
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಆ.21): ವಿವಿಧ ಜಿಲ್ಲೆ, ರಾಜ್ಯಗಳಿಂದ ವೈದ್ಯ ಪದವಿಯನ್ನು ಓದಿ ನಾವು ಭವಿಷ್ಯದಲ್ಲಿ ವೈದ್ಯರಾಗಬೇಕು ಎನ್ನುವ ಕನಸು ಕಂಡು ಬಂದವರು. ಆದರೆ ಅವರು ಓದುತ್ತಿರುವ ಸ್ಥಳದಲ್ಲಿ ಗಾಂಜಾ, ಡ್ರಗ್ಸ್ ಸೇವಿಸಿ ಬಂದ ಪುಂಡರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಕೊಡಗು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ರಕ್ಷಣೆ ಬೇಕು ಎಂದು ಬೀದಿಗಿಳಿದಿದ್ದಾರೆ. ನಾಲ್ಕು ಹೆಜ್ಜೆ ನಡೆದರೂ ತರಗತಿ ಕೊಠಡಿಗಳಿಗೆ ಹೋಗಬಹುದು. ಆದರೂ ಭಯಭೀತರಾಗಿ ಹಾಸ್ಟೆಲ್ ಬಿಟ್ಟು ಹೊರಗೆ ಬಾರದ ವಿದ್ಯಾರ್ಥಿನಿಯರು. ಕಾಲೇಜು ಬಳಿಗೆ ಬಂದಿದ್ದರೂ ತರಗತಿ ಹೊರಗೆ ನಿಂತಿರುವ ವಿದ್ಯಾರ್ಥಿಗಳು.
ಇದು ಕೊಡಗು ಮೆಡಿಕಲ್ ಕಾಲೇಜಿನಲ್ಲಿ ಸೋಮವಾರ ಕಂಡು ಬಂದ ದೃಶ್ಯ. ಮಡಿಕೇರಿ ಹೊರವಲಯದಲ್ಲಿರುವ ವೈದ್ಯಕೀಯ ಕಾಲೇಜು ಬಳಿಗೆ ಆಗಸ್ಟ್ 18 ರ ರಾತ್ರಿ 12. 30 ಸಂದರ್ಭದಲ್ಲಿ ಅಪರಿಚಿತ ಯುವಕರಿಬ್ಬರು ಬೈಕಿನಲ್ಲಿ ಆಗಮಿಸಿದ್ದರು. ಬಂದವರೇ ವಿದ್ಯಾರ್ಥಿನಿಯರ ಹಾಸ್ಟೆಲ್ ಸಮೀಪ ಹೋಗಿ ಅಸಭ್ಯವಾಗಿ ವರ್ತಿಸಿದ್ದರು. ಇದರಿಂದ ಹೆದರಿದ್ದ ವಿದ್ಯಾರ್ಥಿನಿಯರು ಹಾಸ್ಟೆಲ್ ವಾರ್ಡನ್ಗೆ ಮಾಹಿತಿ ನೀಡಿದ್ದರು. ಇದು ಅಷ್ಟಕ್ಕೇ ನಿಲ್ಲಲಿಲ್ಲ. 19 ರ ರಾತ್ರಿಯೂ ಆಟೋದಲ್ಲಿ ಯುವಕನೊಬ್ಬ ಬಂದು, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಈ ವಿಷಯ ಗೊತ್ತಾಗಿ ಹಾಸ್ಟೆಲ್ ವಿದ್ಯಾರ್ಥಿಗಳು 20 ನೇ ತಾರೀಖಿನಂದು ಸ್ಥಳೀಯ ಯುವಕರನ್ನು ಕೇಳಲು ಹೋದಾಗ ನೇರವಾಗಿ ವಿದ್ಯಾರ್ಥಿಗಳಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
HIV, ಏಡ್ಸ್ ಪೀಡಿತರಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ: ಸಮಸ್ಯೆಗಳನ್ನ ಬಿಚ್ಚಿಟ್ಟ ಸೋಂಕಿತರು!
