ಕೋಗಿಲು ಲೇಔಟ್ ಒತ್ತುವರಿದಾರರಿಗೆ ರಂಜಾನ್, ಯುಗಾದಿ ಗಿಫ್ಟ್; 'ಮನೆ ಹಂಚಿಕೆ ಹಕ್ಕುಪತ್ರ' ಕೊಟ್ಟ ಸರ್ಕಾರ!

Published : Mar 18, 2026, 05:47 PM IST
Kogilu Layout

ಸಾರಾಂಶ

ಬೆಂಗಳೂರಿನ ಕೋಗಿಲು ಬಡಾವಣೆಯ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡ 30 ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರ ಫ್ಲ್ಯಾಟ್‌ಗಳ ಹಕ್ಕುಪತ್ರ ವಿತರಿಸಿದೆ. ಮಾನವೀಯ ನೆಲೆಯಲ್ಲಿ ಈ ಪುನರ್ವಸತಿ ಕಲ್ಪಿಸಲಾಗಿದ್ದು, ಇದು 'ಯುಗಾದಿ-ರಂಜಾನ್ ಗಿಫ್ಟ್' ಎಂದು ಸಂಭ್ರಮಿಸಲಾಗಿದೆ.

ಬೆಂಗಳೂರು (ಮಾ.18):ಬೆಂಗಳೂರಿನ ವಿವಾದಿತ ಕೋಗಿಲು ಬಡಾವಣೆಯ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡಿದ್ದ ಕುಟುಂಬಗಳಿಗೆ ರಾಜ್ಯ ಸರ್ಕಾರ ಕೊನೆಗೂ ಸಿಹಿ ಸುದ್ದಿ ನೀಡಿದೆ. ಮಾನವೀಯ ನೆಲೆಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಭರವಸೆಯಂತೆ, ಇಂದು ವಿಕಾಸಸೌಧದಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ 30 ಕುಟುಂಬಗಳಿಗೆ ಫ್ಲ್ಯಾಟ್‌ಗಳ ಹಕ್ಕುಪತ್ರವನ್ನು ವಿತರಿಸಲಾಯಿತು.

ಸಚಿವರ ಉಪಸ್ಥಿತಿಯಲ್ಲಿ ಹಕ್ಕುಪತ್ರ ವಿತರಣೆ:

ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಜಂಟಿಯಾಗಿ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರು. ಇಂದು ಹಕ್ಕುಪತ್ರ ಪಡೆದ ಒಟ್ಟು 30 ಜನರಲ್ಲಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ವರ್ಗೀಕರಣ ಮಾಡಲಾಗಿದೆ. ಈ ಪೈಕಿ ಸಾಮಾನ್ಯ ವರ್ಗದ 10, ಪರಿಶಿಷ್ಟ ಜಾತಿಯ 07, ಪರಿಶಿಷ್ಟ ಪಂಗಡದ 02 ಹಾಗೂ 10 ಅಲ್ಪಸಂಖ್ಯಾತ ಸಮುದಾಯದ ಫಲಾನುಭವಿಗಳಿಗೆ ಸೂರು ಕಲ್ಪಿಸಲಾಗಿದೆ. ಇದನ್ನು ಸಂತ್ರಸ್ತರು 'ಯುಗಾಗಿ' ಮತ್ತು 'ರಂಜಾನ್ ಗಿಫ್ಟ್' ಎಂದೇ ಸಂಭ್ರಮಿಸುತ್ತಿದ್ದಾರೆ.

ಅರ್ಹರ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಿತು?

ಕೋಗಿಲು ಬಡಾವಣೆಯ ಒತ್ತುವರಿ ತೆರವು ಪ್ರಕರಣದಲ್ಲಿ ಆರಂಭದಲ್ಲಿ 165 ಸಂತ್ರಸ್ತರನ್ನು ಗುರುತಿಸಲಾಗಿತ್ತು. ಆದರೆ, ಇಲಾಖೆಯು ನಡೆಸಿದ ಕಟ್ಟುನಿಟ್ಟಿನ ದಾಖಲೆ ಪರಿಶೀಲನೆಯ ನಂತರ ಕೇವಲ 61 ಮಂದಿ ಮಾತ್ರ ಪುನರ್ವಸತಿಗೆ ಅರ್ಹರಿದ್ದಾರೆ ಎಂಬುದು ತಿಳಿದುಬಂದಿದೆ. ಈ 61 ಮಂದಿಯಲ್ಲಿ ಮೊದಲ ಹಂತವಾಗಿ ಇಂದು 12 ಮಂದಿಗೆ ಹಕ್ಕುಪತ್ರ ನೀಡಲಾಗಿದೆ. ಇದರೊಂದಿಗೆ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಅಡಿ ಅರ್ಜಿ ಸಲ್ಲಿಸಿದ್ದ 189 ಜನರಲ್ಲಿ 17 ಮಂದಿ ಅರ್ಹರನ್ನು ಸೇರಿಸಿ, ಇಂದು ಒಟ್ಟು 30 ಜನರಿಗೆ ವಸತಿ ಸೌಲಭ್ಯ ಒದಗಿಸಲಾಗಿದೆ.

