Latest Videos

Kodagu: ಅಂಬೂರ್ ಬಿರಿಯಾನಿ ಹೊಟೇಲ್ ಕಟ್ಟಡ ಕುಸಿತ: ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ನಾಲ್ವರ ರಕ್ಷಣೆ

By Govindaraj SFirst Published Jun 20, 2024, 8:46 PM IST
Highlights

ಅಂಬೂರ್ ಬಿರಿಯಾನಿ ಸೆಂಟರ್ ಹೆಸರಿನ ಹೊಟೇಲ್ ಹಾಗೂ ಮಾಂಸದ ಅಂಗಡಿ ಇದ್ದ ಕಟ್ಟಡ ಇದ್ದಕ್ಕಿದ್ದಂತೆ ಕುಸಿದಿರುವ ಘಟನೆ ಕೊಡಗು ಜಿಲ್ಲೆ ಗೋಣಿಕೊಪ್ಪದಲ್ಲಿ ನಡೆದಿದೆ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜೂ.20): ಅಂಬೂರ್ ಬಿರಿಯಾನಿ ಸೆಂಟರ್ ಹೆಸರಿನ ಹೊಟೇಲ್ ಹಾಗೂ ಮಾಂಸದ ಅಂಗಡಿ ಇದ್ದ ಕಟ್ಟಡ ಇದ್ದಕ್ಕಿದ್ದಂತೆ ಕುಸಿದಿರುವ ಘಟನೆ ಕೊಡಗು ಜಿಲ್ಲೆ ಗೋಣಿಕೊಪ್ಪದಲ್ಲಿ ನಡೆದಿದೆ. ಬಿರಿಯಾನಿ ಹೊಟೇಲ್ ಮಾಲೀಕ ಆಂಧ್ರ ಮೂಲದ ತಿರುಮುರುಗನ್ (60), ಅಲಮೇಲ (50), ಗ್ರಾಹಕ ನಾಗರಹೊಳೆಯ ತಿಮ್ಮ (35) ಹಾಗೂ ತಿತಿಮತಿಯ ಮಧು (38) ಎಂಬುವರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ತಿರುಮುರುಗನ್ ಎಂಬುವವರ ಕಾಲು ಮುರಿದಿದೆ. ಆದರೆ ಅದೃಷ್ಟವಷಾತ್ ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ. ಗೋಣಿಕೊಪ್ಪದ ಮುಖ್ಯ ರಸ್ತೆಯಲ್ಲಿದ್ದ ಸುಮಾರು 80 ವರ್ಷ ಹಳೆಯದಾದ ಈ ಕಟ್ಟಡದಲ್ಲಿ ಅಂಬೂರ್ ಬಿರಿಯಾನಿ ಸೆಂಟರ್ ಮತ್ತು ಮಟನ್ ಅಂಗಡಿ ಇತ್ತು. 

ಹೊಟೇಲ್ ನಲ್ಲಿ ಹೆಚ್ಚಿನ ಜನರು ಇರಲಿಲ್ಲ. ಹೀಗಾಗಿ ಹೆಚ್ಚಿನ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಲಿಲ್ಲ. ಎಲ್ಲಾ ಗಾಯಾಳುಗಳಿಗೆ ಪ್ರಾಥಮಿಕವಾಗಿ ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯಲ್ಲಿ ಇರುವ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಮಧ್ಯಾಹ್ನ ಎರಡು ಗಂಟೆ ವೇಳೆ ಕಟಟಡ ಕುಸಿದಿದೆ. ಮಟನ್ ಅಂಗಡಿ ಕಟ್ಟಡದ ಮುಂಭಾಗದಲ್ಲೇ ಇದಿದ್ದರಿಂದ ಮಟನ್ ಅಂಗಡಿ ಮಾಲೀಕ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾರೆ. ಹೊಟೇಲ್ ಒಳಭಾಗದಲ್ಲಿ ಇದ್ದ ಅದರ ಮಾಲೀಕ ಸಿಬ್ಬಂದಿ ಹಾಗೂ ಊಟಕ್ಕೆ ಬಂದಿದ್ದ ಇಬ್ಬರು ಗ್ರಾಹಕರು ಮನೆಯ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು. 