ಜೊತೆಗೆ ನಿಮ್ಮ ಕಾಲೇಜಿನ ವಿದ್ಯಾರ್ಥಿನಿಯರನ್ನು ಎತ್ತಾಕಿಕೊಂಡು ಹೋಗಿ ರೇಪ್ ಮಾಡುತ್ತೇವೆ ಎಂದೆಲ್ಲಾ ಧಮ್ಕಿ ಹಾಕಿದ್ದಾರೆ ಎಂದು ವಿದ್ಯಾರ್ಥಿ ಮನೋಜ್ ಅಸಮಾದಾನ ವ್ಯಕ್ತಪಡಿಸಿದರು. ಸ್ಥಳೀಯ ಅಪರಿಚಿತ ಯುವಕರು ಮಾದಕ ವಸ್ತುಗಳನ್ನು ಸೇವಿಸಿ ಬಂದು ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಇದನ್ನು ಕಾಲೇಜು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈಗಾಗಲೇ ಎರಡು ಮೂರು ಬಾರಿ ಸ್ಥಳೀಯ ಯುವಕರಿಂದ ಕಿರುಕುಳ ಆಗಿರುವುದನ್ನು ಗಮನಕ್ಕೆ ತಂದಿದ್ದೇವೆ. ನಾವು ಅಧಿಕಾರಿಗಳನ್ನು ಕೇಳಿದರೆ ನಿಮ್ಮನ್ನು ಫೇಲ್ ಮಾಡುತ್ತೇವೆ ಎಂದು ಭಯ ಹುಟ್ಟಿಸುತ್ತಾರೆ.
ಹೀಗಾಗಿ ಇಷ್ಟು ದಿನ ಎಲ್ಲವನ್ನು ಸಹಿಸಿಕೊಂಡಿದ್ದೆವು. ಆದರೆ ಈಗ ಹಾಸ್ಟೆಲ್ ಒಳಗೂ ಇರಲು ಭಯವಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಕಾಲೇಜಿಗೂ ಹೋಗದೆ ಹೊರ ಉಳಿದಿದ್ದೇವೆ ಎಂದು ಹಾಸ್ಟೆಲ್ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳು ಎದುರಾಗುವುದಕ್ಕೆ ಮುಖ್ಯ ಕಾರಣ ಕಾಲೇಜು ಮುಖ್ಯದ್ವಾರಕ್ಕೆ ಗೇಟೇ ಇಲ್ಲ. ಗೇಟಿನಿಂದ ಕಾಲೇಜು ಆವರಣದವರೆಗೆ ಬರುವ ರಸ್ತೆಯಲ್ಲಿ ಸರಿಯಾದ ವಿದ್ಯುತ್ ದೀಪಗಳಿಲ್ಲ. ಅಗತ್ಯ ಇರುವ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳಿಲ್ಲ. ಇವುಗಳ ಬಗ್ಗೆ ಕೇಳಿದರೆ ನಮ್ಮನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಲಾಗುತ್ತದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
‘ನಮ್ನೀರು, ನಮ್ಹಕ್ಕು’ ಎಂದವರು ತ.ನಾಡಿಗೆ ಬಿಟ್ಟಿದ್ದೇಕೆ?: ಎಚ್.ಡಿ.ಕುಮಾರಸ್ವಾಮಿ
ಈ ಕುರಿತು ಹಾಸ್ಟೆಲ್ ನ ಮುಖ್ಯ ವಾರ್ಡ್ ಕುಶ್ವಂತ್ ಕೋಳಿಬೈಲು ಅವರನ್ನು ಕೇಳಿದರೆ, ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದೆವು. ಇನ್ನು ಗೇಟ್ ಮಾಡಿಸಲು ಲಕ್ಷಾಂತರ ರೂಪಾಯಿ ಹಣ ಬೇಕಾಗಿದ್ದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಕೊಡಗು ವೈದ್ಯಕೀಯ ಕಾಲೇಜು ಬಳಿ ಗಾಂಜಾ ಪುಂಡರ ಹಾವಳಿ ಮಿತಿ ಮೀರಿದ್ದು ವಿದ್ಯಾರ್ಥಿಗಳು ಆತಂಕದಲ್ಲಿ ಬದುಕುವಂತೆ ಆಗಿದೆ. ಸದ್ಯ ತರಗತಿ ಬಹಿಷ್ಕರಿಸಿ ಕಾಲೇಜಿಗೆ ಹೋಗದೆ ಹಾಸ್ಟೆಲ್ ಬಳಿಯೇ ವಿದ್ಯಾರ್ಥಿಗಳು ಜಮಾಯಿಸಿದ್ದರಿಂದ ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಘಟನೆಗೆ ಕಾರಣವಾದವರನ್ನು ಬಂಧಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.