Kodagu: ಸ್ಮಶಾನದ ಜಾಗ ಒತ್ತುವರಿ ಮಾಡಿ ಕಾಫಿತೋಟ ಮಾಡಿದ ಭೂಪ: ಅಣಕು ಶವವಿಟ್ಟು ಪ್ರತಿಭಟನೆ

By Govindaraj SFirst Published Sep 23, 2024, 8:35 PM IST
Highlights

ಮನುಷ್ಯನ ಸಾವಿನ ಬಳಿಕ ಅದಕ್ಕೊಂದು ಗೌರವ ಸಲ್ಲಿಸಬೇಕು ಎಂದರೆ ಮೃತದೇಹಕ್ಕೆ ವಿಧಿವಿಧಾನಗಳ ಪ್ರಕಾರ ಗೌರವಯುತವಾಗಿ ಸಂಸ್ಕಾರ ಮಾಡಬೇಕು ಎನ್ನುವುದು ಹಿಂದೂ ಧರ್ಮದ ನಂಬಿಕೆ. ಆದರೆ ಇಲ್ಲಿನ ಅಂತ್ಯ ಸರ್ಕಾರ ಮಾಡುವುದಕ್ಕೂ ಜಾಗವಿಲ್ಲ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಸೆ.22): ಮನುಷ್ಯನ ಸಾವಿನ ಬಳಿಕ ಅದಕ್ಕೊಂದು ಗೌರವ ಸಲ್ಲಿಸಬೇಕು ಎಂದರೆ ಮೃತದೇಹಕ್ಕೆ ವಿಧಿವಿಧಾನಗಳ ಪ್ರಕಾರ ಗೌರವಯುತವಾಗಿ ಸಂಸ್ಕಾರ ಮಾಡಬೇಕು ಎನ್ನುವುದು ಹಿಂದೂ ಧರ್ಮದ ನಂಬಿಕೆ. ಆದರೆ ಇಲ್ಲಿನ ಅಂತ್ಯ ಸರ್ಕಾರ ಮಾಡುವುದಕ್ಕೂ ಜಾಗವಿಲ್ಲ. ಅದಕ್ಕೆ ಕಾರಣ ಸ್ಮಶಾನಕ್ಕೆಂದು ನಿಗಧಿ ಮಾಡಿರುವ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಕಬಳಿಸಿದ್ದು, ಕಾಫಿತೋಟವನ್ನಾಗಿ ಪರಿವರ್ತಿಸಿದ್ದಾರೆ. ಇದರಿಂದ ಶವ ಸಂಸ್ಕಾರ ಮಾಡಿದ ಜಾಗದಲ್ಲೇ ಗುಂಡಿತೆಗೆದು ಮತ್ತೊಂದು ಶವ ಸಂಸ್ಕಾರ ಮಾಡಬೇಕಾದ ದುಃಸ್ಥಿತಿ ಅನುಭವಿಸುವಂತೆ ಆಗಿದೆ. ಇಂತಹ ಅಮಾನವೀಯ ಪರಿಸ್ಥಿತಿಯನ್ನು ಅನುಭವಿಸುತ್ತಿರುವುದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮದಲ್ಲಿ. 

Latest Videos

12 ಸಾವಿರ ಜನ ಸಂಖ್ಯೆ ಇರುವ ನೆಲ್ಯಹುದಿಕೇರಿಗೆ ಸರ್ವೇ ನಂಬರ್ 183 ರಲ್ಲಿ 1 ಏಕರೆ 08 ಸೆಂಟ್ ಸರ್ಕಾರಿ ಜಾಗವನ್ನು ಸ್ಮಶಾನಕ್ಕಾಗಿ ನೀಡಲಾಗಿತ್ತು. ಆದರೆ ಈ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಸಂಪೂರ್ಣ ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಯಾರೇ ಸತ್ತರು ಕಾವೇರಿ ನದಿ ದಂಡೆಯಲ್ಲಿ ಇರುವ ಸಣ್ಣ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಹೆಚ್ಚಿನ ಜನ ಸಂಖ್ಯೆ ಇರುವ ಈ ಗ್ರಾಮದಲ್ಲಿ ಕಡಿಮೆ ಅವಧಿಯಲ್ಲೇ ವಿವಿಧ ಕಾರಣಗಳಿಂದ ಜನರು ಸಾವನ್ನಪ್ಪುತ್ತಿದ್ದು ಅವರನ್ನು ಹೂಳುವುದಕ್ಕೂ ಜಾಗವಿಲ್ಲದೆ ಪರದಾಡುವಂತೆ ಆಗಿದೆ. ಇದೀಗ ಕಾವೇರಿ ನದಿಯ ದಂಡೆಯಲ್ಲೂ ಜಾಗ ಖಾಲಿಯಾಗಿರುವುದರಿಂದ ಬೇರೆ ಜಾಗವಿಲ್ಲದೆ ಒಬ್ಬರನ್ನು ಹೂತಿದ್ದ ಜಾಗದಲ್ಲೇ ಗುಂಡಿ ತೆಗೆದು ಮತ್ತೊಂದು ಹೆಣ ಹೂಳಬೇಕಾಗಿದೆ. 

