ಕೋಲಾರದ ಖಾಸಗಿ ಪಿಯು ಕಾಲೇಜಿನ ಶೌಚಾಲಯದಲ್ಲಿಯೇ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಘಟನೆಗೆ ಸಂಬಂಧಿಸಿದಂತೆ, ಅತ್ಯಾಚಾರ ಎಸಗಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲಾರ (ಜು.04): ಕೋಲಾರದ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ಶೌಚಾಲಯದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆಗೆ ಸಂಬಂಧಿಸಿದಂತೆ, ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲಾರ ನಗರದ ಹೊರ ವಲಯದಲ್ಲಿರುವ ಖಾಸಗಿ ಕಾಲೇಜಿನಲ್ಲಿ ವಿಚಿತ್ರ ಘಟನೆ ನಡೆದಿದೆ. 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇನ್ನು ಹೆರಿಗೆಯಾದ ಬಾಲಕಿ ಶ್ರೀನಿವಾಸಪುರ ತಾಲ್ಲೂಕಿನಿಂದ ಕಾಲೇಜಿಗೆ ಬರುತ್ತಿದ್ದಳು. ಮೊನ್ನೆ ಸೋಮವಾರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಆಕೆ ಶೌಚಾಲಯಕ್ಕೆ ಹೋಗಿದ್ದಾಳೆ. ಈ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡು ಹೆಣ್ಣು ಮಗು ಜನನವಾಗಿದೆ. ಮಗುವಿನ ಅಳುವ ಸದ್ದು ಕೇಳಿ ಕಕ್ಕಾಬಿಕ್ಕಿಯಾದ ಕಾಲೇಜಿನ ಉಪನ್ಯಾಸಕಿಯರು, ಸಿಬ್ಬಂದಿ ಸ್ಥಳಕ್ಕೆ ಓಡಿ ಹೋಗಿದ್ದಾರೆ.
ಹೈಸ್ಕೂಲ್ ಹುಡುಗಿ ಗರ್ಭಿಣಿ ಮಾಡಿದ ಯುವಕ, ಕಾಲೇಜಿಗೆ ಹೋಗಿ ಜನ್ಮ ಕೊಟ್ಟ ಬಾಲಕಿ
ಇನ್ನು ಶೌಚಾಲಯದಲ್ಲಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದನ್ನು ನೋಡಿ ಗಾಬರಿಗೊಂದು ತಕ್ಷಣವೇ ಸಮೀಪದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ತಾಯಿ ಹಾಗೂ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಬಾಲಕಿಯ ಕಾಲೇಜಿನ ಸಿಬ್ಬಂದಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಆಗ ಪೋಷಕರ ಮನವಿ ಮೇರೆಗೆ ಬಾಲಕಿ ತನ್ನ ಫೇಸ್‌ಬುಕ್ ಗೆಳೆಯನಿಂದ ತನ್ನ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆದಿದ್ದು, ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಗಿ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ.
ಇನ್ನು ಪೋಕ್ಸೊ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಳಬಾಗಿಲು ಮೂಲದ ಯುವಕನನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆ ಕುರಿತಂತೆ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಬೆಂಗಳೂರಿನ ಕಾಲೇಜುವೊಂದರಲ್ಲಿ ವಿದ್ಯಾರ್ಥಿಯಿಂದಲೇ ಸೆಕ್ಯೂರಿಟಿ ಗಾರ್ಡ್ ಭೀಕರ ಹತ್ಯೆ!
ಕಳೆದ ವರ್ಷವೂ ಇಂಥದ್ದೇ ಘಟನೆ ನಡೆದಿತ್ತು: ಕೋಲಾರದ ನಗರದ ಮತ್ತೊಂದು ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಫೇಸ್‌ಬುಕ್ ಗೆಳಯನೊಂದಿಗೆ ತನ್ನ ಮೈ ಹಂಚಿಕೊಂಡು ಗರ್ಭಿಣಿಯಾಗಿದ್ದಾಳೆ. ಆಗ ಕಾಲೇಜಿನ ಶೌಚಗೃಹದಲ್ಲಿ ಆಕೆಗೆ ಹೆರಿಗೆ ಆಗಿದ್ದು, ಎಲ್ಲಿ ತನ್ನ ಮರ್ಯಾದೆ ಹೋಗುತ್ತದೆ ಎಂದು ಹೆದರಿ ಮಗುವಿನ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಸಾಯಿಸಿದ್ದಳು. ನಂತರ ಆ ಮಗುವನ್ನು ಟಾಯ್ಲೆಟ್‌ನಲ್ಲಿ ಬೀಸಾಡಿ ಬಂದಿದ್ದಳು. ಶೌಚಗೃಹ ಸ್ವಚ್ಛತೆಗೆ ಹೋಗಿದ್ದ ಸಿಬ್ಬಂದಿಗೆ ಈ ವಿಚಾರ ತಿಳಿದು ಆಡಳಿತ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಆಗ ಬಾಲಕಿ ತನ್ನದೇ ಕೃತ್ಯವೆಂದು ಒಪ್ಪಿಕೊಂಡಿದ್ದಳು.