ತುಂಗಭದ್ರಾ ಕಾಲುವೆಯಲ್ಲಿ ಅಕ್ರಮದ ಆಟ: 10ಕ್ಕೂ ಹೆಚ್ಚು ಪೈಪ್‌ಗಳನ್ನು ಕಿತ್ತೊಗೆದ ಸಿಬ್ಬಂದಿಗಳು

Published : Sep 03, 2026, 08:00 PM IST
Gangavathi Illegal Pipeline

ಸಾರಾಂಶ

ಗಂಗಾವತಿ ಭಾಗಕ್ಕೆ ಮಾತ್ರ ಸೀಮಿತವಾಗದೆ ಸೋಮನಾಳ, ಮೈಲಾಪುರ, ಚಿಕ್ಕಡಂಕನಕಲ್ ಹಾಗೂ ಕಾರಟಗಿ ಭಾಗಗಳಲ್ಲಿಯೂ ಕೆಲ ಪ್ರಭಾವಿ ರೈತರು ಕಾಲುವೆಗೆ ಅಕ್ರಮವಾಗಿ ಪೈಪ್‌ಗಳನ್ನು ಜೋಡಿಸಿಕೊಂಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಗಂಗಾವತಿ (ಸೆ.03): ತುಂಗಭದ್ರಾ ಎಡದಂಡೆ ಕಾಲುವೆಯಿಂದ ಅಕ್ರಮವಾಗಿ ನೀರು ಪಡೆಯಲು ಪ್ರಭಾವಿ ರೈತರು ಅಳವಡಿಸಿದ್ದ ಪೈಪ್‌ಗಳ ವಿರುದ್ಧ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತ್ವರಿತ ಕಾರ್ಯಾಚರಣೆ ನಡೆಸಿದ್ದಾರೆ. ಕಾಲುವೆಗೆ ರಂದ್ರ ಕೊರೆದು ಅಳವಡಿಸಿದ್ದ ಪೈಪ್‌ಗಳನ್ನು ಜೆಸಿಬಿ ಮೂಲಕ ಕಿತ್ತೊಗೆದು ತೆರವುಗೊಳಿಸಲಾಗಿದೆ.

ತಾಲೂಕಿನ ದಾಸನಾಳ ವ್ಯಾಪ್ತಿಯ ತುಂಗಭದ್ರಾ ಕಾಲುವೆಯ ನಂ. 20ರಿಂದ 24ನೇ ಮೈಲ್‌ವರೆಗೆ ಕೆಲ ರೈತರು ಕಾಲುವೆಯೊಳಗೆ ರಂದ್ರ ಕೊರೆದು ತಮ್ಮ ಜಮೀನುಗಳಿಗೆ ಪೈಪ್‌ಗಳನ್ನು ಅಳವಡಿಸಿಕೊಂಡು ನೀರು ಪಡೆಯುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಜೆಸಿಬಿ ಮೂಲಕ ಅಕ್ರಮ ಪೈಪ್‌ಗಳನ್ನು ತೆರವುಗೊಳಿಸಿದ್ದಾರೆ. ಸುಮಾರು 10ಕ್ಕೂ ಹೆಚ್ಚು ರೈತರ ಜಮೀನುಗಳಿಗೆ ಅಳವಡಿಸಿದ್ದ ಪೈಪ್‌ಗಳನ್ನು ಕಾರ್ಯಾಚರಣೆ ವೇಳೆ ಕಿತ್ತೊಗೆಯಲಾಗಿದೆ.

