ಕ್ಯಾನ್ಸರ್ ಗೆದ್ದವಳಿಗೆ ಸರ್ಕಾರಿ ಶಾಲೆ ಪ್ರವೇಶ ನಿರಾಕರಣೆ!| ಚಿಕಿತ್ಸೆ ಪಡೆದು ಶಾಲೆಗೆ ಮರಳಿದಾಗ ಸೀಟಿಲ್ಲ ಎಂದ ಮುಖ್ಯ ಶಿಕ್ಷಕ| ಡಿಡಿಪಿಐ ಸೂಚನೆಗೂ ಕೊಪ್ಪಳ ಶಿಕ್ಷಕನಿಂದ ಮನ್ನಣೆ ಇಲ್ಲ
ಸೋಮರಡ್ಡಿ ಅಳವಂಡಿ
ಕೊಪ್ಪಳ[ಸೆ.13]: ಅಕಾಲಿಕವಾಗಿ ಎರಗಿದ ಕ್ಯಾನ್ಸರ್ ರೋಗವನ್ನು ಕಠಿಣ ಚಿಕಿತ್ಸೆ ಮೂಲಕ ಗೆದ್ದು ಮರುಜನ್ಮ ಪಡೆದ ಬಾಲಕಿಗೆ ನಮ್ಮ ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಅಮಾನವೀಯತೆಯನ್ನು ಮಾತ್ರ ಗೆಲ್ಲಲಾಗುತ್ತಿಲ್ಲ. ಮಾರಣಾಂತಿಕ ರೋಗದಿಂದ ಜೀವ ಉಳಿಸಿಕೊಂಡರೂ ತಾನು ಓದುತ್ತಿದ್ದ ಟಣಕನಕಲ್ ಗ್ರಾಮದ ಸರ್ಕಾರಿ ಆದರ್ಶ ಶಾಲೆಯಲ್ಲಿ ಮಾತ್ರ ಈ ಬಾಲಕಿಗೆ ಓದು ಮುಂದುವರಿಸಲು ಅವಕಾಶ ಸಿಗುತ್ತಿಲ್ಲ. ಮಾನವೀಯತೆ ನೆಲೆಯಲ್ಲಿ ಬಾಲಕಿಗೆ ಶಿಕ್ಷಣ ಮುಂದುವರಿಸಲು ಅವಕಾಶವಿದ್ದರೂ ಮುಖ್ಯಶಿಕ್ಷಕರು ಮಾತ್ರ ಕೇಳುತ್ತಿಲ್ಲ!
ಹೌದು, ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿರುವುದು ಕೊಪ್ಪಳ ಜಿಲ್ಲೆಯಲ್ಲಿ. ಈಕೆ ಜಾಣ ವಿದ್ಯಾರ್ಥಿ. ಸಹಪಾಠಿಗಳ ಅಚ್ಚುಮೆಚ್ಚಿನ ಗೆಳತಿ. ಮನೆಯವರ ಇಷ್ಟದ ಮಗಳು. ಆದರೆ, 8ನೇ ತರಗತಿ ಓದುತ್ತಿದ್ದಾಗ ಈಕೆಗೆ ಇದ್ದಕ್ಕಿದ್ದಂತೆ ಬ್ಲಡ್ ಕ್ಯಾನ್ಸರ್ ಆವರಿಸಿದೆ. ಇದರಿಂದ ಶಾಲೆಗೆ ಗೈರಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಕಠಿಣ ಚಿಕಿತ್ಸೆ ಪಡೆದು, ಗುಣಮುಖವಾಗಿ ಓದುವ ಆಸೆಯಿಂದ ಮತ್ತೆ ಶಾಲೆಗೆ ಮರಳಿದ ಈ ಬಾಲಕಿಯನ್ನು ಶಾಲೆ ಮುಖ್ಯಶಿಕ್ಷಕ ಎ.ಕೆ. ತುಪ್ಪದ ಎಂಬುವರು ಮಾತ್ರ ನಿಷ್ಕರುಣೆಯಿಂದ ಮನೆಗೆ ಕಳುಹಿಸಿದ್ದಾರೆ. ಬ್ಲಡ್ ಕ್ಯಾನ್ಸರ್‌ನಿಂದ ನೊಂದಿರುವ ಈ ವಿದ್ಯಾರ್ಥಿನಿಗೆ ಮುಖ್ಯಶಿಕ್ಷಕರ ಈ ವರ್ತನೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಆಗಿದ್ದೇನು?:
