
ಕೊಡಗು: ಸಾಮಾಜಿಕ ಜಾಲತಾಣಗಳಲ್ಲಿ ದಿನೇ ದಿನೇ ಅಸಭ್ಯ ಹಾಗೂ ಸುಳ್ಳು ಪ್ರಚಾರಗಳು ಹೆಚ್ಚುತ್ತಿದ್ದು, ಕೊಡಗು ಜಿಲ್ಲೆಯ ಹೆಸರನ್ನು ಹಾಳು ಮಾಡುವ ರೀತಿಯ ರೀಲ್ಸ್ ವೀಡಿಯೋ ಒಂದು ಇದೀಗ ಚರ್ಚೆಗೆ ಗ್ರಾಸವಾಗಿದೆ. “ಕೊಡಗಿನಲ್ಲಿ ಡೇಟಿಂಗ್‌ಗಾಗಿ ಹುಡುಗಿಯರು, ಆಂಟಿಯರು ಸಿಗುತ್ತಾರೆ” ಎಂದು ಹೇಳುವ ಈ ವೀಡಿಯೋಗೆ ಈಗ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಕೋಟ್ಯ 2026” ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಿಂದ ಈ ರೀಲ್ಸ್‌ನ್ನು ಶೇರ್ ಮಾಡಲಾಗಿದೆ. ವೀಡಿಯೋದಲ್ಲಿ ಕೊಡಗು ಜಿಲ್ಲೆಯನ್ನು ಕೆಟ್ಟ ರೀತಿಯಲ್ಲಿ ತೋರಿಸಿ, ಡೇಟಿಂಗ್‌ಗಾಗಿ ಸುಲಭವಾಗಿ ಹುಡುಗಿಯರು ಸಿಗುತ್ತಾರೆ ಎಂಬ ಸುಳ್ಳು ಸಂದೇಶವನ್ನು ಹರಡಲಾಗಿದೆ. ಇದಲ್ಲದೆ, “ಯಾವುದೇ ಭಯವಿಲ್ಲ, ಎಲ್ಲಾ ಸುರಕ್ಷಿತ” ಎಂದು ವಾಯ್ಸ್ ಓವರ್ ಸೇರಿಸಿರುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ.
ಈ ರೀಲ್ಸ್‌ನಲ್ಲಿ “ರಾಜತರಂಗಿಣಿ” ಎಂಬ ಹೆಸರಿನಲ್ಲಿ ನೊಂದಾಯಿತ ಸಿಮ್ ಕಾರ್ಡ್‌ನ ವಾಟ್ಸಾಪ್ ನಂಬರನ್ನು ಸಹ ಬಿಚ್ಚಿಟ್ಟಿದ್ದಾರೆ. ಇದರಿಂದ ನಂಬಿಕೆ ಮೂಡಿಸುವ ಪ್ರಯತ್ನ ಮಾಡಿರುವ ಈ ಯುವಕ, ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದಾನೆ. ಕೊಡಗು ಜಿಲ್ಲೆಯ ಗೌರವಕ್ಕೆ ಧಕ್ಕೆ ತರುವ ಈ ರೀತಿಯ ಕೃತ್ಯವು ಎಲ್ಲೆಡೆ ಖಂಡನೆಗೆ ಗುರಿಯಾಗಿದೆ.
ಮೂಲತಃ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಆದ ಈ ವೀಡಿಯೋವನ್ನು ನಂತರ ಶೇರ್‌ಚಾಟ್ ಮೂಲಕ ಹಂಚಲಾಗಿದ್ದು, ಇನ್ನಷ್ಟು ಜನರಿಗೆ ತಲುಪುವಂತೆ ಮಾಡಲಾಗಿದೆ. ಇದರಿಂದ ಕೊಡಗು ಜಿಲ್ಲೆಯ ಹೆಸರನ್ನು ಹಾಳು ಮಾಡುವ ಉದ್ದೇಶ ಸ್ಪಷ್ಟವಾಗಿದೆ. ಕೊಡಗಿನ ಬಗ್ಗೆ ಹೀಗೆ ಅಸಭ್ಯ, ಅಸತ್ಯ ಹಾಗೂ ಅಶಿಷ್ಟ ರೀತಿಯ ವೀಡಿಯೋಗಳನ್ನು ಮಾಡುವವರ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೊಡಗು ಒಂದು ಸಂಸ್ಕೃತಿ, ಪ್ರಕೃತಿ ಮತ್ತು ಪರಂಪರೆಯ ನೆಲ. ಇದನ್ನು ಕೆಟ್ಟ ರೀತಿಯಲ್ಲಿ ತೋರಿಸುವುದು ಅಸಹ್ಯ. ಇಂತಹ ಸುಳ್ಳು ಪ್ರಚಾರ ತಡೆಯಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೊಡಗಿನ ಬಗ್ಗೆ ಅಪಪ್ರಚಾರ ಮಾಡಿರುವ ಇಂತಹ ಸಾಮಾಜಿಕ ಜಾಲತಾಣ ಖಾತೆಗಳನ್ನು ತಕ್ಷಣವೇ ಪೊಲೀಸರು ಮತ್ತು ಸೈಬರ್ ಕ್ರೈಂ ಇಲಾಖೆ ಪತ್ತೆಹಚ್ಚಿ, ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.