ಕೋಲಾರದ ಮಹಿಳೆ ಮಂಜುಳಾ ಪ್ರಕಾಶ್ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಸಾವಿನ ನಂತರ ತಮ್ಮ ಹೃದಯ, ಕಿಡ್ನಿ, ಕಣ್ಣು, ಶ್ವಾಸಕೋಶ ಮತ್ತು ಕರುಳು ಸೇರಿದಂತೆ ಬಹು ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಈ ಮೂಲಕ 8 ಜನ ರೋಗಿಗಳಿಗೆ ನೂತನ ಜೀವ ನೀಡಿದ್ದಾರೆ. ಕರಾವಳಿಯ ಅರ್ಚನಾ ಕಾಮತ್ ಅವರಂತೆ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಕೋಲಾರ (ಅ.01): ರಾಜ್ಯದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ ಅರ್ಚನಾ ಕಾಮತ್ ಮಾದರಿಯಲ್ಲಿಯೇ ಕೋಲಾರದ ಮಹಿಳೆಯೂ ಕೂಡ ಅಂಗಾಂಗ ದಾನ ಮಾಡಿ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಹೃದಯ, ಕಣ್ಣು, ಕಿಡ್ನಿ, ಶ್ವಾಸಕೋಶ ಹಾಗೂ ಕರುಳು ದಾನ ಮಾಡಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ಸಮಾಜ ಸೇವೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಉಪನ್ಯಾಸಕಿ ಅರ್ಚನಾ ಕಾಮತ್ ಅವರು ಲಿವರ್ ದಾನ ಮಾಡಿ ಅನಾರೋಗ್ಯಕ್ಕೆ ತುತ್ತಾಗಿ ಜೀವ ತೆತ್ತಿದ್ದರು. ತನ್ನ ಪ್ರಾಣವನ್ನೂ ಲೆಕ್ಕಿಸದೇ ಇನ್ನೊಬ್ಬರ ಪ್ರಾಣ ಉಳಿಸಿ ನಂಜು ತಗುಲಿ ಮೃತಪಟ್ಟಿದ್ದ ಅರ್ಚನಾ ಕಾಮತ್ ಸಾವಿಗೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಜನರ ಹೃದಯ ಮಿಡಿದಿತ್ತು. ಈ ಘಟನೆ ಸಂಭವಿಸಿ ಇನ್ನು ಒಂದು ತಿಂಗಳಾಗುವಷ್ಟರಲ್ಲಿ ಕೋಲಾರದ ಮಹಿಳೆಯೊಬ್ಬರು ಇದೀಗ ತನ್ನ ಬಹು ಅಂಗಾಂಗವನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
ಇದನ್ನೂ ಓದಿ: ಅಂಗಾಂಗ ದಾನಿ ಅರ್ಚನಾ ಕಾಮತ್ ಇನ್ನಿಲ್ಲ; ಪರರ ಜೀವ ಉಳಿಸಲು ತನ್ನ ಪ್ರಾಣಾರ್ಪಣೆ!
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕೋಡಿಹಳ್ಳಿ ಗ್ರಾಮದ ಮಂಜುಳಾ ಪ್ರಕಾಶ್(44) ಸಾರ್ಥಕತೆ ಮೆರೆದ ಮಹಿಳೆ ಆಗಿದ್ದಾರೆ. ಇವರು ತಮ್ಮ ದೇಹದ ವಿವಿಧ ಪ್ರಮುಖ ಬಹು ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಹೃದಯ,ಕಿಡ್ನಿ,ಕಣ್ಣು,ಕರುಳು, ಶ್ವಾಸಕೋಶ ಅಂಗಾಗಳ ದಾನ ಮಾಡಿದ್ದು, ಇವರ ಅಂಗಾಂಗಗಳನ್ನು 8 ಜನ ರೋಗಿಗಳಿಗೆ ಜೋಡಣೆ ಮಾಡಿ ಜೀವ ಹಾಗೂ ಜೀವನವನ್ನೇ ದಾನ ಮಾಡಿದ ಪುಣ್ಯಕ್ಕೆ ಪಾತ್ರವಾಗಿದ್ದಾರೆ.
ಇನ್ನು ಮೃತ ಮಂಜುಳಾ ಅವರು ಕೋಡಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಪ್ರಕಾಶ್ ಅವರ ಧರ್ಮಪತ್ನಿ ಆಗಿದ್ದಾರೆ. ಕಳೆದ 5 ದಿನಗಳ ಹಿಂದೆ ಡೆಂಗ್ಯೂ ಜ್ವರದಿಂದ ಆಸ್ಪತ್ರೆಗೆ ದಾಖಲು ಆಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ತಮಗೆ ಸಾವು ಖಚಿತ ಆಗುತ್ತಿದೆ ಎಂಬುದನ್ನು ಅರಿತು ತನ್ನ ಎಲ್ಲ ಅಂಗಾಂಗಗಳನ್ನು ಬೇರೆಯವರಿಗೆ ದಾನ ಮಾಡಿಬಿಡಿ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ವೈಟ್ ಫೀಲ್ಡ್ ಮಣಿಪಾಲ್ ಆಸ್ಪತ್ರೆಯ ವೈದ್ಯರ ಸಹಾಯದ ಮೂಲಕ ತಮ್ಮ ಬಹು ಅಂಗಾಂಗಗಳನ್ನು 8 ಜನ ರೋಗಿಗಳಿಗೆ ದಾನ ಮಾಡಿ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.
ಇನ್ನು ಕರಾವಳಿಯ ಅರ್ಚನಾ ಕಾಮತ್ ಸಾವಿನ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಅವರು, ಬಾಳಿಗೊಂದು ಅರ್ಥಪೂರ್ಣವಾದ ನಿಯಮ ಇರಬೇಕು ಎನ್ನುತ್ತಾ ಸದಾ ಎಲ್ಲರಲ್ಲೂ ಪ್ರೇರಣಾಸ್ಫೂರ್ತಿಯಾಗಿದ್ದ ಸೋದರಿ ಶ್ರೀಮತಿ ಅರ್ಚನಾ ಕಾಮತ್ ರವರು ಮತ್ತೊಂದು ಜೀವವೊಂದನ್ನು ಉಳಿಸುವ ಸಂದರ್ಭದಲ್ಲಿ ತನ್ನ ಉಸಿರನ್ನೇ ನಿಲ್ಲಿಸಿರುವುದು ಅತ್ಯಂತ ನೋವಿನ ಸಂಗತಿ. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ ನನ್ನ ಆತ್ಮೀಯರಾದ ಶ್ರೀ ಸಿ.ಎ ಚೇತನ್ ಕಾಮತ್ ರವರ ಕುಟುಂಬ ವರ್ಗಕ್ಕೆ ಹಾಗೂ ಸೋದರಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಣ ಸಂಸ್ಥೆಯ ಎಲ್ಲಾ ವೃಂದಕ್ಕೂ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.