
ಹುಬ್ಬಳ್ಳಿ(ಸೆ.28): ಉತ್ತರ ಕರ್ನಾಟಕದ ಬಡವರ ಪಾಲಿಗೆ ಕಾಮಧೇನು ಆಗಬೇಕಿದ್ದ ಇಲ್ಲಿನ ಕಿಮ್ಸ್ ಸದಾ ಒಂದಿಲ್ಲೊಂದು ಎಡವಟ್ಟು ಮಾಡಿಕೊಂಡು ಸುದ್ದಿಯಲ್ಲಿ ಇರುತ್ತದೆ. ಆದರೆ ಇದೀಗ ಕಿಮ್ಸ್ ವೈದ್ಯರು, ಸಿಬ್ಬಂದಿ ನೋಟಿಸ್ ಪಡೆದುಕೊಂಡು ಸುದ್ದಿಯಲ್ಲಿದ್ದಾರೆ.
ಹೌದು, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ, ವೈದ್ಯರು, ಸಿಬ್ಬಂದಿ ಸೇರಿ ಬರೋಬ್ಬರಿ 50ಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಿದ್ದಾರೆ. ಕರ್ತವ್ಯ ಸರಿಯಾಗಿ ನಿರ್ವಹಿಸದಿದ್ದಕ್ಕೆ ಈ ನೋಟಿಸ್ ಜಾರಿ ಮಾಡುವ ಮೂಲಕ ಜಿಡ್ಡು ಗಟ್ಟಿದ್ದ ಕಿಮ್ಸ್ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ. ಇದು ವೈದ್ಯರು, ಕಿಮ್ಸ್ ಸಿಬ್ಬಂದಿಗಳನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸುತ್ತಮುತ್ತಲಿನ ಹಳ್ಳಿಗಳಷ್ಟೇ ಜಿಲ್ಲೆಗಳು ಸಹ ಕಿಮ್ಸ್‌ನ್ನೇ ಅವಲಂಬಿಸಿವೆ. ನಿತ್ಯ ಸಾವಿರಾರು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಇದೀಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಡ ಪ್ರಾರಂಭವಾಗಿದೆ. ಸದ್ಯ ಒಪಿಡಿ ಮಾತ್ರ ಶುರುವಾಗಿದೆ. ಶೀಘ್ರದಲ್ಲೇ ಇಲ್ಲೂ ಒಳರೋಗಿಗಳ ಚಿಕಿತ್ಸಾ ವಿಭಾಗ ಶುರುವಾಗಲಿದೆ.
ಹೆಸರಿಗಷ್ಟೇ ದೊಡ್ಡ ಆಸ್ಪತ್ರೆ:
ಹಾಗೆ ನೋಡಿದರೆ ಉತ್ತರ ಕರ್ನಾಟಕದ ಪಾಲಿಗೆ ಸಂಜೀವಿನಿಯಾಗಬೇಕಿದ್ದ ಆಸ್ಪತ್ರೆ, ದಿನ ಕಳೆದಂತೆ ಬಡವರಿಗೆ ಸರಿಯಾಗಿ ಚಿಕಿತ್ಸೆ ಸಿಗದಂತೆ ಆಗಿದೆ. ಸ್ವಚ್ಛತೆಯ ಕೊರತೆ ಆಸ್ಪತ್ರೆಯಲ್ಲಿ ಎದ್ದು ಕಾಣುತ್ತದೆ. ವೈದ್ಯರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಲ್ಲ. ಬರೀ ಕೆಲಸಕ್ಕೆ ಚಕ್ಕರ್ ಹಾಕುತ್ತಾರೆ. ಹಾಜರಾದ ವೈದ್ಯರು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ ಎಂಬೆಲ್ಲ ಆರೋಪ ಸಾಮಾನ್ಯವಾಗಿವೆ. ಹತ್ತಾರು ಸಾರ್ವಜನಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದುಂಟು. ಕರ್ನಾಟಕ ರೈತ ಸೇನೆ ಎರಡು ದಿನ ನಿರಂತರ ಅಹೋರಾತ್ರಿ ಧರಣಿ ನಡೆಸಿದ್ದುಂಟು. ಹತ್ತಾರು ಬಾರಿ ಕಿಮ್ಸ್ ವೈದ್ಯರ ನಡವಳಿಕೆ ಬಗ್ಗೆ ದೂರು ಕೊಟ್ಟರೂ ಸರಿಯಾಗಿ ಸ್ಪಂದನೆ ಸಿಕ್ಕಿರಲಿಲ್ಲ.
ನೋಟಿಸ್ ಏಕೆ?:
ಸಾರ್ವಜನಿಕರಿಂದ ಬರುತ್ತಿದ್ದ ದೂರುಗಳನ್ನು ಪರಿಗಣಿಸಿ, ಜತೆಗೆ ಪರಿಶೀಲಿಸಿ ಇದೀಗ ನಿರ್ದೇಶಕ ನೋಟಿಸ್ ನೀಡಿದ್ದಾರೆ. ತುರ್ತು ಚಿಕಿತ್ಸಾ ವಿಭಾಗ, ಕಿಮ್ಸ ಒಪಿಡಿ, ಸೂಪರ್ ಸ್ಪೆಷಾಲಿಟಿ ಒಪಿಡಿ, ಮೆಡಿಷನ್ ವಿಭಾಗ, ಸರ್ಜರಿ ಆ್ಯಂಡ್ ಆನ್‌ಲೈನ್ ವಿಭಾಗ, ಬರ್ನಿಂಗ್ ವಿಭಾಗ, ಪ್ಲಾಸ್ಟಿಕ್ ಸರ್ಜರಿ ವಿಭಾಗ ಸೇರಿದಂತೆ ಹತ್ತಾರು ವಿಭಾಗಗಳಿಗೆ ನೋಟಿಸ್ ನೀಡಲಾಗಿದೆ. ಈ ವಿಭಾಗಗಳ ಹಿರಿಯ, ಕಿರಿಯ ವೈದ್ಯರು, ಸಿಬ್ಬಂದಿಗಳಿಗೆಲ್ಲ ನೋಟಿಸ್ ಜಾರಿ ಮಾಡಲಾಗಿದೆ.
