ನಿಗದಿತ ಬದಲು ಇನ್ನೊಂದು ನಿಲ್ದಾಣದಲ್ಲಿ ರೈಲು ಹತ್ತಿದ ಮೀಸಲು ಟಿಕೆಟ್ ಹೊಂದಿದ ಪ್ರಯಾಣಿರೊಬ್ಬರಿಗೆ ಪ್ರಯಾಣಿಸಲು ಅವಕಾಶ ನೀಡದ ರೈಲ್ವೆ ಇಲಾಖೆಗೆ ದಾವಣಗೆರೆ ಗ್ರಾಹಕರ ನ್ಯಾಯಾಲಯ 25 ಸಾವಿರ ರೂ. ಪರಿಹಾರ ನೀಡಲು ಆದೇಶಿಸಿ ತೀರ್ಪು ನೀಡಿದೆ| 30 ದಿನದೊಳಗೆ ಆದೇಶ ಪಾಲನೆ ಮಾಡದಿದ್ದರೆ ಹೆಚ್ಚುವರಿ ವಾರ್ಷಿಕ ಶೇ.9 ರ ಬಡ್ಡಿಯೊಂದಿಗೆ ಮೊತ್ತವನ್ನು ಪಾವತಿಸಲು ಸೂಚನೆ|
ಹರಿಹರ(ಸೆ.28): ನಿಗದಿತ ಬದಲು ಇನ್ನೊಂದು ನಿಲ್ದಾಣದಲ್ಲಿ ರೈಲು ಹತ್ತಿದ ಮೀಸಲು ಟಿಕೆಟ್ ಹೊಂದಿದ ಪ್ರಯಾಣಿರೊಬ್ಬರಿಗೆ ಪ್ರಯಾಣಿಸಲು ಅವಕಾಶ ನೀಡದ ರೈಲ್ವೆ ಇಲಾಖೆಗೆ ದಾವಣಗೆರೆ ಗ್ರಾಹಕರ ನ್ಯಾಯಾಲಯ 25 ಸಾವಿರ ರೂ. ಪರಿಹಾರ ನೀಡಲು ಆದೇಶಿಸಿ ತೀರ್ಪು ನೀಡಿದೆ.
ಘಟನೆ ವಿವರ:
undefined
ನಗರದ ಬಾತಿ ಶಿವನಾಗಪ್ಪ ಕಾಂಪೌಂಡ್ ನಿವಾಸಿ, ಗ್ರಾಸಿಂ ಕಾರ್ಖಾನೆ ಉದ್ಯೋಗಿ ಟಿಪ್ಪು ಸುಲ್ತಾನ್ ತಮ್ಮ ಮಗನನ್ನು ಭೇಟಿ ಮಾಡಲು ಧಾರವಾಡ - ಮೈಸೂರು ರೈಲಿನಲ್ಲಿ ಹರಿಹರದಿಂದ ಮೈಸೂರಿಗೆ ತೆರಳಲು ಅಕ್ಟೋಬರ್ 6, 2018 ರಂದು ಮೀಸಲು ಟಿಕೆಟ್ ಬುಕ್ ಮಾಡಿದ್ದರು. ಆದರೆ ಅಂದು ರಾತ್ರಿ 11. 55 ಕ್ಕೆ ನಗರಕ್ಕೆ ಬರುವ ರೈಲು ಮಿಸ್ ಆಗಿದ್ದರಿಂದ ಟಿಪ್ಪು ಸುಲ್ತಾನ್ ತಕ್ಷಣ ದಾವಣಗೆರೆ ನಿಲ್ದಾಣಕ್ಕೆ ತಲುಪಿದರು. 12. 15 ಕ್ಕೆ ಬಂದ ರೈಲಿನ ಎಸ್ -1 ಕೋಚ್ ಹತ್ತಿ ಟಿಟಿಇಗೆ ಟಿಕೆಟ್ ತೋರಿಸಿದ್ದಾರೆ. ಆಗ ಅವರು ಇದಕ್ಕೆ ಒಪ್ಪದೇ ನಿಮ್ಮ ಆರ್‌ಎಸಿ ಸೀಟನ್ನು ಬೇರೆಯವರಿಗೆ ಅಲಾಟ್ ಮಾಡಲಾಗಿದೆ, ನೀವು ಇಳಿಯಿರಿ ಎಂದು ಹೇಳಿದ್ದಾರೆ.
