ಕೊಡಗು ಕೆಸರುಗದ್ದೆ ಕ್ರೀಡಾಕೂಟ: ಕೆಸರಲ್ಲಿ ಮಿಂದೆದ್ದರು ಕೂಡ್ಲೂರು ಪ್ರೌಢಶಾಲಾ ವಿದ್ಯಾರ್ಥಿಗಳು!

By Govindaraj SFirst Published Aug 25, 2024, 7:29 PM IST
Highlights

ಒಂದೆಡೆ ಗೆಲ್ಲುವ ತವಕ, ಇನ್ನೊಂದೆಡೆ ಕೆಸರಿನ ಗದ್ದೆಯಲ್ಲಿ ವಿವಿಧ ಕ್ರೀಡೆಗಳ  ಸಂಭ್ರಮ. ಮತ್ತೊಂದೆಡೆ ಕೆಸರು ನೀರಿನಲ್ಲಿ ಚೆಲ್ಲಾಟ ಒಂದೆರಡಲ್ಲ ಈ ವಿದ್ಯಾರ್ಥಿಗಳ ಕಾಟ. 
 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಆ.25): ಒಂದೆಡೆ ಗೆಲ್ಲುವ ತವಕ, ಇನ್ನೊಂದೆಡೆ ಕೆಸರಿನ ಗದ್ದೆಯಲ್ಲಿ ವಿವಿಧ ಕ್ರೀಡೆಗಳ  ಸಂಭ್ರಮ. ಮತ್ತೊಂದೆಡೆ ಕೆಸರು ನೀರಿನಲ್ಲಿ ಚೆಲ್ಲಾಟ ಒಂದೆರಡಲ್ಲ ಈ ವಿದ್ಯಾರ್ಥಿಗಳ ಕಾಟ. ಹೌದು ಕೊಡಗು ಜಿಲ್ಲೆಯ ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡು ಮಂಗಳೂರು - ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಕೂಡ್ಲೂರು ಗ್ರಾಮದ ಪ್ರಗತಿಪರ ರೈತ ಕೆ.ಎಸ್.ರಾಜಾಚಾರಿ ಅವರ ಗದ್ದೆಯಲ್ಲಿ ಜನಪದ ಶೈಲಿಯ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ ಸಂಭ್ರಮ, ಸಡಗರದಿಂದ ನಡೆಯಿತು. ಕೆಸರಿನ ಗದ್ದೆಗಳಲ್ಲಿ ಧುಮುಕಿ ಮೈ ಚಳಿ ಬಿಟ್ಟು ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. 

Latest Videos

ಓಟದ ಸ್ಪರ್ಧೆಯಲ್ಲಿ ಹಲವರು ಕೆಸರಿನಲ್ಲಿ ಬಿದ್ದರೂ, ಮತ್ತೆ ಎದ್ದು ಓಡಿ ಗಮನ ಸೆಳೆದರು. ಜೊತೆಗೆ ಹಗ್ಗಜಗ್ಗಾಟವಂತೂ ಮೈನವಿರೇಳಿಸುವಂತಿತ್ತು. ಕ್ರೀಡಾಕೂಟದಲ್ಲಿ ಶಾಲಾ ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಮಿಂದೆದ್ದು, ಆಟವಾಡುತ್ತಾ ಕುಣಿದು ಕುಪ್ಪಳಿಸಿದರು. ಕೆಸರು ಗದ್ದೆಯಲ್ಲಿ ಮಕ್ಕಳ ಓಟದ ಸ್ಪರ್ಧೆ, ಹಗ್ಗ ಜಗ್ಗಾಟ, ವಾಲಿಬಾಲ್, ಥ್ರೋಬಾಲ್ ಟೂರ್ನಿ ,  ಬೊಗಸೆಯಿಂದ ಲೋಟಕ್ಕೆ ನೀರು ತುಂಬಿಸುವ ಸ್ಪರ್ಧೆ ಸೇರಿದಂತೆ ಇನ್ನಿತರ ಕ್ರೀಡಾ ಸ್ಪರ್ಧೆಗಳಲ್ಲಿ ಮಕ್ಕಳು ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಗಮನ ಸೆಳೆಯಿತು.

