
ಕೊಪ್ಪಳ (ಅ.05): ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಎರಡು ತಿಂಗಳ ಹಿಂದೆ ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ಬಸವರಾಜ್ ರೆಡ್ಡಿ ಮಾದಿನಾಳ ಸಾವಿನ ಪ್ರಕರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ದೂರು ದಾಖಲಾಗಿದ್ದು, ಪೊಲೀಸರ ಕಾರ್ಯವೈಖರಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಆಗಸ್ಟ್ 15 ರಂದು ಬಸವರಾಜ್ ರೆಡ್ಡಿ ವಿಷ ಸೇವನೆ ಮಾಡಿ, ಅಸ್ವಸ್ಥರಾಗಿದ್ದು, ಮರುದಿನ (ಆ.16) ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದರು. ಈ ದುರಂತದ ಬಳಿಕ ಕನಕಗಿರಿ ಪೊಲೀಸ್ ಠಾಣೆ ಎದುರು ದೊಡ್ಡ ಮಟ್ಟದ ಹೈಡ್ರಾಮಾ ನಡೆದಿತ್ತು. ಮೃತನ ಸಂಬಂಧಿಕರು ಠಾಣೆಯ ಮುಂದೆ ಜಮಾಯಿಸಿ, 'ಕಿರುಕುಳ ಮತ್ತು ಪೊಲೀಸರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ' ಎಂದು ಆರೋಪಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ಬಳ್ಳಾರಿ ವಲಯದ ಐಜಿಪಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಘಟನೆ ನಡೆದು ಎರಡು ತಿಂಗಳು ಕಳೆಯುತ್ತಿರುವಾಗ, ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಹುಸೇನ್ ಸಾಬ್ ಬಿಳಿಕುದರೆ ಎಂಬುವವರು ಮೃತ ಬಸವರಾಜ್ ರೆಡ್ಡಿ ಅವರ ಪತ್ನಿ ರಾಧಿಕಾ ಸೇರಿದಂತೆ ಒಟ್ಟು 25 ಜನರ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 'ಆಗಸ್ಟ್ 16 ರಂದು ಬಸವರಾಜ್ ಸಾವಿಗೆ ನಾವೇ ಪ್ರಚೋದನೆ ನೀಡಿದ್ದೇವೆ ಎಂದು ಆರೋಪಿಸಿ, 25 ಜನರ ಗುಂಪು ನಮ್ಮ ಮನೆಗೆ ನುಗ್ಗಿ ದಾಂಧಲೆ ನಡೆಸಿದೆ. ಮನೆಯಲ್ಲಿದ್ದ ಸುಮಾರು 16 ಲಕ್ಷ ರೂ. ನಗದು ಹಾಗೂ ಹತ್ತೂವರೆ ತೊಲೆ ಬಂಗಾರವನ್ನು ದೋಚಿಕೊಂಡು ಹೋಗಿದ್ದಾರೆ. ಮನೆ ಧ್ವಂಸ ಮಾಡುವಾಗ ಸಂಬಂಧಿಕರೇ ವಿಡಿಯೋ ಮಾಡಿದ್ದಾರೆ' ಎಂದು ಹುಸೇನ್ ಸಾಬ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸೆಪ್ಟೆಂಬರ್ 26ರಂದು ಹಿರಿಯರ ಜೊತೆ ಚರ್ಚೆ ನಡೆಸಿ, ಅಕ್ಟೋಬರ್ 3ರಂದು ಈ ದೂರು ನೀಡಲಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಬಿಎನ್‌ಎಸ್ (BNS) 2023ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತನ ಪತ್ನಿ ಹಾಗೂ ಸಂಬಂಧಿಕರ ಮೇಲೆ ದೂರು ದಾಖಲಾಗುತ್ತಿದ್ದಂತೆ ಕೆರಳಿದ ಬಸವರಾಜ್ ರೆಡ್ಡಿ ಕಡೆಯವರು ಕನಕಗಿರಿ ಠಾಣೆಗೆ ಆಗಮಿಸಿ ಆಕ್ರೋಶ ಹೊರಹಾಕಿದ್ದಾರೆ. "ನಾವು ದೂರು ನೀಡಲು ಬಂದಾಗ ಮೂರು ದಿನಗಳ ಕಾಲ ಅಲೆದಾಡಿಸಿದ್ರಿ, ಆದರೆ ಅವರ ದೂರನ್ನು ಕೇವಲ 20 ನಿಮಿಷದಲ್ಲಿ ದಾಖಲಿಸಿಕೊಂಡಿದ್ದೀರಿ, ಇದ್ಯಾವ ನ್ಯಾಯ?' ಎಂದು ಇನ್ಸ್‌ಪೆಕ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಇನ್ಸ್‌ಪೆಕ್ಟರ್, "ವಾದ-ವಿವಾದ ಬೇಡ, ಕಾನೂನು ಎಲ್ಲರಿಗೂ ಒಂದೇ. ಯಾರಿಗೂ ಅನ್ಯಾಯವಾಗಿಲ್ಲ, ನೀವೂ ದೂರು ಕೊಡಿ' ಎಂದು ಉತ್ತರಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಪೊಲೀಸರ ದೊಡ್ಡ ಎಡವಟ್ಟೊಂದು ಬಯಲಾಗಿದೆ. ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆರೋಪಿ ನಂಬರ್ 23 (A-23) ಆಗಿ ಪಾಲಾಕ್ಷ ರೆಡ್ಡಿ ಎಂಬುವವರ ಹೆಸರನ್ನು ಉಲ್ಲೇಖಿಸಲಾಗಿದೆ. ಆದರೆ, ಅಚ್ಚರಿಯ ವಿಚಾರವೆಂದರೆ ಈ ಪಾಲಾಕ್ಷ ರೆಡ್ಡಿ ಅವರು ಮೃತಪಟ್ಟು ಐದು ವರ್ಷಗಳೇ ಕಳೆದಿವೆ! ಇಹಲೋಕ ತ್ಯಜಿಸಿದ ವ್ಯಕ್ತಿಯ ಮೇಲೆಯೇ ಪ್ರಕರಣ ದಾಖಲಿಸಿರುವುದು ಕನಕಗಿರಿ ಪೊಲೀಸರ ತನಿಖಾ ವೈಖರಿಯ ಬಗ್ಗೆ ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ.