
ಕೊಡಗು (ಆ.19): ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರಿ ಹೈಡೆಲ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ 'ಚಿದಾನಂದ' ಎಂಬ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಭಾನುವಾರದಿಂದ ಕಾಣೆಯಾಗಿದ್ದ ಆತ, 3 ದಿನಗಳ ತೀವ್ರ ಹುಡುಕಾಟದ ನಂತರ ಇಂದು ಜಲಪಾತದಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾನೆ.
ಹಣಕೋಡು ಗ್ರಾಮದ ನಿವಾಸಿಯಾಗಿರುವ ಚಿದಾನಂದ, ಭಾನುವಾರ ತಾನು ಆತ್ಮಹ*ತ್ಯೆ ಮಾಡಿಕೊಳ್ಳುವುದಾಗಿ ತನ್ನ ಸ್ನೇಹಿತನಿಗೆ ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದನು. ಆತ ವಿದ್ಯುತ್ ಉತ್ಪಾದನಾ ಘಟಕದ ನೀರಿನ ಪ್ರದೇಶದ ಕಡೆಗೆ ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ರಕ್ಷಣಾ ತಂಡಗಳು ಕಳೆದ 3 ದಿನಗಳಿಂದ ಆತನ ಪತ್ತೆಗಾಗಿ ಜಲಪಾತದ ಸುತ್ತಮುತ್ತ ಶೋಧ ಕಾರ್ಯಾಚರಣೆ ನಡೆಸುತ್ತಿದ್ದವು.
ನೀರಿನ ರಭಸ ಹೆಚ್ಚಾಗಿದ್ದ ಕಾರಣ ಯುವಕನ ಶವ ಹುಡುಕಾಟಕ್ಕೆ ಅಡ್ಡಿಯಾಗಿತ್ತು. ಆದರೆ ಇಂದು, ಬೀದಳ್ಳಿ ಗ್ರಾಮದ ಸ್ಥಳೀಯ ಯುವಕರು ಜಲಪಾತದೊಳಗೆ ಇಳಿದು ಶೋಧ ನಡೆಸಿದರು. ಅವರ ಪ್ರಯತ್ನದ ಫಲವಾಗಿ ಚಿದಾನಂದನ ಮೃತದೇಹ ಪತ್ತೆಯಾಗಿದೆ. ಅವರು ನೀರಿನ ರಭಸವನ್ನು ಲೆಕ್ಕಿಸದೆ ದೇಹವನ್ನು ಹೊರತೆಗೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಿದಾನಂದನ ಸಾವಿಗೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆತನ ಆತ್ಮಹ*ತ್ಯೆಗೆ ಹಣಕಾಸಿನ ತೊಂದರೆ ಅಥವಾ ಇನ್ನಾವುದೇ ವೈಯಕ್ತಿಕ ಕಾರಣಗಳಿವೆಯೇ ಎಂದು ಪರಿಶೀಲಿಸಲಾಗುತ್ತಿದೆ. ಈ ಘಟನೆ ಸ್ಥಳೀಯರಲ್ಲಿ ಆಘಾತ ಮತ್ತು ದುಃಖವನ್ನುಂಟು ಮಾಡಿದೆ.