ಕುಟುಂಬ ಸಮೇತರಾಗಿ ಧರ್ಮಸ್ಥಳ ಮಂಜುನಾಥ, ಕುಕ್ಕೆ ಸುಬ್ರಹ್ಮಣ್ಯ ದರ್ಶನ ಪಡೆದ ನಿಖಿಲ್ ಕುಮಾರಸ್ವಾಮಿ

ಒಂದು ಹೆಣ ಹೂತಿರುವ ಪಕ್ಕದಲ್ಲಿ ಮತ್ತೊಂದು ಹೆಣ ಹೂಳಬೇಕಾದರೂ ಅಕ್ಕಪಕ್ಕದಲ್ಲಿರುವ ಸಮಾಧಿಗಳ ಮೇಲೆ ನಿಂತು ಶವ ಸಂಸ್ಕಾರ ಮಾಡಬೇಕಾಗಿದೆ. ಶವ ಸಂಸ್ಕಾರ ಮಾಡಬೇಕಾದರೆ ಮತ್ತೊಂದು ಶವವನ್ನು ಹೂತಿರುವ ಜಾಗದಲ್ಲೇ ಗುಂಡಿ ತೆಗೆಯಬೇಕಾಗಿರುವುದರಿಂದ ಸತ್ತ ವ್ಯಕ್ತಿಗಳಿಗೆ ಯಾವುದೇ ಗೌರವವಿಲ್ಲದಂತೆ ನಡೆದುಕೊಳ್ಳಬೇಕಾದ ದುಃಸ್ಥಿತಿ ಇದೆ. ಇದೆಲ್ಲವೂ ಹಿಂದೂ ಧರ್ಮದ ಆಚರಣೆಗಳಿಗೆ ತೀವ್ರ ಅಪಮಾನ ಮಾಡಿದಂತೆ ಆಗುತ್ತಿದೆ. ಹೀಗಾಗಿ ಖಾಸಗಿ ವ್ಯಕ್ತಿಯಿಂದ ಒತ್ತುವರಿಯಾಗಿರುವ ಸ್ಮಶಾನದ ಜಾಗವನ್ನು ತೆರವು ಮಾಡಿಸಿಕೊಡುವಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸ್ಮಶಾನದ ಜಾಗವನ್ನು ಬಿಡಿಸಿಕೊಡುವಂತೆ ಎಷ್ಟು ಬಾರಿ ಮನವಿ ಮಾಡಿದರೂ ಪಂಚಾಯಿತಿ ಅಥವಾ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದರಿಂದ ಅಲ್ಲಿನ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಮುಖಂಡರು ನೆಲ್ಯಹುದಿಕೇರಿ ಪಂಚಾಯಿತಿ ಎದುರು ಅಣಕು ಶವವಿಟ್ಟು ಪ್ರತಿಭಟನೆ ನಡೆಸಿದರು. ಬಳಿಕ ಪಂಚಾಯಿತಿ ಬಳಿಯಿಂದ ಕಾವೇರಿ ಹೊಳೆ ದಂಡೆಯವರೆಗೂ ಅಣಕು ಶವಯಾತ್ರೆ ನಡೆಸಿದರು. ಈ ಸಂದರ್ಭ ಮಾತನಾಡಿದ ಪಿ.ಆರ್. ಭರತ್ ಅವರು ಒತ್ತುವರಿಯಾಗಿರುವ ಸ್ಮಶಾನದ ಜಾಗವನ್ನು ಕೂಡಲೇ ತೆರವು ಮಾಡಿಸಿಕೊಡಬೇಕು. ಸದ್ಯ ಅಣಕುಶವವಿಟ್ಟು ಪ್ರತಿಭಟನೆ ಮಾಡಿದ್ದೇವೆ. 

ನಾಗಮಂಗಲ ಗಲಭೆ ಬಳಿಕ ಬೀದಿಗೆ ಬಂತು ಜನರ ಬದುಕು: ನಿಖಿಲ್‌ ಕುಮಾರಸ್ವಾಮಿ

ಸ್ಮಶಾನ ಜಾಗವನ್ನು ಬಿಡಿಸಿಕೊಡದಿದ್ದರೆ ಮುಂದಿನ ದಿನಗಳಲ್ಲಿ ನೈಜ ಶವವನ್ನೇ ಪಂಚಾಯಿತಿ ಎದುರು ಇಟ್ಟು ಪ್ರತಿಭಟನೆ ಮಾಡುತ್ತೇವೆ. ಇಲ್ಲವೇ ಪಂಚಾಯಿತಿ ಎದುರೇ ಶವ ಸಂಸ್ಕಾರ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ನಮ್ಮ ಕುಟುಂಬಸ್ಥರು ಯಾರಾದರೂ ಮೃತಪಟ್ಟವರನ್ನು ಹೂತಿದ್ದರೆ, ಅದೇ ಜಾಗದಲ್ಲಿ ಮತ್ತೊಬ್ಬರ ಶವ ಸಂಸ್ಕಾರ ಮಾಡಲಾಗುತ್ತಿದೆ. ನಾವು ವರ್ಷದ ಬಳಿಕ ಬಂದು ಪೂಜೆ ಸಲ್ಲಿಸಲು ಹೋದಲ್ಲಿ ಅಲ್ಲಿ ಯಾರದ್ದೋ ಸಮಾಧಿ ಇರುತ್ತದೆ. ಈ ನೋವನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಮೋನಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಶವ ಸಂಸ್ಕಾರಕ್ಕೆ ಇಲ್ಲಿನ ಜನರು ಹಲವು ವರ್ಷಗಳಿಂದ ಪರದಾಡುತ್ತಿರುವುದು ವಿಪರ್ಯಾಸ.

click me!