ಕೋಲಾರ: ಜಿಲ್ಲೆಯಲ್ಲಿ ಮತ್ತೆ ತಲೆ ಎತ್ತಿದ ಮೀಟರ್‌ ಬಡ್ಡಿ ದಂಧೆ

By Kannadaprabha NewsFirst Published Oct 16, 2023, 10:07 AM IST
Highlights

ಜಿಲ್ಲೆಯಾದ್ಯಂತ ಮೀಟರ್ ಬಡ್ಡಿ ದಂಧೆ ಮತ್ತೆ ತಲೆ ಎತ್ತಿದೆ. ತಮಿಳುನಾಡಿನ ಖಾಸಗಿ ಫೈನಾನ್ಸ್ ಕಂಪನಿಗಳು ಸಾಲ ನೀಡಲು ಮುಂದಾಗಿವೆ. ಡಿಡಿಸಿ ಬ್ಯಾಂಕ್‌ನಿಂದ ಶೂನ್ಯ ಬಡ್ಡಿಯಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ನೀಡುವ ಯೋಜನೆ ಜಾರಿಗೆ ಬಂದ ನಂತರ ಜಿಲ್ಲೆಯಲ್ಲಿ ಬಡ್ಡಿ ದಂಧೆಗೆ ಕಡಿವಾಣ ಬಿದ್ದಿತ್ತು. ಆದರೆ ಮೂರು ತಿಂಗಳಿನಿಂದ ಖಾಸಗಿ ಫೈನಾನ್ಸ್ ಕಂಪನಿಗಳು ತಲೆಯೆತ್ತಿವೆ.

 ಕೋಲಾರ :  ಜಿಲ್ಲೆಯಾದ್ಯಂತ ಮೀಟರ್ ಬಡ್ಡಿ ದಂಧೆ ಮತ್ತೆ ತಲೆ ಎತ್ತಿದೆ. ತಮಿಳುನಾಡಿನ ಖಾಸಗಿ ಫೈನಾನ್ಸ್ ಕಂಪನಿಗಳು ಸಾಲ ನೀಡಲು ಮುಂದಾಗಿವೆ. ಡಿಡಿಸಿ ಬ್ಯಾಂಕ್‌ನಿಂದ ಶೂನ್ಯ ಬಡ್ಡಿಯಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ನೀಡುವ ಯೋಜನೆ ಜಾರಿಗೆ ಬಂದ ನಂತರ ಜಿಲ್ಲೆಯಲ್ಲಿ ಬಡ್ಡಿ ದಂಧೆಗೆ ಕಡಿವಾಣ ಬಿದ್ದಿತ್ತು. ಆದರೆ ಮೂರು ತಿಂಗಳಿನಿಂದ ಖಾಸಗಿ ಫೈನಾನ್ಸ್ ಕಂಪನಿಗಳು ತಲೆಯೆತ್ತಿವೆ.

ಕಳೆದ ೮ ವರ್ಷದ ಹಿಂದೆ ಜಿಲ್ಲೆಯಾದ್ಯಂತ ಗಡಿಭಾಗಗಳಲ್ಲಿ ಜನರ ಹೀರುವ ಖಾಸಗಿ ಫೈನಾನ್ಸ್ ಕಂಪನಿಗಳು ತಲೆ ಎತ್ತಿ ಜನರನ್ನು ಸಾಲದ ಶೂಲಕ್ಕೆ ಸಿಲುಕಿಸಿದ್ದವು. ಇದರಿಂದ ಅನೇಕ ಕುಟುಂಬಗಳು ಹಾಳಾಗಿದ್ದವು. ಕೆ.ಜಿ.ಎಫ್, ಮುಳಬಾಗಿಲು, ಶ್ರೀನಿವಾಸಪುರ ತಾಲ್ಲೂಕಿನ ಗಡಿ ಭಾಗಗಳಲ್ಲಿ ಈ ದಂಧೆ ಹೆಚ್ಚಾಗಿತ್ತು.

ಸಾವಿರಕ್ಕೆ ಶೇ.ರಷ್ಟು 12 ಬಡ್ಡಿ

ಒಂದು ಸಾವಿರಕ್ಕೆ ಶೇ.12  ರಂತೆ ವಸೂಲಿ ಮಾಡುವ ಮೂಲಕ ಜನರ ರಕ್ತವನ್ನು ಹೀರುತ್ತಿದ್ದರು. ಇದರಿಂದ ಅನೇಕರು ಪ್ರಾಣಗಳನ್ನು ಕಳೆದುಕೊಂಡಿದ್ದರು. ಕಳೆದ ೮ ವರ್ಷಗಳ ಹಿಂದೆ ಡಿ.ಸಿ.ಸಿ ಬ್ಯಾಂಕಿನಿಂದ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳಿಗೆ ಸಾಲ ನೀಡುವ ಯೋಜನೆ ಜಾರಿಗೊಳಿಸಿದ ಬಳಿಕ ಖಾಸಗಿ ಫೈನಾನ್ಸ್‌ ವಹಿವಾಟು ಸ್ಥಗಿತಗೊಂಡಿತ್ತು.

