* ನಾಲ್ಕು ತಿಂಗಳ ಕೊಲ್ಲೂರು ಮೂಕಾಂಬಿಕೆ ಹುಂಡಿ ಲೆಕ್ಕಾಚಾರ
* ಮೂಕಾಂಬಿಕೆಗೆ ಭಕ್ತರು ಕೊಟ್ರು ಮನಃಪೂರ್ವಕವಾಗಿ ಹರಕೆ
* ಕೊಲ್ಲೂರು ದೇವಾಲಯದ ಹುಂಡಿಗೆ ದಾಖಲೆ ಪ್ರಮಾಣದಲ್ಲಿ ಹಣ ಸಂಗ್ರಹ
ವರದಿ-ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ, (ಮೇ.12): ಭಕ್ತಿಗೆ ಮೆಚ್ಚಿ ಹರಸುವ ತಾಯಿ ಕೊಲ್ಲೂರು ಮೂಕಾಂಬಿಕೆಗೆ, ಭಕ್ತರು ಕೂಡ ಮನಃಪೂರ್ವಕವಾಗಿ ಹರಕೆ, ಕಾಣಿಕೆ ಸಲ್ಲಿಸಿ ನಮಿಸಿದ್ದಾರೆ. ಕೋವಿಡ್ ಕಾಲದಲ್ಲಿ ದೇವಿಯ ದರ್ಶನ ಮಾಡಲಾಗದೆ ಬೇಸರಗೊಂಡಿದ್ದ ಭಕ್ತರು, ಸಾಗರೋಪಾದಿಯಲ್ಲಿ ಬಂದು ಪೂಜೆ ಸಲ್ಲಿಸಿ ಹೋಗಿದ್ದರು. ಇದೀಗ ಕಳೆದ ನಾಲ್ಕು ತಿಂಗಳ ಹುಂಡಿ ಲೆಕ್ಕಾಚಾರ ಮಾಡಲಾಗಿದ್ದು ದಾಖಲೆ ಪ್ರಮಾಣದ ಕಾಣಿಕೆ ಹರಿದುಬಂದಿದೆ.
ಕೋವಿಡ್ ನಿರ್ಬಂಧಗಳ ಸಡಿಲಿಕೆಯ ಬಳಿಕ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲ ದಲ್ಲಿ ಭಕ್ತರ ಸಂಖ್ಯೆ ಏರಿಕೆ ಕಾಣುತ್ತಿದೆ,ಮೇ 10ರಂದು ಕಾಣಿಕೆ ಹುಂಡಿಯ ಎಣಿಕೆ ನಡೆದಿದ್ದು, ದಾಖಲೆಯ 1,53,41,923 ರೂ. (1.53 ಕೋಟಿ ರೂ.) ಸಂಗ್ರಹವಾಗಿದೆ. ಎರಡೂವರೆ ಕೆ.ಜಿ ಬಂಗಾರ ಮತ್ತು 4.200 ಕೆ.ಜಿ ಬೆಳ್ಳಿ ಕೂಡ ಸಂಗ್ರಹವಾಗಿದೆ.
undefined
Udupi: ಕೊಲ್ಲೂರು ಅಮ್ಮನ ಭೋಜನ ಪ್ರಸಾದಕ್ಕೆ ರಾಷ್ಟ್ರೀಯ ಸುರಕ್ಷತಾ ಗುಣಮಟ್ಟದ ಮಾನ್ಯತೆ
ಕಳೆದ ಜನವರಿಯಿಂದ ಪ್ರತೀದಿನ ಕನಿಷ್ಠ 10 ಸಾವಿರ ಭಕ್ತರು ಆಗಮಿಸುತ್ತಿದ್ದಾರೆ. ದೇಗುಲ ದಲ್ಲಿ ಅತೀ ಹೆಚ್ಚು 1.53 ಕೋಟಿ ರೂ. ಕಾಣಿಕೆ ರೂಪದ ಹಣ ಸಂಗ್ರಹವಾಗಿರುವುದು ಇದೇ - ಮೊದಲ ಬಾರಿಯಾಗಿದೆ.
