'ಬೇರೆ ಧರ್ಮದವರಿಗೆ ತೊಂದರೆ ಕೊಡಬೇಡಿ': ಗಣೇಶ ಹಬ್ಬಕ್ಕೂ ಮುನ್ನ ಎಸ್‌ಪಿ ಸಾಹಿಲ್ ಖಡಕ್ ಸೂಚನೆ!

Published : Sep 11, 2026, 09:36 PM ISTUpdated : Sep 11, 2026, 09:47 PM IST
Gangavathi SP Sahil Bagla

ಸಾರಾಂಶ

ಗಂಗಾವತಿಯಲ್ಲಿ 150ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ. ಗಣೇಶ ಹಬ್ಬದ ಮುನ್ನ ಎಸ್‌ಪಿ ಸಾಹಿಲ್ ಬಾಗ್ಲಾ ಸೌಹಾರ್ದತೆ ಕಾಪಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ. ಜೊತೆಗೆ ಹಬ್ಬದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು.

ರಾಮಮೂರ್ತಿ ನವಲಿ

ಗಂಗಾವತಿ (ಸೆ.11): ಗಣೇಶ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಹಾಗೂ ಸಂಭ್ರಮದಿಂದ ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಅನಗತ್ಯವಾಗಿ ಬೇರೆ ಧರ್ಮದವರಿಗೆ ತೊಂದರೆ ಉಂಟುಮಾಡುವಂತಹ ಯಾವುದೇ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಹೇಳಿದರು.

ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗಂಗಾವತಿ ನಗರದಲ್ಲಿ ಈಗಾಗಲೇ 150ಕ್ಕೂ ಹೆಚ್ಚು ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಹೀಗಾಗಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆಯುವ ಮೆರವಣಿಗೆಗಳು ಶಾಂತಿ ಹಾಗೂ ಸೌಹಾರ್ದತೆಯಿಂದ ನಡೆಯುವಂತೆ ಎಲ್ಲರೂ ಸಹಕರಿಸಬೇಕು ಎಂದರು.

ಗಣೇಶ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯಿಂದ ಕೆಲವು ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗಣೇಶ ಮಂಟಪಗಳಿಗಾಗಿ ಜೆಸ್ಕಾಂ, ಅರಣ್ಯ ಇಲಾಖೆ ಹಾಗೂ ನಗರಸಭೆಯಿಂದ ಅಗತ್ಯ ಪರವಾನಿಗೆಗಳನ್ನು ಪಡೆಯಬೇಕು ಎಂದು ಸೂಚಿಸಿದರು.

ವಿಸರ್ಜನೆ ಸಂದರ್ಭದಲ್ಲಿ ದಾಸನಾಳ ಹಾಗೂ ಕಂಪ್ಲಿ ತುಂಗಭದ್ರಾ ಸೇತುವೆ ಬಳಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಸಾರ್ವಜನಿಕರು ಹಾಗೂ ಗಣೇಶೋತ್ಸವ ಸಮಿತಿಗಳು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಎಸ್‌ಪಿ ಸಾಹಿಲ್ ಬಾಗ್ಲಾ ಮನವಿ ಮಾಡಿದರು.

ಗಣೇಶ ಹಬ್ಬ ಸಂಘಟನೆಯ ಉದ್ದೇಶವಾಗಲಿ

ಮಾಜಿ ಸಂಸದ ಶಿವರಾಮ ಗೌಡ ಮಾತನಾಡಿ, ಗಣೇಶ ಹಬ್ಬದ ಆಚರಣೆ ಸಂಘಟನೆಯ ಉದ್ದೇಶದಿಂದ ನಡೆಯಬೇಕು. ಹಬ್ಬದ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಗಂಗಾವತಿ ಭಾವೈಕ್ಯತೆಯ ನಗರವಾಗಿದೆ. ಈ ಹಿಂದೆ ಭಾವೈಕ್ಯತೆಯ ಪ್ರತೀಕವಾಗಿ ಎಂ.ಎಸ್. ಅನ್ಸಾರಿ ಅವರು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಪಾಲ್ಗೊಂಡು ಸೌಹಾರ್ದತೆ ಮೆರೆದಿರುವುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಗಣೇಶ ಮಂಟಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು, ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೂಡಲೇ ಕೈಗೊಳ್ಳಬೇಕು. ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಅಂಬ್ಯುಲೆನ್ಸ್, ಜೆಸಿಬಿ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಡಿಜೆ ಬಳಕೆಯಲ್ಲೂ ನಿಯಮಗಳನ್ನು ಪಾಲಿಸುವಂತೆ ಕ್ರಮ ಕೈಗೊಂಡು ಸೌಹಾರ್ದತೆಯಿಂದ ಹಬ್ಬ ಆಚರಿಸುವ ವಾತಾವರಣ ನಿರ್ಮಿಸಬೇಕು ಎಂದು ಅವರು ಮನವಿ ಮಾಡಿದರು.

