Kodagu: ಮಗು, ವಿವಾಹಿತೆ ಮತಾಂತರ ಆರೋಪ: ಕುಶಾಲನಗರ ಬಂದ್, ಸಾವಿರಾರು ಕಾರ್ಯಕರ್ತರ ಪ್ರತಿಭಟನೆ

Published : Jun 30, 2026, 05:55 PM IST
Kodagu

ಸಾರಾಂಶ

Kodagu: ಟೂರಿಸಂ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ರಾಜೀವ್ ಎಂಬುವರ ಪತ್ನಿಯನ್ನು ಇಲ್ಲಿಯೇ ವ್ಯಾಪಾರ ಮಾಡುತ್ತಿದ್ದ ಕೇರಳಂ ಮೂಲದ ಸಲೀಂ ಎಂಬಾತ ಮೇ ತಿಂಗಳ ಆರಂಭದಲ್ಲಿಯೇ ಕರೆದೊಯ್ದು ವಿವಾಹವಾಗಿದ್ದಾನೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜೂ.30): ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮದ ಮುಂಭಾಗದಲ್ಲಿ ಟೂರಿಸಂ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯನ್ನು ಅನ್ಯ ಧರ್ಮದ ವ್ಯಕ್ತಿಯೊಬ್ಬ ಪ್ರೀತಿಯ ನಾಟಕವಾಡಿ ಕೇರಳಂಗೆ ಕರೆದೊಯ್ದು ಮತಾಂತರ ಮಾಡಿದ್ದಾನೆ ಎಂದು ಆರೋಪಿಸಿ ಕುಶಾಲನಗರದ ಹಿಂದೂ ಸುರಕ್ಷಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಮತಾಂತರವನ್ನು ವಿರೋಧಿಸಿ ಕುಶಾಲನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಟೂರಿಸಂ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ರಾಜೀವ್ ಎಂಬುವರ ಪತ್ನಿಯನ್ನು ಇಲ್ಲಿಯೇ ವ್ಯಾಪಾರ ಮಾಡುತ್ತಿದ್ದ ಕೇರಳಂ ಮೂಲದ ಸಲೀಂ ಎಂಬಾತ ಮೇ ತಿಂಗಳ ಆರಂಭದಲ್ಲಿಯೇ ಕರೆದೊಯ್ದು ವಿವಾಹವಾಗಿದ್ದಾನೆ. ಮಣಪ್ಪುರಂ ಜಿಲ್ಲೆಯ ಮಂಜೇರಿ ಎಂಬ ಗ್ರಾಮದಲ್ಲಿ ಆಕೆಯನ್ನು ಹಾಗೂ ಆಕೆಯ ಒಂಭತ್ತು ವರ್ಷದ ಬಾಲಕನನ್ನು ಮತಾಂತರ ಮಾಡಿಸಿದ್ದಾನೆ ಎಂದು ಆರೋಪಿಸಿ ಹಿಂದೂ ಸುರಕ್ಷಾ ಸಮಿತಿ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮೂರು ಕಿಲೋ ಮೀಟರ್ ಕಾಲ್ನಡಿಗೆ ಜಾಥಾ ಮಾಡಿದರು. ಮಹಿಳೆ ಕೆಲಸ ಮಾಡುತ್ತಿದ್ದ ಟೂರಿಸಂ ಕೇಂದ್ರದಿಂದ ಆರಂಭಿಸಿ ಕುಶಾಲನಗರದ ಕಾರು ನಿಲ್ದಾಣದವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.

ಈ ಕುರಿತು ಕುಶಾಲನಗರ ನಗರ ಪೊಲೀಸ್ ಠಾಣೆಗೂ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ರಾಜೀವ್ ದೂರು ನೀಡಿದ್ದರು. ಸದ್ಯ ವಿವಾಹಿತ ಮಹಿಳೆ, ಸಲೀಂ ಹಾಗೂ ಆತನ ಸ್ನೇಹಿತ ಜಲೀಲ್ ಎಂಬುವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಂದು ನಡೆದ ಜಾಥಾದಲ್ಲಿ ಮಡಿಕೇರಿ ಮಾಜಿ ಶಾಸಕ ಅಪ್ಪಚ್ಚು ರಂಜನ್, ವಿರಾಜಪೇಟೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ವಿವಿಧ ಪ್ರಮುಖ ಮುಖಂಡರು ಭಾಗವಹಿಸಿದ್ದರು.

ಈ ಸಂದರ್ಭ ಮಾತನಾಡಿದ ಹಿಂದೂ ಸುರಕ್ಷಾ ಸಮಿತಿ ಸರ ಸಂಚಾಲಕ ಅಮೃತ್ ರಾಜ್, ಆಕೆಯ ಆರ್ಥಿಕ ದುರ್ಬಲತೆಯನ್ನು ಬಳಕೆ ಮಾಡಿಕೊಂಡ ಸಲೀಂ ಎಂಬಾತ ಆಕೆಗೆ ಹಣದ ಆಮಿಷವೊಡ್ಡಿ ಮತಾಂತರ ಮಾಡಿಸಿದ್ದಾನೆ. ಆಕೆಯ ಒಂಭತ್ತು ವರ್ಷದ ಬಾಲಕನಿಗೆ ಸುನ್ನತ್ ಮಾಡಿಸಿದ್ದಾನೆ. ಎನ್ಟಿಸಿ ಕಂಪೆನಿಯ ಟೂರಿಸಂ ಕೇಂದ್ರದಲ್ಲಿ ಧರ್ಮ ವಿರೋಧಿ ಮತ್ತು ದೇಶದ್ರೋಹಿ ಕೆಲಸಗಳು ನಡೆಯುತ್ತಿದ್ದು ಅದನ್ನು ತನಿಖೆ ಮಾಡುವಂತೆ ಆಗ್ರಹಿಸಿದ್ದಾರೆ.