ಇನ್ನು ಕಿಮ್ಸ್‌ನಲ್ಲಿ ಉತ್ಪನ್ನವಾಗುವ ವೈದ್ಯಕೀಯ ತ್ಯಾಜ್ಯವನ್ನು ಆಯಾಗಳು ಸರಿಯಾಗಿ ಬೇರ್ಪಡಿಸುವುದಿಲ್ಲ. ಸಿರಿಂಜ್, ಪ್ಲಾಸ್ಟಿಕ್, ಸಲಾಯಿನ್ ಬಾಟಲಿ ಹೀಗೆ ಪ್ರತಿಯೊಂದು ತ್ಯಾಜ್ಯವನ್ನು ಪ್ರತ್ಯೇಕಿಸಬೇಕು. ಆ ಕೆಲಸವನ್ನು ಸರಿಯಾಗಿ ಮಾಡುತ್ತಿರಲಿಲ್ಲ. ಈ ಬಗ್ಗೆ ಹತ್ತಾರು ಬಾರಿ ಮೌಖಿಕವಾಗಿ ಸಂಬಂಧಪಟ್ಟವರಿಗೆ ಹೇಳಿದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಯಾಗಳು, ವಾರ್ಡ್ ಬಾಯ್‌ಗಳು ಸೇರಿದಂತೆ ಕಸವಿಲೇವಾರಿ ವಿಭಾಗದ ಸಿಬ್ಬಂದಿಗಳಿಗೆ ನೋಟಿಸ್ ನೀಡಲಾಗಿದೆ. ಇನ್ನು ಮುಂದೆ ಕೆಲಸದಲ್ಲಿ ನಿರ್ಲಕ್ಷ್ಯ ಸಹಿಸಲಾಗದು. ಇದೇ ರೀತಿ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದ್ದೆ ಆದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಚ್ಚಿ ಬಿದ್ದ ವೈದ್ಯರು:
ಇಷ್ಟು ದಿನ ತಮ್ಮದೇ ಆಟವೆಂಬಂತೆ ಬೇಕಾಬಿಟ್ಟಿಯಾಗಿದ್ದ ವೈದ್ಯರು, ಸಿಬ್ಬಂದಿ ಇದೀಗ ತಮಗೆ ಬಂದಿರುವ ನೋಟಿಸ್ ನೋಡಿಯೇ ಬೆಚ್ಚಿ ಬಿದ್ದಿದ್ದಾರೆ. ಕಿಮ್ಸ್ ಆವರಣದಲ್ಲೀಗ ಬರೀ ನೋಟಿಸ್‌ನದ್ದೇ ಚರ್ಚೆಯಾಗುತ್ತಿದೆ. ಒಟ್ಟಿನಲ್ಲಿ ಇಷ್ಟುದಿನ ತುಕ್ಕು ಹಿಡಿದಿದ್ದ ಆಡಳಿತ ವ್ಯವಸ್ಥೆಗೆ ಡಾ. ರಾಮಲಿಂಗಪ್ಪ ಚಿಕಿತ್ಸೆ ನೀಡಿದ್ದು, ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗುತ್ತದೆ. ಇನ್ನು ಮೇಲಾದರೂ ಆಸ್ಪತ್ರೆ ಸ್ವಚ್ಛತೆ ಕಾಣಸಿಗುತ್ತದೆಯೇ? ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುವಂತಾಗುತ್ತದೆಯೇ? ಎಂಬಬುದನ್ನು ಕಾಯ್ದು ನೋಡಬೇಕಷ್ಟೇ!
ಈ ಬಗ್ಗೆ ಮಾತನಾಡಿದ ಕಿಮ್ಸ್ ನ ನಿರ್ದೇಶಕ ಡಾ. ರಾಮಲಿಂಗಪ್ಪ ಅವರು, ಕೆಲ ವೈದ್ಯರು, ಸಿಬ್ಬಂದಿಗಳಿಗೆ ನೋಟಿಸ್ ನೀಡಲಾಗಿದೆ. ದೂರುಗಳು ಬಹಳ ಬಂದಿದ್ದವು. ಜತೆಗೆ ನಾನೂ ಪರಿಶೀಲನೆ ನಡೆಸಿ ನೋಟಿಸ್ ನೀಡಿದ್ದೇನೆ. ನಿರ್ಲಕ್ಷ್ಯ ಧೋರಣೆ ಸರಿಯಾಗಬಾರದೆಂಬ ಉದ್ದೇಶದಿಂದ ನೀಡಲಾಗಿದೆ ಅಷ್ಟೇ ಎಂದು ಹೇಳಿದ್ದಾರೆ.