
ಕೊಪ್ಪಳ (ಅ.27): ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕ ಬಿಡನಾಳ ಗ್ರಾಮದಲ್ಲಿ ಕುಡುಕನ ಮನಸ್ಥಿತಿ ಮತ್ತೊಂದು ಕಡೆಗೆ ತಿರುಗಿ, ಅಕ್ರಮವಾಗಿ ಇಟ್ಟುಕೊಂಡಿದ್ದ ನಾಡ ಬಂದೂಕಿನಿಂದ ಸೆಲ್ಫಿ ಫೈರಿಂಗ್ ಮಾಡಿಕೊಳ್ಳಲು ಯತ್ನಿಸಿ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. ಈ ವಿಚಿತ್ರ ಘಟನೆ ಜಿಲ್ಲೆಯಾದ್ಯಂತ ಆಶ್ಚರ್ಯ ಮೂಡಿಸಿದೆ. ಗಾಯಗೊಂಡ ವ್ಯಕ್ತಿಯನ್ನು ಆನಂದಗೌಡ ಪಾಟೀಲ್ ಎಂದು ಗುರುತಿಸಲಾಗಿದೆ. ಆನಂದಗೌಡ ಅವರು ವಿದ್ಯುತ್ ಕಂಬಗಳನ್ನು ಹಾಕುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಭಾನುವಾರ ತಡರಾತ್ರಿ ಅಥವಾ ಸೋಮವಾರ ಬೆಳಗ್ಗೆ ಆನಂದಗೌಡ ಕುಡಿದ ಮತ್ತಿನಲ್ಲಿದ್ದರು. ತಮ್ಮ ಬಳಿ ಅಕ್ರಮವಾಗಿ ಇಟ್ಟುಕೊಂಡಿದ್ದ ನಾಡ ಬಂದೂಕಿನಿಂದ ಸೆಲ್ಫಿ ಫೈರಿಂಗ್ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಗುಂಡು ಆನಂದಗೌಡ ದೇಹಕ್ಕೆ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಆನಂದಗೌಡ ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆನಂದಗೌಡ ಹೊಂದಿದ್ದ ನಾಡ ಬಂದೂಕು ಯಾವುದೇ ಪರವಾನಗಿ ಪಡೆದದ್ದಲ್ಲ ಎಂಬುದು ತನಿಖೆಯಿಂದ ಬಯಲಾಗಿದೆ. ಪೊಲೀಸ್ ತನಿಖೆಯಲ್ಲಿ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಆನಂದಗೌಡ ಪಾಟೀಲ್ ಬರೋಬ್ಬರಿ 5 ವರ್ಷಗಳ ಹಿಂದೆ ಯಾದಗಿರಿ ಪ್ರದೇಶದಲ್ಲಿ ಈ ನಾಡ ಬಂದೂಕನ್ನು ಕಳ್ಳತನ ಮಾಡಿಕೊಂಡು ಬಂದಿದ್ದರು ಎಂದು ತಿಳಿದುಬಂದಿದೆ. ಅಂದಿನಿಂದ ಈ ಅಕ್ರಮ ಶಸ್ತ್ರಾಸ್ತ್ರವನ್ನು ಮನೆಯಲ್ಲಿಯೇ ಇಟ್ಟುಕೊಂಡು, ಕುಡಿದ ಮತ್ತಿನಲ್ಲಿ ವಿಚಿತ್ರ ಪ್ರಯೋಗ ಮಾಡುತ್ತಿದ್ದನು. ಆನಂದಗೌಡ ಈ ಫೈರಿಂಗ್ ನಡೆಸುವಾಗ ಬಂದೂಕಿನಿಂದ ಮದ್ದು ಹೊರಬರಲು ಸೈಕಲ್ ಬೇರಿಂಗ್‌ಗಳನ್ನು ಗುಂಡುಗಳ ಬದಲಿಗೆ ಬಳಸಿ ಫೈರಿಂಗ್ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.
ಕಾನೂನು ಕ್ರಮ ಆರಂಭ
ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಕಾರಣದಿಂದಾಗಿ, ಕುಕನೂರು ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನಂದಗೌಡ ಆರೋಗ್ಯ ಸ್ಥಿತಿ ಸುಧಾರಿಸಿದ ಬಳಿಕ ಅವರ ವಿರುದ್ಧ ಆರ್ಮ್ಸ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಕುಡುಕನ ಮತ್ತಿನಲ್ಲಿ ನಡೆದ ಈ ಪ್ರಯತ್ನದಿಂದ ಆನಂದಗೌಡ ಪ್ರಾಣಾಪಾಯದಿಂದ ಪಾರಾದರೂ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಕಾರಣದಿಂದಾಗಿ ಈಗ ಕಾನೂನು ಕ್ರಮಕ್ಕೆ ಒಳಗಾಗಲಿದ್ದಾರೆ.