ಜಾಥಾದ ಬಳಿಕ ಕಾರು ನಿಲ್ದಾಣದಲ್ಲಿ ಜಾಗೃತಿ ಸಮಾವೇಶ ಕೂಡ ನಡೆಯಿತು. ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಹಿಂದೂ ಜಾಗರಣ ವೇದಿಕೆ ದಕ್ಷಿಣ ಕರ್ನಾಟಕ ಪ್ರಾಂತ ಸರ ಸಂಚಾಲಕ ಸತೀಶ್ ದಾವಣಗೆರೆ ಇಡೀ ದೇಶದಲ್ಲಿಯೇ ಲವ್ ಜಿಹಾದ್ ನಡೆಯುತ್ತಿದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಆಗಬೇಕು. ಇಲ್ಲದಿದ್ದರೆ ಹಿಂದೂ ಧರ್ಮಕ್ಕೆ ಅಪಾಯ ಎದುರಾಗಲಿದೆ ಎಂದರು. ಎನ್ಟಿಸಿ ಹೆಸರಿನ ವ್ಯಾಪಾರ ಕೇಂದ್ರದ ಮಾಲೀಕ ಹಿಂದೂ ಧರ್ಮದ ಹೆಣ್ಣುಮಕ್ಕಳು, ಮಹಿಳೆಯರನ್ನು ಹೆಚ್ಚಿನ ವೇತನ ಹಾಗೂ ಕಮಿಷನ್ ನೀಡುವ ಆಮಿಷವೊಡ್ಡಿ ಕೆಲಸಕ್ಕೆ ಸೇರಿಸಿಕೊಂಡು ಮತಾಂತರಕ್ಕೆ ಸಹಕಾರಿಯಾಗುತ್ತಿದ್ದಾನೆ.

ಅರಿವು ಮೂಡಿಸುವ ಕೆಲಸ

ಆ ಟೂರಿಸಂ ಸೆಂಟರ್ನಲ್ಲಿ ಇರುವ 70 ಮಳಿಗೆಗಳಲ್ಲಿ ಎಲ್ಲವನ್ನೂ ಕೇವಲ ಒಂದೇ ಧರ್ಮದ ಜನರಿಗೆ ಬಾಡಿಗೆ ನೀಡಿದ್ದಾನೆ. ಹೀಗಾಗಿ ಹಿಂದೂ ಧರ್ಮದ ಜನರು ಅಲ್ಲಿ ಎನ್ನನ್ನೂ ಕೊಳ್ಳದಂತೆ ಎಚ್ಚರಿಸುವ ಕೆಲಸ ಮಾಡಬೇಕು. ಟೂರಿಸಂ ಕೇಂದ್ರವಾಗಿರುವ ಅಲ್ಲಿಗೆ ಬರುವ ಪ್ರವಾಸಿಗರಿಗೂ ಅಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎನ್ನುವುದನ್ನು ತಿಳಿಸಿ ಅವರಿಗೂ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು.

ಎಲ್ಲಕ್ಕಿಂತ ಮುಖ್ಯವಾಗಿ ಅವರು ನಮ್ಮ ಒಂದು ಹೆಣ್ಣು ಮಗಳನ್ನು ಕರೆದೊಯ್ದು ಮದುವೆಯಾದರೆ, ಅವರ 10 ಹೆಣ್ಣುಮಕ್ಕಳನ್ನು ಮದುವೆಯಾಗಿ ಕರೆದುಕೊಂಡು ಬರುವಂತೆ ನೆರೆದಿದ್ದ ಹಿಂದೂ ಕಾರ್ಯಕರ್ತರಿಗೆ ವಿವಾದಾತ್ಮಕವಾಗಿ ಹೇಳಿದರು. ಒಟ್ಟಿನಲ್ಲಿ ವಿವಾಹಿತ ಹಿಂದೂ ಮಹಿಳೆಯನ್ನು ಅನ್ಯಧರ್ಮದ ವ್ಯಕ್ತಿಯೊಬ್ಬ ವಿವಾಹವಾಗಿ ಬಳಿಕ ಆಕೆಯನ್ನು ಮತ್ತು ಆಕೆಯ ಪುತ್ರನನ್ನು ಮತಾಂತರ ಮಾಡಿರುವುದಕ್ಕೆ ಕೊಡಗಿನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಾಗಿದೆ.

PREV
Read more Articles on
click me!

Recommended Stories

ಅಡ್ಡಮತದಾನದ ಆರೋಪ: ಬೇಲೂರು ಚನ್ನಕೇಶವ , ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಶಾಸಕ ಸುರೇಶ್ ಆಣೆ ಪ್ರಮಾಣ!
ಬೆಂಗಳೂರು ಬಿಟ್ರೆ ಹೂಡಿಕೆಗೆ ರಾಜ್ಯದ ಈ ಜಿಲ್ಲೆಯೇ ಈಗ ನಂಬರ್ 1! ಇದರ ಅದ್ಭುತ ಬೆಳವಣಿಗೆ ಹಿಂದಿರುವ ಅಸಲಿ ಕಾರಣಗಳಿವು!