ಬಸ್ ನಿಲ್ದಾಣದ ಮುಂದೇನಿದು ಅವಾಂತರ? ಗಂಗಾವತಿಯಲ್ಲಿ ಗಲೀಜು ನೀರಿನ ನಡುವೆ ವ್ಯಾಪಾರ!

Published : Sep 21, 2026, 05:52 PM IST
Gangavathi drainage water

ಸಾರಾಂಶ

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಹಣ್ಣು-ಹಂಪಲು ವ್ಯಾಪಾರಿಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ರಾಮಮೂರ್ತಿ ನವಲಿ

ಗಂಗಾವತಿ (ಸೆ.21): ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ಚರಂಡಿ ನೀರು ತುಂಬಿ ರಸ್ತೆಯ ಮೇಲೆಯೇ ಹರಿಯುತ್ತಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಚರಂಡಿ ನೀರಿನ ಮಧ್ಯೆಯೇ ಹಣ್ಣು-ಹಂಪಲುಗಳ ಮಾರಾಟ ನಡೆಯುತ್ತಿರುವ ದೃಶ್ಯಗಳು ನಗರದ ಸ್ವಚ್ಛತೆ ಹಾಗೂ ಮೂಲಸೌಕರ್ಯದ ಬಗ್ಗೆ ಪ್ರಶ್ನೆ ಮೂಡಿಸಿವೆ. ಬಸ್ ನಿಲ್ದಾಣದ ಮುಂಭಾಗದಲ್ಲೇ ಚರಂಡಿ ತುಂಬಿ ತುಳುಕುತ್ತಿದ್ದರೂ ನಗರಸಭೆ ಈ ಸಮಸ್ಯೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಉದ್ಯಾನವನ, ಹೋಟೆಲ್‌ಗಳ ನಡುವೆ ಗಬ್ಬು ವಾಸನೆ

ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶ ಜನನಿಬಿಡವಾಗಿದ್ದು, ಇಲ್ಲಿ ಹಣ್ಣು-ಹಂಪಲುಗಳ ಮಾರಾಟ ಮಳಿಗೆಗಳು, ಹೋಟೆಲ್‌ಗಳು ಹಾಗೂ ನೆಹರು ಉದ್ಯಾನವನವಿದೆ. ಗ್ರಾಮೀಣ ಭಾಗಗಳಿಂದ ನಗರಕ್ಕೆ ಆಗಮಿಸುವ ಅನೇಕರು ಕೆಲ ಸಮಯ ಉದ್ಯಾನವನದಲ್ಲಿ ವಿಶ್ರಾಂತಿ ಪಡೆಯುವುದು ಸಾಮಾನ್ಯ. ಆದರೆ ಉದ್ಯಾನವನದ ಸುತ್ತಲೂ ಹರಿಯುತ್ತಿರುವ ಚರಂಡಿ ನೀರಿನಿಂದ ಗಬ್ಬು ವಾಸನೆ ಆವರಿಸಿದ್ದು, ವಿಶ್ರಾಂತಿಗಾಗಿ ಬರುವ ಜನರು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸ್ವಚ್ಛತೆಯ ವಿಚಾರದಲ್ಲಿ ನಗರಸಭೆಯ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಅವೈಜ್ಞಾನಿಕ ಚರಂಡಿ ನಿರ್ಮಾಣವೇ ಸಮಸ್ಯೆಗೆ ಕಾರಣ?

ನಗರದಲ್ಲಿ ಹಲವು ಕಡೆ ಅವೈಜ್ಞಾನಿಕ ರೀತಿಯಲ್ಲಿ ಚರಂಡಿಗಳನ್ನು ನಿರ್ಮಿಸಿರುವುದರಿಂದ ಮಳೆ ಹಾಗೂ ಕೊಳಚೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ನಗರೋತ್ಥಾನ ಹಾಗೂ ಅಮೃತ್ ಸಿಟಿ ಯೋಜನೆಗಳಡಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳು ನಡೆದಿದ್ದರೂ, ಕೆಲವು ಕಡೆ ಕಳಪೆ ಕಾಮಗಾರಿ ನಡೆದಿರುವುದೇ ಇಂದಿನ ಅವ್ಯವಸ್ಥೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸಮಸ್ಯೆ ಶಾಶ್ವತವಾಗಿ ಬಗೆಹರಿಯಬೇಕಿದ್ದರೂ, ಚರಂಡಿಗಳು ಮತ್ತೆ ಮತ್ತೆ ತುಂಬಿ ಹರಿಯುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ವಿರೋಧದ ನಡುವೆಯೂ ಶೌಚಾಲಯ ನಿರ್ಮಾಣ?

