ಕೊಪ್ಪಳ ರೈತರಿಗೆ ಬಂಪರ್ ಸುದ್ದಿ: ಈ ಮೂರು ಯೋಜನೆಗಳಿಂದ 2027ರ ವೇಳೆಗೆ 1 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ!

Published : Sep 16, 2026, 09:12 AM IST
Koppal 3 Projects

ಸಾರಾಂಶ

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 2027ರ ವೇಳೆಗೆ ಸಿಂಗಟಾಲೂರು, ಅಳವಂಡಿ-ಬೆಟಗೇರಿ ಹಾಗೂ ನವಲಕಲ್ ಏತ ನೀರಾವರಿ ಯೋಜನೆಗಳ ಮೂಲಕ ಒಂದು ಲಕ್ಷ ಎಕರೆಗೆ ನೀರು ಒದಗಿಸಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ತಿಳಿಸಿದ್ದಾರೆ. ಈ ಯೋಜನೆಗಳಿಂದ ಕೊಪ್ಪಳದ 9 ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ.

ಕೊಪ್ಪಳ: ಸಿಂಗಟಾಲೂರು, ಅಳವಂಡಿ-ಬೆಟಗೇರಿ ಹಾಗೂ ನವಲಕಲ್ ಮೂರು ಏತ ನೀರಾವರಿ ಯೋಜನೆಗಳ ಮೂಲಕ 2027ರ ವೇಳೆಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ ಒಂದು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯಿಂದ 9 ಸಾವಿರ ಎಕರೆ, ನವಲಕಲ್ ಏತ ನೀರಾವರಿ ಯೋಜನೆಯಿಂದ 15 ಸಾವಿರ ಎಕರೆ ಹಾಗೂ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ 78 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.

ಸಿಂಗಟಾಲೂರು ಯೋಜನೆ

ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಈ ಹಿಂದೆ 98 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಗುರಿ ಹೊಂದಲಾಗಿತ್ತು. ಆದರೆ, ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶವನ್ನು ಈಗಾಗಲೇ ಸೌರ ಹಾಗೂ ಪವನ ವಿದ್ಯುತ್ ಯೋಜನೆಗಳಿಗೆ ನೀಡಿರುವುದರಿಂದ ನೀರಾವರಿ ವ್ಯಾಪ್ತಿ ಕಡಿಮೆಯಾಗಿದೆ. ಮಧ್ಯಪ್ರದೇಶ ಮಾದರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಯೋಜನೆ ಹಾಗೂ ಕಾಲುವೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ₹519 ಕೋಟಿ ಅನುದಾನ ನೀಡಲಿದೆ ಎಂದು ತಿಳಿಸಿದರು.

ಅಳವಂಡಿ-ಬೆಟಗೇರಿ ಶೀಘ್ರ ಲೋಕಾರ್ಪಣೆ

ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯು ಕೊಪ್ಪಳ ತಾಲೂಕಿನ ಹನಕುಂಟಿ ಗ್ರಾಮದಿಂದ ಸುಮಾರು 2 ಕಿಮೀ ಅಂತರದಲ್ಲಿದೆ. ಕೃಷ್ಣಾ ಕೊಳ್ಳದ ವ್ಯಾಪ್ತಿಗೆ ಬರುವ ತುಂಗಭದ್ರಾ ನದಿಯಿಂದ ಯೋಜನೆಗೆ 0.50 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಇದರಿಂದ ಕೊಪ್ಪಳ ಜಿಲ್ಲೆಯ ವ್ಯಾಪ್ತಿಯ 9 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ.

ಯೋಜನೆಯಡಿ 1.02 ಕಿ.ಮೀ. ಉದ್ದದ ಇಂಟೇಕ್ ಕಾಲುವೆ, 16.50 ಕಿ.ಮೀ. ಉದ್ದದ ಎಂಎಸ್ ರೈಸಿಂಗ್ ಮೇನ್, 1760 ಎಚ್‌ಪಿ ಸಾಮರ್ಥ್ಯದ 2+1 ಪಂಪ್‌ಗಳು ಮತ್ತು ಮೋಟಾರ್‌ಗಳು, ಎರಡು ಡೆಲಿವರಿ ಚೇಂಬರ್‌ಗಳು, ಜಾಕ್‌ವೆಲ್ ಸಮೀಪ 33/6.6. ಕೆವಿ ಸಬ್‌ಸ್ಟೇಷನ್, 6.10 ಕಿ.ಮೀ. ಉದ್ದದ ಟ್ರಾನ್ಸ್‌ಮಿಷನ್ ಲೈನ್ ಹಾಗೂ ಟರ್ಮಿನಲ್ ಬೇ ನಿರ್ಮಿಸಲಾಗಿದೆ. ಸೆ. 10ರಂದು ಸಬ್‌ಸ್ಟೇಷನ್ ಚಾರ್ಜ್ ಮಾಡಲಾಗಿದೆ ಎಂದರು.