ಕಳೆದ 4 ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸ್ತ್ರೀಶಕ್ತಿ ಸಂಘಗಳ ಡಿಸಿಸಿ ಬ್ಯಾಂಕ್‌ ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಭರವಸೆ ನೀಡಿದ್ದವು. ಇದರಿಂದಾಗಿ ಸ್ತ್ರೀಶಕ್ತಿ ಸಂಘಗಳು ಪಡೆದ ಸಾಲ ಮರುಪಾವತಿ ಮಾಡಿಲ್ಲ. ಹೀಗಾಗಿ ಡಿಸಿಸಿ ಬ್ಯಾಂಕ್ ಹೊಸ ಸಾಲ ನೀಡುತ್ತಿಲ್ಲ.

ಗಡಿಗ್ರಾಮಗಳಲ್ಲಿ ಬಡ್ಡಿ ದಂಧೆ

ಇದರಿಂದಾಗಿ ಸ್ವ-ಸಹಾಯ ಸಂಘಗಳ ಗುಂಪುಗಳು ಮತ್ತೆ ಖಾಸಗಿ ಫೈನಾನ್ಸ್ ಕಂಪನಿಗಳ ಮೊರೆ ಹೋಗುವಂತಾಗಿದೆ. ಶ್ರೀನಿವಾಸಪುರ ತಾಲೂಕಿನ ಬದ್ದಿಪಲ್ಲಿ, ಪೆದ್ದೂರು, ಯಡಗಾನಪಲ್ಲಿ, ಎ.ಪತ್ತೂರು, ಗುಡಿಪಲ್ಲಿ, ಕೆ.ಪಾತೂರು, ಅಡವಿ ಬೈರಗಾನಪಲ್ಲಿ, ಕೂರಿಗೆಪಲ್ಲಿ ಮುಂತಾದ ಗಡಿ ಗ್ರಾಮಗಳ ಮಹಿಳೆಯರಿಗೆ ತಮಿಳುನಾಡು ಮೂಲದ ಪಿಎಂಎಫ್‌ ಫೈನಾನ್ಸ್ ಕಂಪನಿಯಿಂದ ಸಾಲ ಪಡೆದಿದ್ದಾರೆ.

ಈ ಕಂಪನಿಯು ಮಹಿಳೆಯರಿಗೆ ಒಂದು ಲಕ್ಷದ ತನಕ ಸಾಲ ನೀಡುವುದಾಗಿ ಹೇಳಿಕೊಂಡಿದೆ. 1 ಲಕ್ಷಕ್ಕೆ ೨೬೦೦ ರು. ಮುಂಗಡ ಮತ್ತು ೫೦,೦೦೦ ಸಾವಿರಕ್ಕೆ ೧,೩೦೦ ರು.ಗಳು ಮುಂಗಡವಾಗಿ ಪಡೆದು ೧೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ೩ ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿ, ತಮ್ಮ ಕಚೇರಿ ಚಿಂತಾಮಣಿಯಲ್ಲಿ ಇದೆ, ಅಲ್ಲಿಗೆ ಬನ್ನಿ ಎಂದು ಯಾಮಾರಿಸಿ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕಂಪನಿ ನಾಪತ್ತೆಯಾಗಿದೆ.

ವಾರಕ್ಕೊಮ್ಮೆ ಬಡ್ಡಿ ವಸೂಲಿ

ಕೆಲವು ಗ್ರಾಮಗಳಲ್ಲಿ ಶೇ.೩ರ ಬಡ್ಡಿ ದರದಲ್ಲಿ ಸಾಲ ನೀಡಿ, ವಾರಕ್ಕೊಮ್ಮೆ ವಸೂಲಾತಿ ಮಾಡುತ್ತಿದ್ದಾರೆ. ಇದು ಶ್ರೀನಿವಾಸಪುರ ತಾಲೂಕಿಗೆ ಸೀಮಿತವಾಗಿಲ್ಲ. ಮುಳಬಾಗಿಲು, ಬಂಗಾರಪೇಟೆ, ಕೆ.ಜಿ.ಎಫ್. ತಾಲೂಕಿನ ಗಡಿ ಭಾಗಗಳನ್ನು ಸುಮಾರು ೧೦ ವರ್ಷದಿಂದಲೂ ಮುಂದುವರೆಸಿಕೊಂಡು ಬಂದಿದೆ. ಡಿ.ಸಿ.ಸಿ. ಬ್ಯಾಂಕ್ ಶೂನ್ಯ ಬಡ್ಡಿ ಸಾಲ ಯೋಜನೆ ಜಾರಿಗೆ ಬಂದ ನಂತರ ಇದು ಕಡಿಮೆಯಾಗಿತ್ತು, ಆದರೆ ಆದರೆ ಡಿಸಿಸಿ ಬ್ಯಾಂಕ್‌ ಸಾಲ ನಿಲ್ಲಿಸಿದ ಬಳಿಕ ಮತ್ತೆ ಖಾಸಗಿ ಫೈನಾನ್ಸ್‌ ಕಂಪನಿಗಳ ದಂಧೆ ಆರಂಭಗೊಂಡಿದೆ.

click me!