ಕೋಡಿ ಮಠದ ಸ್ವಾಮೀಜಿಯಿಂದ ಮತ್ತೊಂದು ಎಚ್ಚರಿಕೆ..!

By Kannadaprabha NewsFirst Published Jan 25, 2021, 11:56 AM IST
Highlights

ಈಗಾಗಲೇ ಅನೇಕ ರೀತಿಯ ಭವಿಷ್ಯಗಳನ್ನು ನುಡಿದಿರುವ ಕೋಡಿಮಠದ ಸ್ವಾಮೀಜಿ ಇದೀಗ ಮತ್ತೊಂದು ಎಚ್ಚರಿಕೆಯನ್ನು ನೀಡಿದ್ದಾರೆ. 

ಅರಸೀಕೆರೆ (ಜ.25):  ರಾಜಕೀಯ ಅಥವಾ ಮತ್ಯಾವುದೋ ಕಾರಣವಿರಬಹುದು. ಆದರೆ ನೆಲ ಜಲದ ವಿಷಯಗಳಲ್ಲಿ ರಾಜ್ಯ ರಾಜ್ಯಗಳ ನಡುವೆ ನಡೆಯುತ್ತಿರುವ ತಿಕ್ಕಾಟ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದೊಡ್ಡಲಿದೆ ಎಂಬುದನ್ನು ಆಳುವ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಎಚ್ಚರಿಕೆ ನೀಡಿದರು.

ನಗರದ ಮಿನಿ ವಿಧಾನಸೌಧ ಬಡಾವಣೆಯ ಜಯಮಾರುತಿ ಆಟೊ ನಿಲ್ದಾಣ ಗೆಳೆಯರ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕೊರೊನಾ ವಾರಿಯರ್ಸ್‌ಗೆ ತಾಲ್ಲೂಕಿನ ಜನತೆಯ ಪರವಾಗಿ ಗೌರವ ಸಮರ್ಪಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಕನ್ನಡ ನಾಡು ನುಡಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಆದರೂ ಒಕ್ಕೂಟದ ವ್ಯವಸ್ಥೆಯನ್ನು ಒಪ್ಪಿ ಸಹಬಾಳ್ವೆಯ ಜೀವನವನ್ನು ನಡೆಸುತ್ತಿರುವ ಕನ್ನಡಿಗರ ಭಾವನೆಗೆ ಇತ್ತೀಚಿನ ವರ್ಷಗಳಲ್ಲಿ ನೆರೆಹೊರೆಯ ರಾಜ್ಯಗಳಿಂದ ನೆಲ-ಜಲ ಹಾಗೂ ಭಾಷೆಯ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಶಾಸಕ ಶಿವಲಿಂಗೇಗೌಡರ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಸ್ವಾಮಿಜಿ, ಬರದ ನಾಡೆಂದು ಹಣೆಪಟ್ಟಿಕಟ್ಟಿಕೊಂಡಿದ್ದ ತಾಲ್ಲೂಕಿನ ಜನತೆ ಕೃಷಿ ಚಟುವಟಿಕೆ ಇರಲಿ ಕುಡಿಯುವ ನೀರಿಗೂ ಮುಗಿಲ ಮಳೆಯನ್ನೇ ಆಶ್ರಯಿಸುತ್ತ ಬಂದಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆ ದೆಸೆಯಲ್ಲಿ ಕ್ಷೇತ್ರದ ಶಾಸಕರಾಗಿ ಚುನಾಯಿತರಾದ ಶಾಸಕ ಶಿವಲಿಂಗೇಗೌಡರು ತಾಲೂಕಿನ ಜನತೆಯ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿದ ಬರದ ನಾಡ ಭಗೀರಥ ಎಂದು ಆಶೀರ್ವದಿಸಿದರು.

ಮಹಾಮಾರಿ ಕೊರೋನಾ ಬಗ್ಗೆ ಭವಿಷ್ಯ ನುಡಿದ ಶಾಂತಲಿಂಗ ಮಹಾಸ್ವಾಮಿ

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಸಾಂಸ್ಕೃತಿಕ ಹಾಗೂ ವೇದಿಕೆಯ ಭಾಷಣಕ್ಕೆ ಸೀಮಿತವಾಗದೆ ನಾಡು ನುಡಿ ನೆಲ ಜಲ ಹಾಗೂ ಇತಿಹಾಸದ ಬಗ್ಗೆ ಚರ್ಚಿಸುವ ವೇದಿಕೆಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.ನಮ್ಮ ಭಾಷೆ-ನೆಲ ಅಥವಾ ಕನ್ನಡಿಗರ ಮೇಲೆ ನಡೆಯುವ ದೌರ್ಜನ್ಯಗಳನ್ನು ಕನ್ನಡಪರ ಸಂಘಟನೆಗಳು ಹೋರಾಡಿ ಖಂಡಿಸಿದರೆ ಸಾಲದು ಪ್ರತಿಯೊಬ್ಬರು ನಾಡು ನುಡಿ ನೆಲ ಜಲದ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ಬೆಳಗಾವಿ ಕುರಿತು ಮಹಾರಾಷ್ಟ್ರ ಕಾವೇರಿ ನದಿನೀರು ಕುರಿತು ತಮಿಳುನಾಡು ರಾಜಕಾರಣಿಗಳು ಉದ್ಘಟತನದ ಹೇಳಿಕೆಯನ್ನೂ ನೀಡುವುದಿಲ್ಲ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಎಂ.ಸಮೀವುಲ್ಲಾ ಮಾತನಾಡಿದರು. ನಗರಸಭೆ ಪೌರಾಯುಕ್ತ ಕಾಂತರಾಜು, ತಾ ಪಂ ಮಾಜಿ ಸದಸ್ಯ ಗಂಗಾಧರ್‌ ಶಿವಣ್ಣ, ಮಂಜುರಾಜ್‌, ಜಿಲ್ಲಾ ಕರವೇ ಉಪಾಧ್ಯಕ್ಷ ತುಳಸೀದಾಸ್‌, ತಾಲೂಕು ಅಧ್ಯಕ್ಷ ಹೇಮಂತ್‌ ಕುಮಾರ್‌. ನಗರಾಧ್ಯಕ್ಷ ಕಿರಣ್‌ ಕುಮಾರ್‌, ನಗರಸಭೆ ಸದಸ್ಯರಾದ ಜಿಟಿ ಗಣೇಶ್‌.ಪುಟ್ಟರಾಜು. ಸಿಕಂದರ್‌, ಟಿಪ್ಪು, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಟಿ.ಆನಂದ್‌, ಹಿರಿಯ ಪತ್ರಕರ್ತ ಪಿ. ಶಾಂತಕುಮಾರ್‌, ಸನ್ಮಾನಿತರಾದ ಸರಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯ ವೈದ್ಯಾ​ಕಾರಿ ಡಾ.ಷಡಕ್ಷರಿ, ಪೊಲೀಸ್‌ ಇಲಾಖೆಯ ಚಂದ್ರಮೌಳಿ, ಪಿ.ಡಿ.ಒ. ಆಶಾ, ಜೆಡಿಎಸ್‌ ಮುಖಂಡರಾದ ವೈ.ಕೆ.ದೇವರಾಜು ಸಹ್ಯಾದ್ರಿ ಧರ್ಮೇಶ್‌, ಕಾರ್ಯಕ್ರಮ ಆಯೋಜಕರಾದ ವಿನಾಯಕ, ರಘು.ಪ್ರದೀಪ್‌.ಯೋಗೀಶ್‌ ಇದ್ದರು.

click me!