ಒತ್ತುವರಿದಾರರಿಗೆ ಆದ್ಯತೆ; ಹಣ ಕಟ್ಟಿದವರಿಗೆ ಅನ್ಯಾಯ?

ಸರ್ಕಾರದ ಈ ಕ್ರಮವು ಒಂದು ಕಡೆ ಬಡವರಿಗೆ ನೆರವಾಗಿದ್ದರೂ, ಮತ್ತೊಂದೆಡೆ ತೀವ್ರ ಟೀಕೆಗೆ ಗುರಿಯಾಗಿದೆ. ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಕಾನೂನುಬಾಹಿರವಾಗಿ ಮನೆ ನಿರ್ಮಿಸಿದ್ದವರಿಗೆ ಸರ್ಕಾರ ಈಗ ಹಕ್ಕುಪತ್ರ ನೀಡಿ ಗೌರವಿಸುತ್ತಿದೆ. ಆದರೆ, ಇದೇ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಿ, ತಮ್ಮ ಕಷ್ಟದ ಹಣದಿಂದ ಲಕ್ಷಾಂತರ ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಿರುವ ಸಾವಿರಾರು ಪ್ರಾಮಾಣಿಕ ಅರ್ಜಿದಾರರು ಇನ್ನೂ ಮನೆಗಾಗಿ ಕಾಯುತ್ತಿದ್ದಾರೆ.

ನಾವು ವರ್ಷಗಳಿಂದ ಕಂತುಗಳನ್ನು ಕಟ್ಟುತ್ತಿದ್ದೇವೆ, ನಮಗೆ ಮನೆ ಹಸ್ತಾಂತರವಾಗಿಲ್ಲ. ಆದರೆ ಸರ್ಕಾರಿ ಜಾಗ ಒತ್ತುವರಿ ಮಾಡಿ ತೆರವುಗೊಂಡವರಿಗೆ ತಕ್ಷಣ ಮನೆ ಸಿಗುತ್ತಿದೆ ಎಂದರೆ ಇದು ಪ್ರಾಮಾಣಿಕರಿಗೆ ಮಾಡುವ ಅಪಮಾನವಲ್ಲವೇ?' ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಸಚಿವರ ಸಮರ್ಥನೆ:

ಬಡವರು ಮನೆ ಕಳೆದುಕೊಂಡು ಬೀದಿಗೆ ಬಿದ್ದಾಗ ಅವರಿಗೆ ಆಸರೆ ನೀಡುವುದು ಸರ್ಕಾರದ ಕರ್ತವ್ಯ. ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಯೇ ಅರ್ಹರನ್ನು ಆಯ್ಕೆ ಮಾಡಲಾಗಿದೆ. ಒತ್ತುವರಿ ತೆರವು ಅನಿವಾರ್ಯವಾಗಿತ್ತು, ಆದರೆ ಅಲ್ಲಿ ವಾಸವಿದ್ದ ಬಡ ಕುಟುಂಬಗಳಿಗೆ ಅನ್ಯಾಯವಾಗಬಾರದು ಎಂಬ ದೃಷ್ಟಿಯಿಂದ ಈ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.

PREV
Read more Articles on
click me!

Recommended Stories

ವಿಜಯನಗರ ಜಿಲ್ಲೆಯ ರೌಡಿ ಶೀಟರ್‌ಗಳ ಬೆವರಿಳಿಸಿದ ಖಡಕ್ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ !
ಭೀಕರ ಅಪಘಾತದಲ್ಲಿ ಮೃತಪಟ್ಟ ಮೂವರು ಯುವ ಇನ್ಸ್‌ಪೆಕ್ಟರ್‌ಗಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ; ಸಿಎಂ ಘೋಷಣೆ