ನಗರಸಭೆ ಮಾಜಿ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಮಾತನಾಡಿ, ಡಿಜೆ ಸೌಂಡ್‌ಗೆ ಸಂಬಂಧಿಸಿದಂತೆ ಸ್ಪಷ್ಟವಾದ ಮಾರ್ಗಸೂಚಿ ಹಾಗೂ ಘೋಷಣೆ ಮಾಡಬೇಕು. ಮೊದಲನೇ ಗಣಪತಿಗೆ ಮಾತ್ರ ಅವಕಾಶ ನೀಡಿ, ಕೊನೆಯ ಗಣಪತಿ ವಿಸರ್ಜನೆ ಮಾಡುವವರಿಗೆ ಅವಕಾಶ ನೀಡದಂತಹ ತಾರತಮ್ಯ ಮಾಡಬಾರದು. ಪರವಾನಿಗೆ ನೀಡುವಲ್ಲಿ ಯಾವುದೇ ಗೊಂದಲವಿದ್ದರೆ ಎಲ್ಲ ಗಣೇಶ ಮೂರ್ತಿಗಳ ವಿಸರ್ಜನೆಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

ಜೋಗದ ನಾರಾಯಣಪ್ಪ ನಾಯಕ ಮಾತನಾಡಿ, ಗಣೇಶ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಗಣೇಶ ಮಂಟಪಗಳಿಗೆ ಉಚಿತ ವಿದ್ಯುತ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ತಹಸೀಲ್ದಾರ್ ವಸಂತಕುಮಾರಿ, ಇಒ ರಂಗಪ್ಪರೆಡ್ಡಿ, ಇಲಿಯಾಸ್ ಖಾದ್ರಿ, ಪಿಐ ಪ್ರಕಾಶ ಯಾತನೂರು, ಸಿಪಿಐ ರಂಗಪ್ಪ, ಜೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಹಾಗೂ ಡಿವೈಎಸ್‌ಪಿ ಜಾಯಪ್ಪ ನ್ಯಾಮಗೌಡರ್ ಉಪಸ್ಥಿತರಿದ್ದರು. ವಿನಯ ಪಾಟೀಲ್, ಶರಣಪ್ಪ, ನೀಲಕಂಠ ನಾಗಶಟ್ಟಿ, ಉಸ್ಮಾನ್, ಕಾಶಿನಾಥ್ ಚಿತ್ರಗಾರ, ವಿರೂಪಾಕ್ಷಗೌಡ ನಾಯಕ, ಪಂಪಣ್ಣ ನಾಯಕ, ಎಸ್.ಎಚ್. ಮುಧೋಳ್ ಸೇರಿದಂತೆ ಹಲವು ಪ್ರಮುಖರು ಸಭೆಯಲ್ಲಿ ತಮ್ಮ ಸಲಹೆಗಳನ್ನು ನೀಡಿದರು.

PREV
Read more Articles on
click me!

Recommended Stories

Bribe: ಕಾಮಗಾರಿಗೆ 30% ಲಂಚದ ಕಮಿಷನ್ ಬೇಡಿಕೆ; ಲಂಚ ಪಡೆಯುತ್ತಿದ್ದಾಗ ಲೋಕಾ ಬಲೆಗೆ ಬಿದ್ದ RFO!
'ನಾನು ಸಿಂಪಲ್ ನನ್ನ ಪೆನ್ನು ತುಂಬಾ ಪವರ್ ಫುಲ್': ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ಬಿ.ವೀರಪ್ಪ ಗುಡುಗು