ಎಷ್ಟೆ ಕೋರಿಕೊಂಡರೂ ಕೇಳದೆ ಟಿಟಿಇ ಹಾಗೂ ಆರ್‌ಪಿಎಫ್ ಪೇದೆಯೊಬ್ಬರು ಸೇರಿ ಇವರನ್ನು ರೈಲಿನಿಂದ ಕೆಳಕ್ಕೆ ದಬ್ಬಿದರೆಂದು ಅವರು ಆರೋಪಿಸಿದ್ದಾರೆ. ನಂತರ ದಾವಣಗೆರೆ ನಿಲ್ದಾಣ ಮುಖ್ಯಸ್ಥರಲ್ಲಿ ಟಿಪ್ಪು ದೂರು ದಾಖಲಿಸಿದ್ದಾರೆ. ನೊಂದ ಪ್ರಯಾಣಿಕ ಟಿಪ್ಪು ರೈಲ್ವೆ ಇಲಾಖೆ ಸಂಬಂಧಿತ ಅಧಿಕಾರಿಗಳಿಗೆ ಡಿಸೆಂಬರ್ 6, 2018 ರಂದು ಲೀಗಲ್ ನೋಟಿಸ್ ಕಳಿಸಿದ್ದಾರೆ. ಅದಕ್ಕೆ ಉತ್ತರ ಬಾರದಿದ್ದರಿಂದ ದಾವಣಗೆರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಹಿನ್ನಲೆ ಎರಡೂ ಕಡೆಯ ವಾದ ಆಲಿಸಿದ ವೇದಿಕೆ, ಮೀಸಲು (ರಿಸರ್ವೇಷನ್) ಹೊಂದಿದ ಪ್ರಯಾಣಿಕ ನಿಗದಿತ ನಿಲ್ದಾಣದಲ್ಲಿ ರೈಲು ಹತ್ತದಿದ್ದರೆ ಮುಂದಿನ ಎರಡು ನಿಲ್ದಾಣದವರೆಗೆ ಅಥವಾ 1 ಗಂಟೆವರೆಗೆ ಯಾವುದು ಮೊದಲೋ ಅದರಂತೆ ಕಾದು ನಂತರ ಆರ್‌ಎಸಿ ಪಟ್ಟಿಯ ನಂತರದ ಪ್ರಯಾಣಿಕನಿಗೆ ಸೀಟು ಅಥವಾ ಬರ್ತ್ ಅಲಾಟ್ ಮಾಡಬೇಕು.
ಈ ನಿಯಮ ಪಾಲನೆ ಮಾಡದಿರುವುದು ಗ್ರಾಹಕರ ರಕ್ಷಣಾ ಕಾಯ್ದೆ 1986 ರ ಕಲಂ 12 ರಂತೆ ಸೇವೆಯಲ್ಲಿ ನ್ಯೂನತೆ ಉಂಟು ಮಾಡಿದಂತಾಗಿದೆ ಎಂಬ ತರ್ಕಕ್ಕೆ ಬಂದು ನೊಂದ ಪ್ರಯಾಣಿಕನಿಗೆ 25 ಸಾವಿರ ರೂ. ಪರಿಹಾರ, 3 ಸಾವಿರ ರೂ. ವ್ಯಾಜ್ಯ ಖರ್ಚು ಹಾಗೂ ಟಿಕೆಟ್‌ನ ಬೆಲೆ 220 ರೂ.ಗಳನ್ನು ವಾರ್ಷಿಕ ಶೇ.6 ರಂತೆ ನೀಡಲು ಸೆ.17 ರಂದು ಆದೇಶಿಸಿ ವೇದಿಕೆಯ ಅಧ್ಯಕ್ಷೆ ಸುನಂದ, ಸದಸ್ಯೆ ರುದ್ರೇಶ್ ಜಂಬಗಿ ತೀರ್ಪು ನೀಡಿದ್ದಾರೆ.
30 ದಿನದೊಳಗೆ ಆದೇಶ ಪಾಲನೆ ಮಾಡದಿದ್ದರೆ ಹೆಚ್ಚುವರಿ ವಾರ್ಷಿಕ ಶೇ.9 ರ ಬಡ್ಡಿಯೊಂದಿಗೆ ಮೊತ್ತವನ್ನು ಪಾವತಿಸಲು ಸೂಚಿಸಲಾಗಿದೆ. ಪ್ರಕರಣದಲ್ಲಿ ಹರಿಹರ, ದಾವಣಗೆರೆ ರೈಲು ನಿಲ್ದಾಣಾಧಿಕಾರಿಗಳು ಹಾಗೂ ಮೈಸೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ (ವಾಣಿಜ್ಯ) ಇವರು ಎದುರಾಳಿಯಾಗಿದ್ದರು. ದೂರುದಾರರ ಪರ ನಗರದ ಹಿರಿಯ ನ್ಯಾಯವಾದಿ ಎಂ.ನಾಗೇಂದ್ರಪ್ಪ ರಾಜನಹಳ್ಳಿ ಹಾಗೂ ಎಚ್.ಬಿ.ಶಿವಕುಮಾರ್ ಕುಂಬಳೂರು ವಾದ ಮಂಡಿಸಿದ್ದರು.