* ಪೂರ್ವ ಕಾರ್ಯ ಸಾಧ್ಯತಾ ವರದಿ ತಯಾರಿಕೆಗೆ ಎಎಐ ತಂಡ ಭೇಟಿ
* ಕೃಷಿ ಉತ್ಪನ್ನ ಹೊರ ರಾಜ್ಯ, ದೇಶಗಳಿಗೆ ನೇರವಾಗಿ ರಫ್ತು ಮಾಡಲು ಅನುಕೂಲ
* ಕೊಪ್ಪಳ ಟಾಯ್ಸ್ ಕ್ಲಸ್ಟರ್‌ನ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲ
ಕೊಪ್ಪಳ(ಜೂ.03): ಜಿಲ್ಲೆಯ ಅಭಿವೃದ್ಧಿಗೆ ವಿಮಾನ ನಿಲ್ದಾಣವು ಪೂರಕವಾಗಲಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು. ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಕುರಿತಂತೆ ಪೂರ್ವಕಾರ್ಯ ಸಾಧ್ಯತಾ ವರದಿ ತಯಾರಿಕೆಗೆ ಗುರುವಾರ ಜಿಲ್ಲೆಗೆ ಆಗಮಿಸಿದ್ದ ಎಎಐ ತಂಡದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದರು.
ವಿಮಾನ ನಿಲ್ದಾಣದಿಂದ ಜಿಲ್ಲೆಯಲ್ಲಿ ಬೆಳೆಯುವ ಹಲವು ಬಗೆಯ ಕೃಷಿ ಉತ್ಪನ್ನಗಳನ್ನು ಹೊರ ರಾಜ್ಯ, ದೇಶಗಳಿಗೆ ನೇರವಾಗಿ ರಫ್ತು ಮಾಡಲು ಅನುಕೂಲವಾಗುವುದು ಮತ್ತು ಪ್ರತಿದಿನ ಜಿಲ್ಲೆಯಿಂದ 150 ಕಂಟೇನರ್‌ಗಳು ಬೇರೆ ಬೇರೆ ರಾಜ್ಯಗಳಿಗೆ ರಸ್ತೆ ಮೂಲಕ ಮತ್ತು ರೈಲ್ವೆಗಳ ಮೂಲಕ ಸಂಚರಿಸುತ್ತಿದ್ದು, ಇವುಗಳು ಸಮಯಕ್ಕೆ ಸರಿಯಾಗಿ ತಲುಪುವುದಿಲ್ಲ. ಇದರಿಂದ ಅಭಿವೃದ್ಧಿಯ ವೇಗಕ್ಕೆ ಹಿನ್ನಡೆಯಾಗುತ್ತದೆ. ಜಿಲ್ಲೆಯಲ್ಲಿನ ಹಲವು ಪ್ರಮುಖ ಪ್ರೇಕ್ಷಣಿಯ ಸ್ಥಳಗಳಾದ ಅಂಜನಾದ್ರಿ ಪರ್ವತ, ಹುಲಿಗಿ ದೇವಸ್ಥಾನ, ಕನಕಚಾಲಪತಿ ದೇವಸ್ಥಾನ, ಇಟಗಿ ಸೇರಿದಂತೆ ಹಲವು ಧಾರ್ಮಿಕ ಸ್ಥಳಗಳು, ಆನೆಗೊಂದಿ ಮತ್ತು ಪಕ್ಕದ ಹಂಪಿಯಂತಹ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡುವರಲ್ಲಿ ವಿದೇಶಿ ಪ್ರವಾಸಿಗರೂ ಹೆಚ್ಚಾಗಿರುವುದರಿಂದ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ತುಂಬಾ ಅವಶ್ಯವಿದೆ. ಅಲ್ಲದೇ ನೂತನವಾಗಿ ನಿರ್ಮಾಣವಾಗುತ್ತಿರುವ ಕೊಪ್ಪಳ ಟಾಯ್ಸ್ ಕ್ಲಸ್ಟರ್‌ನ ಉತ್ಪನ್ನಗಳನ್ನು ರಫ್ತು ಮಾಡಲು ಅನುಕುಲವಾಗಲಿದೆ ಎಂದು ತಾಂತ್ರಿಕ ತಂಡಕ್ಕೆ ಡಿಸಿ ವಿವರಿಸಿದರು.
ಗಂಗಾವತಿ: ನಿಧಿ ಆಸೆಗೆ ಹಿಂದೂ ಆರಾಧನಾ ಸ್ಥಳಗಳು ಬಲಿ?