ಸಾಮಾನ್ಯವಾಗಿ ಪ್ರತೀ ತಿಂಗಳು ಎಣಿಕೆ ನಡೆಯುತ್ತಿದ್ದು, ಸರಾಸರಿ 65 ಲಕ್ಷ ರೂ.ಸಂಗ್ರಹವಾಗುತ್ತಿತ್ತು. 4 ತಿಂಗಳ ಹಿಂದೆ ಎಣಿಕೆಯಲ್ಲಿ 1.39 ಕೋಟಿ ರೂ. ಸಂಗ್ರಹವಾಗಿತ್ತು. ಈ ಅವಧಿಯಲ್ಲಿ ದೇವಸ್ಥಾನದ ಉತ್ಸವಾದಿಗಳು ನಡೆದಿದ್ದು ದೇಶದ ನಾನಾ ಭಾಗಗಳಿಂದ ಭಕ್ತರು ಹರಿದು ಬಂದಿದ್ದರು.
ಕೊಲ್ಲೂರು ಕ್ಷೇತ್ರವೆಂದರೆ ಕೇವಲ ಕರ್ನಾಟಕ ಮಾತ್ರವಲ್ಲ ಕೇರಳ ,ತಮಿಳುನಾಡು, ಆಂಧ್ರಪ್ರದೇಶದ ಭಕ್ತರಿಗೂ ಅಚ್ಚುಮೆಚ್ಚು. ಇತ್ತೀಚಿನ ವರ್ಷಗಳಲ್ಲಿ ಉತ್ತರ ಭಾರತದಿಂದಲೂ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ರಾಜಕಾರಣಿಗಳು, ಸಿನಿಮಾ ನಟ-ನಟಿಯರಂತೂ ಕೊಲ್ಲೂರು ಕ್ಷೇತ್ರಕ್ಕೆ ಬಾರದೆ ಇರುವುದಿಲ್ಲ.
ಶ್ರೀ ಕ್ಷೇತ್ರದಲ್ಲಿ ನಡೆಯುವ ಚಂಡಿಕಾ ಹೋಮಕ್ಕೆ ವಿಶೇಷ ಮಹತ್ವ ಇದ್ದು, ಹೋಮದ ಹರಕೆ ಹೊತ್ತು ಸಾವಿರಾರು ಭಕ್ತರು ತಮ್ಮ ಬಯಕೆಗಳನ್ನು ಈಡೇರಿಸಿಕೊಂಡಿದ್ದಾರೆ. ಸಾಮಾನ್ಯ ಭಕ್ತರು ಕಾಣಿಕೆ ಹುಂಡಿಗೆ ಹಣ ಹಾಕಿ ತಮ್ಮ ಶ್ರದ್ಧಾ ಭಕ್ತಿಯನ್ನು ಈ ರೂಪದಲ್ಲಿ ಸಮರ್ಪಿಸುತ್ತಾರೆ. ಈ ರೀತಿ ಶ್ರದ್ಧೆಯಿಂದ ಅರ್ಪಿತವಾದ ಹಣವೇ ಕೊಲ್ಲೂರು ದೇವಸ್ಥಾನವನ್ನು ಶ್ರೀಮಂತ ದೇವಾಲಯಗಳ ಪಟ್ಟಿಗೆ ಸೇರಿಸಿದೆ.
ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಧರ್ಮದಾಯ (ಮುಜರಾಯಿ) ಇಲಾಖೆಯ ಮೊದಲ ಐದು ಶ್ರೀಮಂತ ದೇವಾಲಯಗಳ ಪೈಕಿ ಕೊಲ್ಲೂರು ದೇವಾಲಯ ಕೂಡಾ ಒಂದು.