ಅರ್ಧ ಚಂದ್ರಾಕೃತಿಯಲ್ಲಿ ಕಣ್ಮನ ಸೆಳೆಯುತ್ತಿದೆ ಕೊಡಗಿನ ಮಿನಿ ನಯಾಗರ!

By Suvarna News  |  First Published Jul 29, 2023, 6:07 PM IST

ಮಳೆಗಾಲ ಬಂತೆಂದರೆ ಕೊಡಗಿನ ಎಲ್ಲೆಡೆ ಜಲಧಾರೆ ಧುಮ್ಮಿಕ್ಕುತ್ತವೆ. ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಪ್ರಕೃತಿ ಮಡಿಲಿನಲ್ಲಿರುವ ಚಿಕ್ಲಿಹೊಳೆ ಜಲಾಶಯ ಈಗ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜು.29): ಭೂಲೋಕದ ಸ್ವರ್ಗ, ದಕ್ಷಿಣ ಕಾಶ್ಮೀರ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಪ್ರಕೃತಿಯ ಸೌಂದರ್ಯಕ್ಕೆ ಹೆಸರುವಾಸಿ. ಅದರಲ್ಲೂ ಮಳೆಗಾಲ ಬಂತೆಂದರೆ ಕೊಡಗು ಜಿಲ್ಲೆಗೆ ಹೊಸ ಜೀವ ಕಳೆ ಬಂದುಬಿಡುತ್ತದೆ. ಬೇಸಿಗೆಯಲ್ಲಿ ಬತ್ತಿ, ಮರೆಯಾಗುವ ಎಷ್ಟೋ ಜಲಪಾತಗಳು ಮಳೆಗಾಲ ಬಂತೆಂದರೆ ಕೊಡಗಿನ ಎಲ್ಲೆಡೆ ಜಲಧಾರೆ ಧುಮ್ಮಿಕ್ಕುತ್ತವೆ. ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಪ್ರಕೃತಿ ಮಡಿಲಿನಲ್ಲಿರುವ ಚಿಕ್ಲಿಹೊಳೆ ಜಲಾಶಯ ಈಗ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

Latest Videos

undefined

ಈ ಜಲಾಶಯ ನೋಡಬೇಕೆಂದರೆ ನೀವು ಮಡಿಕೇರಿ ಅಥವಾ ಕುಶಾಲನಗರದ ಕಡೆಯಿಂದ ಗುಡ್ಡೆ ಹೊಸೂರಿಗೆ ಹೋಗಿ, ಅಲ್ಲಿಂದ ಸಿದ್ದಾಪುರ ರಸ್ತೆಯಲ್ಲಿ ರಂಗಸಮುದ್ರದವರೆಗೆ ಸಾಗಬೇಕು. ನಂತರ ಚಿಕ್ಲಿಹೊಳೆ ಜಲಾಶಯದ ಕಡೆಗೆ ಹೋಗಬೇಕು. 1.8  ಸಾಮಾರ್ಥ್ಯದ ಜಲಾಶದಯದ ಸುತ್ತಮುತ್ತ ಹಸಿರಿನಿಂದ ಕಂಗೊಳ್ಳಿಸುವ ಬೆಟ್ಟಗುಡ್ಡಗಳಿವೆ. ಈ ಬೆಟ್ಟಗುಡ್ಡಗಳ ನಡುವೆ ಇರುವ ಈ ಜಲಾಶಯ ತುಂಬಿತ್ತೆಂದರೆ ಯಾವುದೇ ಅಡೆತಡೆಯಿಲ್ಲದೆ ಸಹಜವಾಗಿಯೇ ಹೊರಗೆ ಹರಿದು ಹೋಗುತ್ತದೆ. ಹೀಗೆ ಹರಿಯುವಾಗ ಅರ್ಧ ಚಂದ್ರಾಕೃತಿಯಲ್ಲಿ ಬೆಳ್ನೊರೆಯಂತೆ ಹರಿಯುವ ಈ ಜಲಾಶಯವನ್ನು ನೋಡುವುದೇ ಕಣ್ಣಿಗೆ ಹಬ್ಬ. ಮಳೆಗಾಲದಲ್ಲಿ ತುಂಬಿ ಹರಿಯುವ ಈ ಜಲಾಶಯ ಅರ್ಧ ಚಂದ್ರಾಕೃತಿಯಲ್ಲಿ ಬೆಳ್ನೊರೆಯಂತೆ ಕಂಡರೆ ಹಿಂದೆ ಬೆಟ್ಟಗುಡ್ಡಗಳ ಹಸಿರ ರಾಶಿಯ ಬಣ್ಣ ನೀರಿನಲ್ಲಿ ಬೆರೆ ಇಡೀ ಜಲರಾಶಿಯೇ ಹಸಿರಿನಿಂದ ಕಂಗೊಳಿಸುತ್ತಿದೆ.

ಮದ್ರಾಸ್ EYE ಗೆ ನಲುಗಿ ಹೋದ ವಿದ್ಯಾರ್ಥಿಗಳು, ಕೂಲಿಂಗ್ ಗ್ಲಾಸ್ ಧರಿಸಿ ಶಾಲೆಗೆ

ಈ ಪ್ರಕೃತಿಯ ಸಹಜ ಸೌಂದರ್ಯಕ್ಕೆ ಮಾರುಹೋಗುತ್ತಿರುವ ನೂರಾರು ಪ್ರವಾಸಿಗರು ಜಲಾಶಯಕ್ಕೆ ಭೇಟಿ ನೀಡಿ ಸಂಭ್ರಮಿಸುತ್ತಿದ್ದಾರೆ. ಜಲರಾಶಿಯ ಮುಂದೆ ನಿಂತು ಫೋಟೋ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಅರ್ಧ ಚಂದ್ರಾಕೃತಿಯ ಜಲಧಾರೆಯ ಬಳಿಗೆ ಹೋಗಬೇಕಾದರೆ 400 ಮೀಟರ್ ದೂರದಷ್ಟು ಉದ್ದದ ಜಲಾಶಯದ ಏರಿ ಮೇಲೆ ನಡೆದು ಹೋಗಬೇಕು. ಹಾಗೆ ನಡೆದುಕೊಂಡು ಹೋಗುವುದೇ ಒಂದು ಸಂಭ್ರಮ. 

ಜಲಾಶಯದ ಅಣೆಕಟ್ಟೆ ಮೇಲೆ ನಡೆದು ಹೋಗುತ್ತಿದ್ದರೆ, ಜಲಾಶಯದ ಭಾಗದಿಂದ ಬೀಸುವ ತಣ್ಣನೆ ಗಾಳಿ, ನೀರಿನ ಅಲೆಗಳ ಶಬ್ಧ ನಿಮ್ಮನ್ನು ರೋಮಾಂಚನಗೊಳಿಸುತ್ತದೆ. ಜಲಧಾರೆಯನ್ನು ನೋಡುವ ಕಾತರತೆಯಿಂದಲೇ ನೀವು ಅಣೆಕಟ್ಟೆಯ ಮೇಲೆ ನಡೆದು ಹೋದರೆ ಅಲ್ಲಿ ಸಿಗುವ ಅರ್ಧ ಚಂದ್ರಾಕೃತಿಯ ಜಲಧಾರೆ ನಿಮ್ಮ ಕಣ್ಮನಕೋರೈಸುತ್ತದೆ. ಆ ಜಲರಾಶಿಯನ್ನು ನೋಡುತ್ತಲೇ ನಿಮ್ಮ ಸಂತೋಷಕ್ಕೆ ಪಾರವೇ ಇರುವುದಿಲ್ಲ. 

ಇಂತಹ ಪ್ರಕೃತಿಯ ಮಡಿಲಿನಲ್ಲಿರುವ ಜಲರಾಶಿಯನ್ನು ದೇಶ, ವಿದೇಶಗಳ ಪ್ರವಾಸಿಗರು ಬಂದು ಕಣ್ತುಂಬಿಕೊಳ್ಳುತ್ತಿದ್ದಾರೆ. ಬೇಸಿಗೆಯಲ್ಲಿ ನೀರು ಕಡಿಮೆಯಾಗುವುದರಿಂದ ಜಲಾಶದಿಂದ ನೀರು ಹೊರ ಹರಿಯುವುದಿಲ್ಲ. ಹೀಗಾಗಿ ನೋಡಲು ಅಷ್ಟೊಂದು ಖುಷಿ ಕೊಡುವುದಿಲ್ಲ. ಆದರೆ ಮಳೆಗಾಲದಲ್ಲಿ ಉತ್ತಮ ಮಳೆ ಸುರಿಯಿತ್ತೆಂದರೆ ಆದಷ್ಟು ಬೇಗನೇ ತುಂಬು ಜಲಾಶಯ ಜನವರಿ ತಿಂಗಳವರೆಗೆ ಹರಿಯುತ್ತಲೇ ಇರುತ್ತದೆ. ಇಂತಹ ಜಲಧಾರೆಯ ಸೌಂದರ್ಯವನ್ನು ನಾವು ಮತ್ತೆ ನೋಡಬೇಕು ಎನಿಸುತ್ತದೆ ಎನ್ನುತ್ತಾರೆ ಪ್ರವಾಸಿಗರಾದ ಮೌಲ್ಯ.

ಇಂಜಿನಿಯರಿಂಗ್ ಓದದ ಪುಣೆಯ ವಿದ್ಯಾರ್ಥಿಗೆ ಗೂಗಲ್‌ ನಿಂದ ದಾಖಲೆಯ 50 ಲಕ್ಷ ರೂ ವೇತನದ ಉದ್ಯೋಗ!

ಇದೊಂದೇ ಜಲಾಶಯವಲ್ಲ, ಕೊಡಗಿನಲ್ಲಿ ಇಂತಹ ಹತ್ತಾರು ಜಲಾಶಯಗಳು ಮಳೆಗಾಲದಲ್ಲಿ ಹೊಸ ಜೀವಕಳೆ ಪಡೆದು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಮಡಿಕೇರಿ ಸಮೀಪದಲ್ಲಿ ಇರುವ ಅಬ್ಬಿಫಾಲ್ಸ್, ಮಡಿಕೇರಿ ತಾಲ್ಲೂಕಿನ ಅಭ್ಯತ್ ಮಂಗಲದಲ್ಲಿ ಇರುವ ಅಭ್ಯತ್ ಮಂಗಲ ಫಾಲ್ಸ್, ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಫಾಲ್ಸ್, ಪೊನ್ನಂಪೇಟೆ ತಾಲ್ಲೂಕಿನ ಇರ್ಪುಫಾಲ್ಸ್. 

ಹೀಗೆ ಒಂದಾ ಎರಡಾ ಮಳೆಗಾಲದಲ್ಲಿ ಎಲ್ಲಾ ಜಲಪಾತಗಳು ಧುಮ್ಮಿಕ್ಕಿ ಭೋರ್ಗರೆದು ಎಲ್ಲರನ್ನು ಆಕರ್ಷಣೆಗೊಳಿಸುತ್ತವೆ. ಕೊಡಗಿನಲ್ಲಿರುವ ಇಂತಹ ಜಲಧಾರೆಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಇದೇ ಒಳ್ಳೆಯ ಸಮಯ. ನೀವು ಕೂಡ ಮಳೆಗಾಲದಲ್ಲೇ ಒಮ್ಮೆ ಭೇಟಿ ನೀಡಿ ಜಲಕನ್ಯೆಯರ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.

click me!