮಿಣಿ (ಹಗ್ಗ) ಎಳೆಯಲು ಮುಂದಾದರು. ಈ ಹಂತದಲ್ಲಿ ನೂಕು ನುಗ್ಗಲು ಉಂಟಾಯಿತು. ಬಳಿಕ ಸಮಾಧಾನ ಚಿತ್ತದಿಂದ ರಥೋತ್ಸವ ಸಂಪನ್ನವಾಗಲು ಭಕ್ತ ಗಣ ಮುಂದಾಯಿತು. ರಥೋತ್ಸವ ಸಾಂಗವಾಗಿ ನೆರವೇರಿ ವಾಪಾಸ್ ತೇರು ಬಜಾರ್‌ಗೆ ತಲುಪುತ್ತಿದ್ದಂತೆ ರಥಕ್ಕೆ ಕಟ್ಟಿದ ಮಿಣಿ (ಹಗ್ಗ) ಜನರ ಬಿಗಿ ಎಳೆತದಿಂದ ಹರಿದು ಹೋಯಿತು. 

ಸುಮಾರು ಅರ್ಧ ಗಂಟೆ ಬಳಿಕ ಧಾರ್ಮಿಕದತ್ತಿ ಇಲಾಖೆ ಪರ್ಯಾಯವಾಗಿ ತಂದಿರಿಸಿಕೊಂಡಿದ್ದ ಪ್ಲಾಸ್ಟಿಕ್ ಮಿಣಿಯನ್ನು ರಥಕ್ಕೆ ಕಟ್ಟಿ ಎಳೆಯಲು ಅನುವು ಮಾಡಿಕೊಟ್ಟಿತು. ಇದರ ಪರಿಣಾಮ ತೇರು ಬಜಾರುದ್ದಕ್ಕೂ ಪುನಃ ಸಾಂಗವಾಗಿ ಬಂದು ಮೂರ‌್ಕಲ್ ಮಠದ ಎದುರಿಗಿರುವ ರಸ್ತೆ ಪಕ್ಕದ ಖಾಯಂ ನಿಲುಗಡೆ ತಾಣಕ್ಕೆ ತಲುಪಿತು. ರಥ ನಿಲುಗಡೆಗೊಳ್ಳುತ್ತಿದ್ದಂತೆ ಆಕರ್ಷಕ ಪಟಾಕಿಗಳನ್ನು ಭಕ್ತರು ಸಿಡಿಸಿ ಸಂಭ್ರಮಿಸಿದರು.
 

click me!