ಕರಾರಿನಂತೆ ಸಂಸ್ಕರಿಸಿದ ನೀರನ್ನು ಕೋಲಾರಕ್ಕೆ ಹರಿಸಿ: ಸಚಿವ ಬೈರತಿ ಸುರೇಶ್‌

ಕಟ್ಟಡ ಕುಸಿದು ಬೀಳುತ್ತಿದ್ದಂತೆ ಸ್ಥಳೀಯರು, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಕಟ್ಟಡದ ಒಳಗೆ ಸಿಲುಕಿದ್ದವರನ್ನು ರಕ್ಷಣೆ ಮಾಡಿದರು. ಎರಡು ದ್ವಿಚಕ್ರ ವಾಹನಗಳು ಕಟ್ಟಡದ ಕೆಳಗೆ ಸಿಲುಕಿ ಜಖಂಗೊಂಡಿವೆ. ಸ್ಥಳಕ್ಕೆ ಕೊಡಗು ಎಸ್.ಪಿ. ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸತತ ಮೂರು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದ ಏಳು ಜನರನ್ನು ರಕ್ಷಿಸಲಾಗಿದೆ. ಇನ್ನು ಗೋಣಿಕೊಪ್ಪದಲ್ಲಿ ಇದೇ ರೀತಿ ತೀವ್ರ ಶಿಥಿಲಗೊಂಡಿರುವ ಕಟ್ಟಡಗಳಿವೆ. ಅವುಗಳಲ್ಲೂ ಬೇರೆ ಬೇರೆ ವ್ಯಾಪಾರ ವಹಿವಾಟುಗಳನ್ನು ನಡೆಸಲಾಗುತ್ತಿದೆ. 

ಇಂತಹ ಕಟ್ಟಡಗಳನ್ನು ಆದಷ್ಟು ಶೀಘ್ರವೇ ತೆರವುಗೊಳಿಸಬೇಕಾಗಿದೆ ಎಂದು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಎಚ್ಚರಿಸಿದ್ದಾರೆ. ಗೋಣಿಕೊಪ್ಪದ ಮುಖ್ಯ ರಸ್ತೆಯಲ್ಲಿರುವ ಸಣ್ಣುವಂಡ ಉತ್ತಯ್ಯ ಎಂಬುವವರಿಗೆ ಸೇರಿದ ಸುಮಾರು 80 ವರ್ಷಗಳ ಹಳೆಯ ಕಟ್ಟಡ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕುಸಿಯಿತು. ಹೋಟೆಲ್ ಮತ್ತು ಕುರಿ ಮಾಂಸದ ಮಳಿಗೆಯಲ್ಲಿ ಒಟ್ಟು ನಾಲ್ವರು ಇದ್ದ ಕಾರಣ ಕಟ್ಟಡ ಕುಸಿಯುತ್ತಿದ್ದಂತೆ ಸಿಲುಕಿಕೊಂಡರು. ಮೊದಲು ಮಾಂಸದ ಮಳಿಗೆ ಕುಸಿಯುವುದನ್ನು ಕಂಡು ಮಾಲೀಕ ಓಡಿ ತಪ್ಪಿಸಿಕೊಂಡರು. 

ಗ್ಯಾರಂಟಿಗಾಗಿ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ ತೈಲ ಬೆಲೆ ಏರಿಕೆ: ಸಿಎಂ ‌ಸಿದ್ದರಾಮಯ್ಯ

ಹೋಟೆಲ್ ಮಾಲೀಕ ಮತ್ತು ಊಟಕ್ಕೆ ಬಂದವರು ಅಪಾಯದಲ್ಲಿ ಸಿಲುಕಿಕೊಂಡರು. ತಕ್ಷಣ ಕಾರ್ಯಾಚರಣೆ ನಡೆಸಲಾಯಿತು. ತಿರುಮುರುಗನ್ ಮತ್ತು ಅಲಮೇಲ ಹೊಟೇಲ್ನ ಹೊರ ಕೋಣೆಯಲ್ಲಿದ್ದ ಕಾರಣ ಕಾರ್ಯಾಚರಣೆ ನಡೆಸಿ ತಕ್ಷಣ ಹೊರ ತರಲು ಸಾಧ್ಯವಾಯಿತು. ಸುಮಾರು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಯಿತು. ಸ್ಥಳೀಯರು ಜೆಸಿಬಿ, ಕ್ರೇನ್, ಆ್ಯಂಬುಲೆನ್ಸ್ಗಳನ್ನು ಸ್ವಯಂ ಪ್ರೇರಿತವಾಗಿ ತಂದು ಕಾರ್ಯಾಚರಣೆ ಸುಗಮವಾಗಿ ನಡೆಸಲು ನೆರವಾದರು. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ನಾಲ್ವರನ್ನು ರಕ್ಷಿಸಲಾಯಿತು. ಆದರೆ ಮತ್ತಿಬ್ಬರು ಸಿಲುಕಿಕೊಂಡಿರುವ ಬಗ್ಗೆ ಗೊಂದಲ ಇದ್ದ ಕಾರಣ, ಇಡೀ ಕಟ್ಟಡವನ್ನು ತೆರವುಗೊಳಿಸಿ ಯಾರೂ ಸಿಲುಕಿಲ್ಲ ಎಂಬುದನ್ನು ಖಾತರಿ ಪರಿಸಿಕೊಳ್ಳಲಾಯಿತು.

click me!