ಪ್ರತಿ ಪಂಪ್‌ನಿಂದ 28.28 ಕ್ಯುಸೆಕ್‌ನಂತೆ ಒಟ್ಟು 56.56 ಕ್ಯುಸೆಕ್ ನೀರನ್ನು ಹರಿಸಲಾಗುವುದು. ಜಲಾಶಯದ ನೀರಿನ ಮಟ್ಟ 1605 ಅಡಿ ಇರುವ ವರೆಗೆ ಲಭ್ಯವಿರುವ ನೀರನ್ನು ಯೋಜನೆಗೆ ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಹೆಚ್ಚುವರಿ 3 ಸಾವಿರ ಎಕರೆಗೆ ಕಾಮಗಾರಿ

ಯೋಜನೆಯಡಿ ಹೆಚ್ಚುವರಿಯಾಗಿ 3 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಕಾಮಗಾರಿಯನ್ನು ಎ.ವಿ.ಆರ್. ಕನ್‌ಸ್ಟ್ರಕ್ಷನ್‌ಗೆ ₹4.59 ಕೋಟಿಗೆ 2021ರ ಮಾ. 30ರಂದು ಒಂಬತ್ತು ತಿಂಗಳ ಅವಧಿಗೆ ವಹಿಸಲಾಗಿತ್ತು. ರೈಸಿಂಗ್ ಮೇನ್ ಕಾಮಗಾರಿ ಪೂರ್ಣಗೊಂಡಿದ್ದು, ಪಂಪ್‌ಗಳ ಅಳವಡಿಕೆ ಹಾಗೂ ಸಬ್‌ಸ್ಟೇಷನ್ ಕಾಮಗಾರಿಗಳು ಬಾಕಿ ಉಳಿದಿವೆ ಎಂದು ಹಿಟ್ನಾಳ್ ತಿಳಿಸಿದರು.

ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಪರಿಷ್ಕೃತ ಡಿಪಿಆರ್‌ನ್ನು ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಯ 105ನೇ ಸಭೆಯಲ್ಲಿ ಮಂಡಿಸಲಾಗಿದ್ದು, ₹211 ಕೋಟಿಗೆ ಅನುಮೋದನೆ ದೊರೆತಿದೆ. ಯೋಜನೆಯಡಿ 6 ಸಾವಿರ ಎಕರೆ ಜಮೀನುಗಳಿಗೆ ಒಟ್ಟು 39.78 ಕಿ.ಮೀ. ಉದ್ದದ ಮುಖ್ಯ ಹಾಗೂ ಉಪ ಕಾಲುವೆಗಳ ನಿರ್ಮಾಣ ಪೂರ್ಣಗೊಂಡಿದೆ ಎಂದರು.

9 ಗ್ರಾಮಗಳ ರೈತರಿಗೆ ಅನುಕೂಲ

ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯಿಂದ ಕೊಪ್ಪಳ ತಾಲೂಕಿನ ಮೈನಳ್ಳಿ, ಹಂದ್ರಾಳ, ಅಳವಂಡಿ, ಕವಲೂರು, ಹಿರೇಸಿಂದೋಗಿ, ಬಿಕ್ಕನಹಳ್ಳಿ, ಬೆಟಗೇರಿ ಹಾಗೂ ಕುಕನೂರು ತಾಲೂಕಿನ ತಳಕಲ್ಲು ಮತ್ತು ಕೋಮಲಾಪುರ ಸೇರಿದಂತೆ ಒಟ್ಟು 9 ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.

9 ಸಾವಿರ ಎಕರೆ ಪ್ರದೇಶಕ್ಕೆ ಹೊಲಗಾಲುವೆಗಳ ನಿರ್ಮಾಣಕ್ಕಾಗಿ ಇನ್ನೂ ₹47 ಕೋಟಿ ಅನುದಾನದ ಅಗತ್ಯವಿದೆ. ಈ ಅನುದಾನ ದೊರೆತರೆ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ರೈತರಿಗೆ ತಲುಪಿಸಲು ಸಾಧ್ಯವಾಗಲಿದೆ ಎಂದು ಶಾಸಕ ಹಿಟ್ನಾಳ್ ಹೇಳಿದರು.

ನವಲಕಲ್ ಏತ ನೀರಾವರಿ ಯೋಜನೆಯೂ ಈಗಾಗಲೇ ಪೂರ್ಣಗೊಂಡಿದ್ದು, ಕಾಲುವೆ ನಿರ್ಮಾಣದ ಮೂಲಕ 15 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಕರಡಿ ಸಂಗಣ್ಣ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ ಉಪಸ್ಥಿತರಿದ್ದರು.

PREV
Read more Articles on
click me!

Recommended Stories

Belagavi: ದುರಂತದ ಬೆನ್ನಲ್ಲೇ ಸಚಿವರಿಂದ ಮಹತ್ವದ ಘೋಷಣೆ! 50 ಸಾವಿರ ನಿವೇಶನ ಯೋಜನೆ
ಬಾಗಿಲಲ್ಲಿ ಯಾರೋ ತಂದಿಟ್ಟ ಗಣೇಶನನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ ಮುಸ್ಲಿಂ ಕುಟುಂಬ