ಟಣಕನಕಲ್ ಆದರ್ಶ ಶಾಲೆಯಲ್ಲಿ ಬಾಲಕಿ 8ನೇ ತರಗತಿ ಓದುತ್ತಿದ್ದಳು. ಮೊದಲ ಟೆಸ್ಟ್ ಸೇರಿ ಅರ್ಧ ವಾರ್ಷಿಕ ಪರೀಕ್ಷೆ ಮುಗಿದ ಮೇಲೆ ಇದ್ದಕ್ಕಿದ್ದಂತೆ ಈಕೆಗೆ ಸುಸ್ತು ಆವರಿಸಲು ಶುರುವಾಗಿದೆ. ಪಾಲಕರು ವೈದ್ಯರ ಬಳಿ ಕರೆದುಕೊಂಡು ಹೋದಾಗ ಬ್ಲಡ್ ಕ್ಯಾನ್ಸರ್ ಆಗಿರುವುದು ಗೊತ್ತಾಗಿದೆ. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ, ಸಕಾಲಕ್ಕೆ ಚಿಕಿತ್ಸೆ ಕೊಡಿಸಿದ್ದರಿಂದ ಆಕೆ ಈಗ ಗುಣಮುಖವಾಗಿದ್ದಾಳೆ. ಈ ವೇಳೆ ಶಾಲೆಗೆ ನಾಲ್ಕಾರು ತಿಂಗಳು ಗೈರಾಗಿದ್ದಾಳೆ. ಇದೆಲ್ಲವನ್ನು ಪಾಲಕರು ಆಗಾಗ ಶಾಲಾ ಮುಖ್ಯ ಶಿಕ್ಷಕರ ಗಮನಕ್ಕೂ ತಂದಿದ್ದಾರೆ. ಚಿಕಿತ್ಸೆ ಮುಗಿಸಿಕೊಂಡು ಬನ್ನಿ, ಶಾಲೆಗೆ ಸೇರಿಸಿಕೊಳ್ಳುತ್ತೇನೆ ಎಂದು ಮುಖ್ಯಶಿಕ್ಷಕರೂ ಭರವಸೆ ನೀಡಿದ್ದರು. ಸರ್ಕಾರದ ನಿಯಮಾವಳಿ ಪ್ರಕಾರ ಅನಾರೋಗ್ಯಕ್ಕೆ ತುತ್ತಾದ ವಿದ್ಯಾರ್ಥಿಗಳಿಗೆ ವಿನಾಯತಿ ಮೇಲೆ ಪ್ರವೇಶ ನೀಡುವುದಕ್ಕೆ ಅವಕಾಶವೂ ಇದೆ. ಪ್ರತ್ಯೇಕವಾಗಿ ಪರೀಕ್ಷೆ ಬರೆಸಿಕೊಂಡು, ಪಾಸಾದರೆ ಮುಂದಿನ ತರಗತಿಗೆ ಕಳುಹಿಸಲು ಅವಕಾಶವೂ ಇದೆ. ಹೀಗಾಗಿ ರೋಗದಿಂದ ಮುಕ್ತವಾದ ಬಾಲಕಿ ಪಾಲಕರೊಂದಿಗೆ ಹತ್ತಾರು ಬಾರಿ ಶಾಲೆಗೆ ಹೋಗಿದ್ದಾಳೆ. ಆದರೆ, ಮುಖ್ಯಶಿಕ್ಷಕರು ಮಾತ್ರ ಈಗಾಗಲೇ ಸೀಟು ಭರ್ತಿ ಮಾಡಿಕೊಂಡಿರುವುದರಿಂದ ಪ್ರವೇಶ ನೀಡುವುದು ಅಸಾಧ್ಯ ಎನ್ನುತ್ತಿದ್ದಾರೆ.
ಡಿಡಿಪಿಐ ಅಮಿತಾ ಯರಗೋಳಕರ ಅವರನ್ನು ಈ ಸಂಬಂಧ ಭೇಟಿಯಾದಾಗ ಅವರು ‘ಪ್ರವೇಶ ನಿರಾಕರಿಸಲು ಸಾಧ್ಯವಿಲ್ಲ, ಪ್ರವೇಶ ಕೊಡಿ’ ಎಂದು ಮುಖ್ಯಶಿಕ್ಷಕರಿಗೆ ಸೂಚಿಸಿದ್ದಾರೆ. ಆದರೂ ಮುಖ್ಯ ಶಿಕ್ಷಕರು ಮಾತ್ರ ಕ್ಯಾರೇ ಎಂದಿಲ್ಲ. ‘ಆಯುಕ್ತರಿಂದ ನಮಗೆ ಸೂಚನೆ ಬಂದರೆ ಮಾತ್ರ ಪ್ರವೇಶ ನೀಡಬಹುದು’ ಎನ್ನುತ್ತಿದ್ದಾರೆ. ಇದರಿಂದ ಬಾಲಕಿ ಶಿಕ್ಷಣದಿಂದ ವಂಚಿತವಾಗಿ ಮನೆಯಲ್ಲೇ ಕಾಲಕಳೆಯುವಂತಾಗಿದೆ.
ಶಿಕ್ಷಣ ಸಚಿವರು ಮಧ್ಯಪ್ರವೇಶಿಸುವರೇ?
ಬಾಲಕಿಗೆ ಕಲಿಕೆ ಮೇಲೆ ಆಸಕ್ತಿ ಇದೆ. ಈಗಾಗಲೇ ತನ್ನದಲ್ಲದ ತಪ್ಪಿಗೆ ಬಾಲಕಿ ಸಾಕಷ್ಟುನೋವನುಭವಿಸಿದ್ದಾಳೆ. ಇಂಥ ಪರಿಸ್ಥಿತಿಯಲ್ಲಿ ಶಿಕ್ಷಣದಲ್ಲೂ ಹಿಂದುಳಿಯುವಂತೆ ಮಾಡಿ ಬಾಲಕಿಗೆ ಇನ್ನಷ್ಟುನೋವಾಗುವುದನ್ನು ತಡೆಯಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಲಿ ಎಂದು ಬಾಲಕಿಯನ್ನು ಬಲ್ಲವರು ಮನವಿ ಮಾಡಿದ್ದಾರೆ.