ಕೆರೆಗೆ ಹಾರಿದ 14 ವರ್ಷದ ಮಗಳು, ರಕ್ಷಿಸಲು ಮುಂದಾದ ತಾಯಿಯೂ ದಾರುಣ ಸಾವು

Published : Sep 01, 2026, 07:35 PM IST
kodagu news

ಸಾರಾಂಶ

ಕೊಡಗಿನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ತಾಯಿ-ಮಗಳ ದಾರುಣ ಅಂತ್ಯಕ್ಕೆ ಕಾರಣವಾಗಿದೆ. ಕೆರೆಗೆ ಹಾರಿದ ಮಗಳನ್ನು ಉಳಿಸಲು ಹೋದ ತಾಯಿಯೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.

ಕೊಡಗು: ಮುದ್ದಿನಿಂದ ಸಾಕಿದ ಮಗಳು ಓದಿ ದೊಡ್ಡವಳಾಗಲಿ ಎಂಬ ಆಸೆಯಿಂದ ಪತಿ ದೂರವಾದರೂ ಕೂಲಿ ಕೆಲಸ ಮಾಡಿ ಮಗಳನ್ನು ಓದಿಸುತ್ತಿದ್ದ ಆ ತಾಯಿಯ ಬದುಕು ದಾರುಣವಾಗಿ ಅಂತ್ಯಗೊಂಡಿದೆ. ಮಗಳು ಮನೆಗೆ ತಡವಾಗಿ ಬಂದಿದ್ದಕ್ಕೆ ತಾಯಿ ಗದರಿಸಿದ್ದೇ ಇಬ್ಬರ ಪ್ರಾಣಕ್ಕೆ ಕಂಟಕವಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ತಲಕಾವೇರಿ ಸಮೀಪದ ಕೆಂಪರಾಜಮೊಟ್ಟೆ ಕಾಲೋನಿಯಲ್ಲಿ ನಡೆದಿದೆ.

ಮೃತರನ್ನು 45 ವರ್ಷದ ಪ್ರೇಮಾ ಹಾಗೂ ಅವರ 14 ವರ್ಷದ ಮಗಳು ಪ್ರಿಯಾಂಕ ಎಂದು ಗುರುತಿಸಲಾಗಿದೆ. ಪ್ರಿಯಾಂಕ ಕರಿಕೆಯಲ್ಲಿರುವ ಆಶ್ರಮ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಶನಿವಾರ ಶಾಲೆಯಿಂದ ಊರಿಗೆ ಬಂದವಳು ಮನೆಗೆ ತಡವಾಗಿ ಬಂದಿದ್ದಳು. ಈ ವಿಚಾರಕ್ಕೆ ತಾಯಿ ಪ್ರೇಮ ಮಗಳನ್ನು ಪ್ರಶ್ನಿಸಿ ಗದರಿಸಿದ್ದರು. ಇದರಿಂದ ಮನನೊಂದ ಪ್ರಿಯಾಂಕ, ಮನೆಯ ಪಕ್ಕದಲ್ಲೇ ಇರುವ ಕೆರೆಗೆ ಹಾರಿ ಆತ್ಮ*ತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಓಡಿದ್ದಾಳೆ.

20 ಅಡಿ ಆಳದ ಕೆರೆ

ಮಗಳನ್ನು ತಡೆಯಲು ತಾಯಿ ಪ್ರೇಮ ಕೂಡ ಆಕೆಯ ಹಿಂದೆ ಓಡಿದ್ದಾರೆ. ಆದರೆ ಅವರು ಕೆರೆಯ ಹತ್ತಿರ ತಲುಪುವಷ್ಟರಲ್ಲೇ ಪ್ರಿಯಾಂಕ ಕೆರೆಗೆ ಹಾರಿದ್ದಾಳೆ. ಮಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕೆಂದು ಈಜಲು ಬಾರದಿದ್ದರೂ ತಾಯಿ ಪ್ರೇಮ ಕೂಡ ಕೆರೆಗೆ ಹಾರಿದ್ದಾರೆ. ಕೆರೆ ಸುಮಾರು 15 ರಿಂದ 20 ಅಡಿ ಆಳವಿದ್ದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರೂ ಆಳದ ಕಾರಣ ಸಾಧ್ಯವಾಗಲಿಲ್ಲ. ಸೋಮವಾರ ಕತ್ತಲೆಯಾದ ಕಾರಣ ಕಾರ್ಯಾಚರಣೆ ವಿಳಂಬವಾಗಿತ್ತು. ಮಂಗಳವಾರ ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಭಾಗಮಂಡಲ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ಬಡತನದ ನಡುವೆಯೂ ಮಗಳ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದ ತಾಯಿ, ಮಗಳೊಂದಿಗೆ ಜೀವ ಬಿಟ್ಟಿರುವುದು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಘಟನೆ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

(ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು)

PREV
Read more Articles on
click me!

Recommended Stories

ಚಿಕನ್‌ ಪ್ರಿಯರೇ ಗಮನಿಸಿ, ಬೆಂಗ್ಳೂರಲ್ಲಿ ಎರಡು ದಿನ ಕೋಳಿ ಮಾಂಸ ಸಿಗೋದಿಲ್ಲ
‘ನಿಧಿ’ಗಾಗಿ ಮನೆಯೊಳಗೆ 50 ಅಡಿ ಆಳದ ಗುಂಡಿ ತೋಡಿದರು: ಕೊನೆಗೆ ನಡೆದಿದ್ದು ಮಾತ್ರ ರೋಚಕ!