ಇದೇ ಪ್ರದೇಶದಲ್ಲಿ ಉದ್ಯಾನವನದ ಪಕ್ಕದಲ್ಲೇ ಶೌಚಾಲಯ ನಿರ್ಮಿಸಿರುವ ಬಗ್ಗೆಯೂ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ. ಸ್ಥಳದ ಇಕ್ಕಟ್ಟು ಹಾಗೂ ಚರಂಡಿ ನೀರು ಸರಾಗವಾಗಿ ಹರಿಯದ ಪರಿಸ್ಥಿತಿ ಇದ್ದರೂ ಇಲ್ಲಿ ಶೌಚಾಲಯ ನಿರ್ಮಿಸಿರುವುದು ಅವ್ಯವಸ್ಥೆಗೆ ಮತ್ತೊಂದು ಉದಾಹರಣೆ ಎಂದು ನಾಗರಿಕರು ದೂರಿದ್ದಾರೆ. ಇದರ ಜೊತೆಗೆ ಇದೇ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದ ನೆಟ್‌ವರ್ಕ್ ವಾಲ್ ಇದ್ದು, ಅದರ ಸುತ್ತಲೂ ನೀರು ನಿಲ್ಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಗಲೀಜು ನೀರಿನ ಮೇಲೆಯೇ ಹಣ್ಣು-ಹಂಪಲು ಮಾರಾಟ

ಬಸ್ ನಿಲ್ದಾಣದ ಮುಂಭಾಗ ಹಾಗೂ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರವೇಶದ್ವಾರದ ಬಳಿ ಚರಂಡಿ ನೀರು ರಸ್ತೆಯ ಮೇಲೆ ನಿಂತಿರುವುದರಿಂದ ಹಣ್ಣು-ಹಂಪಲು ಮಾರಾಟಗಾರರು ಅದೇ ಸ್ಥಳದಲ್ಲಿ ಕುಳಿತು ವ್ಯಾಪಾರ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಲೀಜು ನೀರಿನಲ್ಲಿ ನಡೆದುಕೊಂಡು ಹೋಗಿ ಹಣ್ಣು ಖರೀದಿಸಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ತಮ್ಮ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.

ಇನ್ನು ರಸ್ತೆ ಬದಿಯ ಗಾಡಿಗಳಲ್ಲಿ ತಿಂಡಿ-ತಿನಿಸುಗಳನ್ನು ಮಾರಾಟ ಮಾಡುವವರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಗಲೀಜು ನೀರಿನ ಮಧ್ಯೆಯೇ ನಿಂತು ಆಹಾರ ಸೇವಿಸುವಂತಾಗಿದ್ದು, ಚರಂಡಿಯ ದುರ್ವಾಸನೆಯ ನಡುವೆಯೇ ತಿನಿಸು ಸೇವಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ವಿದ್ಯಾರ್ಥಿಗಳು, ವಾಹನ ಸವಾರರಿಗೂ ಸಂಕಷ್ಟ

ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ಕೂಡ ತೊಂದರೆ ಅನುಭವಿಸುತ್ತಿದ್ದಾರೆ. ಒಂದು ಬದಿಯಲ್ಲಿ ಚರಂಡಿ ನೀರು, ಮತ್ತೊಂದು ಕಡೆ ರಸ್ತೆಯಲ್ಲಿರುವ ಗುಂಡಿ-ದಿಣ್ಣೆಗಳು ಸಂಚಾರಕ್ಕೆ ಅಡ್ಡಿಯಾಗಿವೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ರಸ್ತೆಯ ಅವ್ಯವಸ್ಥೆ ಮತ್ತು ಚರಂಡಿ ಸಮಸ್ಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ನಗರಸಭೆ ಇದೆಯೋ ಇಲ್ಲವೋ ಎಂಬಂತಾಗಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಸ್ವಚ್ಛತೆಗೆ ಆದ್ಯತೆ ನೀಡುವಂತೆ ಒತ್ತಾಯ