ಗದ್ದೆಯಲ್ಲಿ ಕೆಸರು ಮೆದ್ದಿಕೊಂಡು ಹಗ್ಗ ಜಗ್ಗಾಟದಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ತಮ್ಮ ತಂಡವು ಗೆಲ್ಲಬೇಕೆಂಬ ಹರಸಾಹಸದಿಂದ ತಮ್ಮ ಬಲವನ್ನು ಪ್ರದರ್ಶಿಸುತ್ತಿದ್ದರು. ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಕ್ಕಳೊಂದಿಗೆ ಕೆಸರುಗದ್ದೆಗೆ ಇಳಿದು ಮಕ್ಕಳೊಂದಿಗೆ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಕೆಸರು ಗದ್ದೆ ಕ್ರೀಡೆಯ ಮಹತ್ವದ ಕುರಿತು ಮಾಹಿತಿ ನೀಡಿದರು. ಜನಪದ ಶೈಲಿಯ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟವನ್ನು ವಿದ್ಯಾರ್ಥಿಗಳಲ್ಲಿ ರೈತರ ಕೃಷಿ ಬದುಕಿನೊಂದಿಗೆ ರೈತರ ಜೀವನದ ಕಷ್ಟಸುಖಗಳನ್ನು ಅರ್ಥ ಮಾಡಿಕೊಳ್ಳುವ ದಿಸೆಯಲ್ಲಿ ಸಂಘಟಿಸಲಾಗಿದೆ. 

ದೆಹಲಿಯಂತೆ ಬೆಂಗಳೂರಿನಲ್ಲೂ ಪಾಲಿಕೆ ಬಜಾರ್: ಶಾಸಕ ಎಂ.ಕೃಷ್ಣಪ್ಪ

ಕೃಷಿ ಪ್ರಧಾನವಾದ ಕೊಡಗಿನಲ್ಲಿ ಮಳೆಗಾಲದಲ್ಲಿ ಕೆಸರು ಗದ್ದೆ ಕ್ರೀಡಾಕೂಟಗಳು ಬಲು ಜನಪ್ರಿಯವಾಗಿವೆ.  ಭತ್ತದ ಗದ್ದೆ ನಾಟಿ ಸಂದರ್ಭದಲ್ಲಿ ರೈತಾಪಿ ಜನರು ಒಂದೆಡೆ ಸೇರಿ ಸಹಬಾಳ್ವೆ ಹಾಗೂ ಮನೋರಂಜನೆಗಾಗಿ ನಡೆಸಿಕೊಂಡು ಬರುತ್ತಿರುವ ಕೆಸರು ಗದ್ದೆ ಕ್ರೀಡಾಕೂಟಗಳು ವಿಶೇಷವಾಗಿದ್ದು ಜನಪ್ರಿಯತೆ ಗಳಿಸಿದೆ ಎಂದರು. ಕೆಸರು ಗದ್ದೆ ನಮ್ಮ ಮಣ್ಣಿನ ರೈತರ ಬದುಕಿನ ಸಂಕೇತ. ಕೆಸರು ಗದ್ದೆ ಕ್ರೀಡಾ ಕೂಟದಿಂದ ಗ್ರಾಮೀಣ ಸೊಗಡು, ಸಂಸ್ಕೃತಿ ಮತ್ತು ಭವ್ಯ ಪರಂಪರೆಯ ಅನಾವರಣ ಸಾಧ್ಯ. ಸಂಸ್ಕೃತಿಯಲ್ಲಿ ಮಣ್ಣಿಗೆ ಬಹಳಷ್ಟು ಮಹತ್ವವಿದೆ. ಮನುಷ್ಯನಿಗೂ ಮಣ್ಣಿಗೂ ಅವಿನಾಭಾವ ಸಂಬಂಧವಿದೆ ಎಂದು ಟಿ.ಜಿ.ಪ್ರೇಮಕುಮಾರ್ ಹೇಳಿದರು.

click me!