ಇದಕ್ಕೆ ಎಎಐ ತಂಡವು ಪ್ರತಿಕ್ರಿಯಿಸಿ, ವಿಮಾನ ನಿಲ್ದಾಣವನ್ನು ಯಾವ ಉದ್ದೇಶಕ್ಕೆ ಮತ್ತು ಯಾವ ರೀತಿ ಬಳಸಲಾಗುವುದು ಎಂಬುದರ ಕುರಿತು ಸಂಕ್ಷಿಪ್ತ ವರದಿ ನೀಡುವಂತೆ ಜಿಲ್ಲೆಯ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿತು.
ಸಭೆಯಲ್ಲಿ ಕರ್ನಾಟಕ ರಾಜ್ಯ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಟೆಕ್ನಿಕಲ್ ಅಡ್ವೆ ೖಜರ್ ಬ್ರಿಗೇಡಿಯರ್ ಪೂರ್ವಿಮಠ, ಎಎಐ ತಂಡದ ಅಧಿಕಾರಿಗಳಾದ ಅಭಿಜಿತ್ ಬ್ಯಾನರ್ಜಿ, ಶೈಲೇಂದ್ರ ಮಾರ್ಕ್ ಇ., ತರುಣ್ ಕುಮಾರ್ ಗುಪ್ತಾ, ಶಖೀಬ್ ಆಫ್ತಾಬ್ ಆಲಂ, ಎನ್. ಮೋಹನ್ ಹಾಗೂ ಕೊಪ್ಪಳ ವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೇಟ್ಟಿಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳ ಪರಿಶೀಲನೆ:
ರಾಜ್ಯ ಸರ್ಕಾರವು 2022- 23ನೇ ಸಾಲಿನ ಬಜೆಟ್‌ನಲ್ಲಿ ಹೊಸ ವಿಮಾನ ನಿಲ್ದಾಣವನ್ನು ಜಿಲ್ಲೆಯಲ್ಲಿ ನಿರ್ಮಿಸಲು ಯೋಜನೆಯನ್ನು ಘೋಷಿಸಿದ್ದು, ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಸಂಬಂಧ ಪೂರ್ವಕಾರ್ಯ ಸಾಧ್ಯತಾ ವರದಿ(ಪ್ರಿ ಫೆಸಿಬಲಿಟಿ ರಿಪೋರ್ಟ್) ತಯಾರಿಸಲು ಏರ್ಪೋಟ್ ಅಥಾರಟಿ ಆಫ್ ಇಂಡಿಯಾ ಸಂಸ್ಥೆಯ ಹಿರಿಯ ಅಧಿಕಾರಿಗಳ ತಂಡವು ತಾಲೂಕಿನ ತಾಳಕನಕಪುರ, ಬುಡಶೆಟ್ನಾಳ್, ಹಟ್ಟಿಮತ್ತು ಕಲಕೇರಿ ಗ್ರಾಮಗಳಲ್ಲಿ ಗುರುತಿಸಿರುವ 382.04 ಎಕರೆ ಸ್ಥಳ ಮತ್ತು ತಾಲೂಕಿನ ವಗದನಾಳ ಹಾಗೂ ಕುಕನೂರು ತಾಲೂಕಿನ ಲಕಮಾಪುರ ಗ್ರಾಮಗಳಲ್ಲಿ ಗುರುತಿಸಿರುವ 352.13 ಎಕರೆ ಜಮೀನುಗಳನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ಕೈಗೊಂಡಿತು.
Koppala ಟಿಸಿಗಾಗಿ ತಾಳಿ ಮಾರಲು ಸಿದ್ದವಾಗಿದ್ದ ತಾಯಿ!
ರಾಜ್ಯ ಸರ್ಕಾರಕ್ಕೆ ಸಲ್ಲಿಕೆ:
ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಎಐ ತಂಡವು ಸ್ಥಳ ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಹಾಗೂ ಸಂಸದರೊಂದಿಗೆ ಚರ್ಚಿಸಿ, ಮೂರು ವಾರದೊಳಗೆ ಪೂರ್ವಕಾರ್ಯ ಸಾಧ್ಯತಾ ವರದಿಯನ್ನು ಏರ್‌ಪೋರ್ಚ್ ಅಥಾರಟಿ ಆಫ್ ಇಂಡಿಯಾ ಸಂಸ್ಥೆಗೆ ಹಾಗೂ ರಾಜ್ಯ ಸರ್ಕಾರಕ್ಕೆ ಮುಂದಿನ ಕ್ರಮಕ್ಕೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿತು.
ಸಂಸದ ಕರಡಿ ಸಂಗಣ್ಣ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಈ ಯೋಜನೆಯಿಂದಾಗಿ ಜಿಲ್ಲೆಯಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣದಿಂದ ಜಿಲ್ಲೆಯ ಜನತೆಗೆ ಅನುಕೂಲವಾಗುವುದಲ್ಲದೇ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು.