ವೇತನ ವಿಳಂಬಕ್ಕೆ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಕಾರಣ?, ಮೊದಲೇ ಅಶಕ್ತವಾಗಿತ್ತು ಕೆಕೆಆರ್ಟಿಸಿ, ಹಣ ಬಂದ ಮೇಲೆ ಪಗಾರ, ಇನ್ನೂ 1 ವಾರ ಆಗಬಹುದು ಎಂದು ಅಧಿಕಾರಿಗಳಿಂದ ಸಿಬ್ಬಂದಿಗೆ ಸಮಜಾಯಿಷಿ
ಶೇಷಮೂರ್ತಿ ಅವಧಾನಿ
ಕಲಬುರಗಿ(ಜು.06): ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಕಲಬುರಗಿ ಕೇಂದ್ರವಾಗಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ಆರ್ಥಿಕವಾಗಿ ಅಶಕ್ತವಾಗಿಸಿದೆಯೆ? ಎಂಬ ಪ್ರಶ್ನೆ ಕಾಡತೊಡಗಿದೆ. ಈ ಸಂಸ್ಥೆ ತಿಂಗಳ ಮೊದಲ ದಿನವೇ (1ನೇ ತಾರೀಖು) ತನ್ನೆಲ್ಲ 19 ಸಾವಿರದಷ್ಟುಸಿಬ್ಬಂದಿಗೆ ವೇತನ ಪಾವತಿಸುತ್ತಿತ್ತು, ಆದರೆ ಈ ಬಾರಿ ಜುಲೈ ತಿಂಗಳು ಮೊದಲ ವಾರ ಉರುಳಿದರೂ ಕೂಡಾ ಇನ್ನೂ ಜೂನ್ ತಿಂಗಳ ವೇತನ ಸಿಬ್ಬಂದಿ ಕೈ ಸೇರಿಲ್ಲ!
undefined
ಈ ಬೆಳವಣಿಗೆ ಸಿಬ್ಬಂದಿಗಳನ್ನು ಕಂಗಾಲಾಗಿಸಿದೆ, ಅನೇಕರು ಮಾಸಿಕ ಖರ್ಚು- ವೆಚ್ಚ ಸರಿದೂಗಿಸಲು, ತಮ್ಮೆಲ್ಲ ವಹಿವಾಟು ಸುರಳೀತಗೊಳಿಸಲು ಹೆಣಗುವಂತಾಗಿದೆ. ಪಗಾರ ವಿಳಂಬಕ್ಕೆ ಶಕ್ತಿ ಯೋಜನೆಯೇ ಕಾರಣವೆಂದು ದೂರುತ್ತಿದ್ದಾರೆ. ಬಿಎಂಟಿಸಿ, ಕೆಎಸ್ಸಾರ್ಟಿಸಿ ಸಂಸ್ಥೆಗಳಲ್ಲಿ ಅದಾಗಲೇ 1ನೇ ತಾರೀಖಿಗೆ ಅವರವರ ಪಗಾರ ಪಾವತಿಯಾಗಿದೆ, ಆದರೆ ಕೆಕೆಆರ್ಟಿಸಿಯಲ್ಲಿ ಮಾತ್ರ ಪಗಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ ಎಂದು ಗೋಳಾಡುತ್ತಿದ್ದಾರೆ.
ಶಕ್ತಿ ಯೋಜನೆ: ಬುರ್ಖಾ ಧರಿಸಿ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಿದ ಪುರುಷ
ಹೆಚ್ಚಿದ ವರಮಾನ- ಖಜಾನೆಗಿಲ್ಲ ಹಣ:
ಕಲ್ಯಾಣ ನಾಡಿನ ಕಲಬುರಗಿ ಸೇರಿದಂತಿರುವ 8 ಜಿಲ್ಲೆಗಳ ವ್ಯಾಪ್ತಿಯ ಕೆಕೆಆರ್ಟಿಸಿ ಬಸ್ಗಳಲ್ಲಿ ಶಕ್ತಿ ಯೋಜನೆ ಜಾರಿಗೊಂಡಾಗಿನಿಂದ ಮಹಿಳೆಯರ ಪ್ರಯಾಣ ವಿಪರೀತ ಹೆಚ್ಚಿದೆ, ಮೊದಲೆಲ್ಲಾ ಟಿಕೆಟ್ ಇದ್ದಾಗ ನಿತ್ಯ 4ರಿಂದ 4.55 ಕೋಟಿ ರು. ಖಜಾನೆ ಸೇರುತ್ತಿತ್ತು. ಈಗ ಶೇ.70ರಷ್ಟುಶಕ್ತಿ ಯೋಜನೆಯ ವರಮಾನವೇ ಆಗಿರೋದರಿಂದ ಶೂನ್ಯ ಟಿಕೆಟ್ ಪಡೆದೇ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ.ಸಂಸ್ಥೆಯ ವರಮಾನ ನಿತ್ಯ 5.88 ಕೋಟಿ ರು.ಗೆ ಹೆಚ್ಚಿದೆಯಾದರೂ ಖಜಾನೆಗೆ ಅಷ್ಟೂಹಣ ಸೇರುತ್ತಿಲ್ಲ.
ಈ ರೀತಿಯ ಉಚಿತ ಸೇವೆಗೆ ಪ್ರತಿಯಾಗಿ ಸರ್ಕಾರದಿಂದ ಹಣಸಂಸ್ಥೆಗೆ ಬರಬೇಕು. ಹೀಗೆ ಹಣ ಬಂದರಷ್ಟೇ ಸಂಸ್ಥೆಗೆ ಅನುಕೂಲ, ಇಲ್ಲದೆ ಹೋದಲ್ಲಿ ಮೊದಲೇ ಆರ್ಥಿಕವಾಗಿ ತೊಂದರೆಯಲ್ಲಿರುವ ಕೆಕೆಆರ್ಟಿಸಿಗೆ ಈ ಯೋಜನೆ ಇನ್ನೂ ಅಶಕ್ತಗೊಳಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಪಗಾರ ಇಲ್ಲದೆ ಸಿಬ್ಬಂದಿ ಪರದಾಟ:
ಕೆಕೆಆರ್ಟಿಸಿ ವ್ಯಾಪ್ತಿಯ ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ವಿಜಯಪೂರ ಜಿಲ್ಲೆಗಳಲ್ಲಿ ಸಂಸ್ಥೆಯ 4 ಸಾವಿರಕ್ಕೂ ಹೆಚ್ಚು ಬಸ್ಗಳಿವೆ, 18,200ರಷ್ಟುಚಾಲಕ, ನಿರ್ವಾಹಕ, ಮೆಕ್ಯಾನಿಕ್ ಸೇರಿದಂತೆ ವಿವಿಧ ಹುದ್ದೆಗಳ ಸಿಬ್ಬಂದಿಗಳಿದ್ದಾರೆ. ಶಕ್ತಿ ಯೋಜನೆಗೂ ಮುನ್ನ 2214 ಟ್ರಿಪ್ಗಳಿದ್ದದ್ದು ಯೋಜನೆ ಜಾರಿ ಬಳಿಕ 2370 ಟ್ರಿಪ್ಗಳಿಗೆ ಹೆಚ್ಚಿದೆ. 19 ಸಾವಿರದಷ್ಟುಸಿಬ್ಬಂದಿಗೆ ಮಾಸಿಕ ವೇತನವಂತೂ ನೀಡಲೇಬೇಕು. ಆದರೆ ಈ ಬಾರಿ ವೇತನ 1ನೇ ತಾರೀಖಿಗೆ ನೀಡಲಾಗದೆ ಸಂಸ್ಥೆ ಸಿಬ್ಬಂದಿಗಳನ್ನು ಕಂಗಾಲಾಗಿಸಿದೆ. 1ನೇ ತಾರೀಖಿನ ಪಗಾರದ ಲೆಕ್ಕದಲ್ಲೇ ಸಿಬ್ಬಂದಿ ತಮ್ಮೆಲ್ಲ ವ್ಯವಹಾರ ಹೊಂದಿಸಿಕೊಂಡಿರುತ್ತಾರೆ. ಇದೀಗ ವೇತನ ವಿಳಂಬವಾಗಿರೊದರಿಂದ ಸಿಬ್ಬಂದಿ ಗೋಳಾಡುತ್ತಿದ್ದಾರೆ. ಅನೇಕರು ಕನ್ನಡಪ್ರಭ ಜೊತೆ ಮಾತನಾಡುತ್ತ ತಮ್ಮ ಸಾಲದ ಕಂತು, ಕಿರಾಣಿ, ಶಾಲೆ- ಕಾಲೇಜುಗಳ ಮಕ್ಕಳ ಶುಲ್ಕ , ಮನೆ ಬಾಡಿಗೆ ಇತ್ಯಾದಿಗಳಿಗೂ ಪರದಾಡುವಂತಾಗಿದೆ ಎಂದು ಗೋಳಾಡಿದ್ದಾರೆ.
ಶಕ್ತಿ ಯೋಜನೆಯಿಂದ ನಷ್ಟವಾದ ಆಟೋ ಚಾಲಕರಿಗೆ ನೆರವು: ಸಚಿವ ರಾಮಲಿಂಗಾರೆಡ್ಡಿ
ಸಂಬಳ ಪಾವತಿ ಸವಾಲು!
ಶಕ್ತಿ ಯೋಜನೆಯಿಂದಾಗಿ ಸಂಸ್ಥೆಯ ವರಮಾನ ಹೆಚ್ಚಿದೆಯಾದರೂ ಜೊತೆಗೆ 330 ಬಸ್ ಹೊಸದಾಗಿ ಸೇರ್ಪಡೆಯಾಗಿವೆ. ನಿಗಮದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಹೊಸತಾಗಿ 155 ಶೆಡ್ಯೂಲ್, 1,481 ಟ್ರಿಪ್ಗಳನ್ನು ಹೊಸತಾಗಿ ಆರಂಭಿಸಲಾಗಿದೆ. ಸಂಸ್ಥೆ 800 ಹೊಸ ಬಸ್ ಖರೀದಿಸಲು ಮುಂದಾಗಿದ್ದು ಈ ಪೈಕಿ 338 ಬಸ್ ನಿಗಮ ಸೇರಿವೆ. ಈಗಾಗಲೇ 300ಕ್ಕೂ ಹೆಚ್ಚು ಚಾಲಕರನ್ನು ಗುತ್ತಿಗೆಯಲ್ಲಿ ನೇಮಕ ಮಾಡಿಕೊಂಡಿರುವ ಸಂÜಸ್ಥೆ 2000 ದಷ್ಟುಚಾಲಕ ಕಂ. ನಿರ್ವಾಹಕ ಹುದ್ದೆ ನೇಮಕಾತಿಗೂ ಮುಂದಾಗಿದೆ. ಇವೆಲ್ಲ ಖರ್ಚಿನ ಪ್ರಕ್ರಿಯೆಗಳೇ ಆಗಿರೋದರಿಂದ ಇವಕ್ಕೆಲ್ಲದಕ್ಕೂ ಹಣ ಹೊಂದಿಸೋದಲ್ಲದೆ ಸಿಬ್ಬಂದಿ ಪಗಾರಕ್ಕೆ ಹಣ ವಿನಿಯೋಗಿಸುವ ಸವಾಲು ಸಂಸ್ಥೆಯ ಮುಂದೆ ಎದುರಾಗಿದೆ. ಬಸ್ಗಳ ಸಂಖ್ಯೆ, ಶೆಡ್ಯೂಲ್, ಟ್ರಿಪ್ ಹೆಚ್ಚಿರೋದರಿಂದ ಸಹಜವಾಗಿಯೇ ಸಂಸ್ಥೆಯ ವೆಚ್ಚದಲ್ಲೂ ಏರಿಕೆ ಕಂಡಿದೆ. ಇದಲ್ಲದೆ ಟೋಲ್ ವಾಹನ ತೆರಿಗೆಯ ರೂಪದಲ್ಲಿ 125 ಕೋಟಿ ರು. ಸಂಸ್ಥೆಗೆ ಭಾರವಾಗಿದೆ. ಇವೆಲ್ಲದರ ಜೊತೆಗೆ ಶಕ್ತಿ ಯೋಜನೆಯ ಒಳಪೆಟ್ಟು, ಖಜಾನೆ ಸೊರಗಿದ್ದರಿಂದಲೇ ಪಗಾರ ವಿಳಂಬವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರತಿ ತಿಂಗಳು 1ನೇ ತಾರೀಖಿಗೆ ಆಗುತ್ತಿದ್ದ ಪಗಾರ ಇದುವರೆಗೂ ಪತ್ತೆ ಇಲ್ಲ, ನಿತ್ಯ ಕೆಲಸ ಹೆಚ್ಚಾಗುತ್ತಿದೆ, ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿದೆ, ಬಸ್ಸುಗಳು ಹೆಚ್ಚಿವೆ. ಏಕಾಏಕಿ ಪಗಾರ ವಿಳಂಬವಾಗಿದ್ದೇ ನಮ್ಮ ಸಂಸಾರಿಕ ಸಂಕಷ್ಟಗಳನ್ನು ಹೆಚ್ಚುವಂತೆ ಮಾಡಿದೆ. ಬೇಗ ಪಗಾರ ಪಾವತಿಯಾದಲ್ಲಿ ಅನುಕೂಲವಾಗುತ್ತದೆ ಅಂತ ಕಲಬುರಗಿ ಕೆಕೆಆರ್ಟಿಸಿ ಚಾಲಕ ಕಮ್ ನಿರ್ವಾಹಕರು ತಿಳಿಸಿದ್ದಾರೆ.