ಒಟ್ಟಿನಲ್ಲಿ ಗಂಗಾವತಿ ನಗರದ ಪ್ರಮುಖ ಪ್ರದೇಶದಲ್ಲೇ ಚರಂಡಿ ನೀರು ತುಂಬಿ ರಸ್ತೆಯ ಮೇಲೆ ಹರಿಯುತ್ತಿರುವುದು ನಗರದ ಸ್ವಚ್ಛತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜನನಿಬಿಡ ಪ್ರದೇಶದಲ್ಲಿ ಇಂತಹ ಪರಿಸ್ಥಿತಿ ಮುಂದುವರಿದರೆ ಸಾರ್ವಜನಿಕ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ನಗರಸಭೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಮೂಲ ಕಾರಣ ಪತ್ತೆಹಚ್ಚಿ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ಸ್ವಚ್ಛತಾ ಅಭಿಯಾನಗಳಿಗೆ ಆದ್ಯತೆ ನೀಡಲಾಗುತ್ತಿದೆ ಎನ್ನುವ ಸಂದರ್ಭದಲ್ಲಿ ನಗರದ ಪ್ರಮುಖ ಪ್ರದೇಶವೇ ಕೊಳಚೆ ನೀರಿನಿಂದ ತುಂಬಿರುವುದು ಸರಿಪಡಿಸಬೇಕಾದ ಸ್ಥಿತಿ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಚರಂಡಿ ತುಂಬಿ ನೀರು ರಸ್ತೆ ಮೇಲೆ ಬಂದಿವೆ. ಇಲ್ಲಿ ಹಣ್ಣುಗಳ ವ್ಯಾಪಾರ ಮಾಡಬೇಕೆಂದರೆ ಗಲೀಜು ನೀರಿನ ಮೇಲೆ ನಿಂತು ವ್ಯಾಪಾರ ಮಾಡುವ ಪರಿಸ್ಥಿತಿ ಒದಗಿದೆ. ಹಣ್ಣುಗಳ ಖರೀದಿಗೆ ಯಾರು ಬರುತ್ತಿಲ್ಲ. ಶೌಚಾಲಯ ಮತ್ತು ಚರಂಡಿ ನೀರು ಇದ್ದಿದ್ದರಿಂದ ವ್ಯಾಪಾರ ಕುಂಟಿತವಾಗಿದೆ.
-ಹಣ್ಣುಗಳ ವ್ಯಾಪಾರಿ

ಚರಂಡಿಯಲ್ಲಿ ಕಸ ಕಂಟಿ ಸಿಕ್ಕಿ ಹಾಕಿಕೊಂಡಿದ್ದರಿಂದ ನೀರು ಸರಳವಾಗಿ ಹೋಗಲು ಅಡ್ಡಿಯಾಗಿದೆ. ಟ್ಯಾಂಕ್‌ನ ನೀರು ಮತ್ತು ಚರಂಡಿ ನೀರು ಹೆಚ್ಚಿನ ಮಟ್ಟದಲ್ಲಿ ಬಂದಿದ್ದರಿಂದ ಚರಂಡಿ ತುಂಬಿ ರಸ್ತೆಗೆ ಹರಿದಿವೆ. ಕಸವನ್ನು ತೆರವುಗೊಳಿಸಿ ಅನುಕೂಲ ಮಾಡಿಕೊಡಲಾಗುತ್ತದೆ.
-ಶರಣಪ್ಪ, ಪರಿಸರ ಅಭಿಯಂತರರು ನಗರಸಭೆ

PREV
Read more Articles on
click me!

Recommended Stories

Hubli: ಮತ್ತೆ ಮಾರ್ಧನಿಸುತ್ತಾ ಮಹಾದಾಯಿ ಹೋರಾಟ; ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಖಡಕ್‌ ವಾರ್ನ್ ಮಾಡಿದ ರೈತ ಪಡೆ!
ಬೈಕ್ ಸವಾರ ಕಾರಿಗೆ ಡಿಕ್ಕಿ ಹೊಡೆದ; ‘ಜೆಮಿನಿಯನ್ನೇ ಲಾಯರ್’ ಮಾಡಿಕೊಂಡ ಬೆಂಗಳೂರು CEO! ಮುಂದೇನಾಯ್ತು?