ಕೆಳಭಾಗದ ರೈತರಿಗೆ ನೀರಿನ ಸಂಕಷ್ಟ

ಕಾಲುವೆಗೆ ನೀರು ಹರಿಸಿ ಸುಮಾರು 20 ದಿನ ಕಳೆದರೂ ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಮುನಿರಾಬಾದ್ 0 ಮೈಲ್‌ನಿಂದ ರಾಯಚೂರು ಭಾಗದವರೆಗೆ ಸಮರ್ಪಕ ನೀರು ತಲುಪದ ಹಿನ್ನೆಲೆಯಲ್ಲಿ ಹಲವು ರೈತರು ಇನ್ನೂ ಭತ್ತ ನಾಟಿ ಮಾಡದೆ ನೀರಿಗಾಗಿ ಕಾಯುವಂತಾಗಿದೆ. ಉಪ ಕಾಲುವೆಗಳಿಗೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಕೆಳಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲವು ಭಾಗಗಳಲ್ಲೂ ಅಕ್ರಮ ಪೈಪ್‌ಗಳ ಆರೋಪ

ಗಂಗಾವತಿ ಭಾಗಕ್ಕೆ ಮಾತ್ರ ಸೀಮಿತವಾಗದೆ ಸೋಮನಾಳ, ಮೈಲಾಪುರ, ಚಿಕ್ಕಡಂಕನಕಲ್ ಹಾಗೂ ಕಾರಟಗಿ ಭಾಗಗಳಲ್ಲಿಯೂ ಕೆಲ ಪ್ರಭಾವಿ ರೈತರು ಕಾಲುವೆಗೆ ಅಕ್ರಮವಾಗಿ ಪೈಪ್‌ಗಳನ್ನು ಜೋಡಿಸಿಕೊಂಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಈ ಅಕ್ರಮ ಪೈಪ್‌ಗಳ ಮೂಲಕ ನೀರನ್ನು ತಿರುಗಿಸಿಕೊಳ್ಳುವುದರಿಂದ ಕೆಳಭಾಗದ ರೈತರಿಗೆ ನೀರು ತಲುಪುವಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ರೈತರು ದೂರಿದ್ದಾರೆ.

ಮತ್ತೆ ಪೈಪ್ ಅಳವಡಿಸುವ ಆತಂಕ

ಈ ಹಿಂದೆ ಅಕ್ರಮವಾಗಿ ಪೈಪ್‌ಗಳನ್ನು ಅಳವಡಿಸಿಕೊಂಡವರ ವಿರುದ್ಧ ಜಲಸಂಪನ್ಮೂಲ ಇಲಾಖೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದರ ಜತೆಗೆ, ನೀರು ಎತ್ತುವ ಯಂತ್ರಗಳನ್ನೂ ಜಪ್ತಿ ಮಾಡಿತ್ತು. ಆದರೆ ಈ ಬಾರಿ ಕೇವಲ ಪೈಪ್‌ಗಳನ್ನು ತೆರವುಗೊಳಿಸಿ ಕಾರ್ಯಾಚರಣೆ ಮುಗಿಸಿರುವುದರಿಂದ, ಮತ್ತೆ ಅದೇ ಸ್ಥಳಗಳಲ್ಲಿ ಪೈಪ್‌ಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕೆಳಭಾಗದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಅಕ್ರಮ ನೀರು ಬಳಕೆಗೆ ಕಡಿವಾಣ ಹಾಕಿ, ಕಾಲುವೆಯ ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಜಲಸಂಪನ್ಮೂಲ ಇಲಾಖೆ ಎಸ್‌ಇ ಶ್ರೀನಿವಾಸ ಮಲ್ಲಿಗೆವಾಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಅಮರೇಶ ಕಂಪ್ಲಿ ಸೇರಿದಂತೆ ಜೆಸ್ಕಾಂ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಮನೆಯ ಬೆಡ್‌ರೂಂನಲ್ಲಿ 50 ಅಡಿ ಗುಂಡಿ: ಒಂದೂವರೆ ತಿಂಗಳ ‘ನಿಧಿ ಶೋಧ’ದ ರಹಸ್ಯ ಬಯಲು!
ಸಮೋಸಾ ಪ್ರಿಯರೇ ಎಚ್ಚರ : ಬೆಂಗಳೂರಿಗೆ ಸಪ್ಲೈ ಆಗುವ ಈ ಘಟಕ ನೋಡಿದ್ರೆ ಜೀವನದಲ್ಲಿ ತಿನ್ನೋದೇ ಇಲ್ಲ