ಮೀನುಗಾರರಿಗೆ ನೀಡಲಾಗುವ ಸಬ್ಸಿಡಿ ಸೀಮೆಎಣ್ಣೆ ವಿತರಣೆ ಸಮಸ್ಯೆಯನ್ನು ಇನ್ನೆರಡು ದಿನಗಳಲ್ಲಿ ಪರಿಹರಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ. ನಗರದ ಕೋಸ್ಟ್ ಗಾರ್ಡ್ ಪ್ರಧಾನ ಕಚೇರಿಯಲ್ಲಿ ಮೀನುಗಾರರ ಮುಖಂಡರ ಜತೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಗಳೂರು (ಜ.8) : ಮೀನುಗಾರರಿಗೆ ನೀಡಲಾಗುವ ಸಬ್ಸಿಡಿ ಸೀಮೆಎಣ್ಣೆ ವಿತರಣೆ ಸಮಸ್ಯೆಯನ್ನು ಇನ್ನೆರಡು ದಿನಗಳಲ್ಲಿ ಪರಿಹರಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ. ನಗರದ ಕೋಸ್ಟ್ ಗಾರ್ಡ್ ಪ್ರಧಾನ ಕಚೇರಿಯಲ್ಲಿ ಮೀನುಗಾರರ ಮುಖಂಡರ ಜತೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಬ್ಸಿಡಿ(Subsidy) ಸೀಮೆಎಣ್ಣೆ(Kerosene oil) ಪೂರೈಕೆ ಸ್ಥಗಿತವಾಗಿರುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗಿದೆ. ಎರಡು ದಿನಗಳಲ್ಲಿ ಸರ್ಕಾರದ ಕಡೆಯಿಂದ ಸಮಸ್ಯೆ ಬಗೆಹರಿಸಲಾಗುವುದು. ಅದೇ ರೀತಿ ಸಬ್ಸಿಡಿ ಡೀಸೆಲ್ ಪ್ರಮಾಣ ಹೆಚ್ಚಿಸುವ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮೀನುಗಾರಿಕೆ ಸಚಿವ ಎಸ್.ಅಂಗಾರ, ಮೀನುಗಾರಿಕೆ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ ಜತೆ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ ಎಂದು ಅವರು ಹೇಳಿದರು.
ಸೀಮೆ ಎಣ್ಣೆ ನೀಡಲಾಗದಿದ್ರೆ ತೊಲಗಿ: ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ಅಂತಾರಾಜ್ಯ ಸಮಸ್ಯೆ ಪರಿಹಾರ: ಸಭೆಯಲ್ಲಿ ತಮ್ಮ ಸಮಸ್ಯೆ ಮುಂದಿಟ್ಟಮೀನುಗಾರ ಮುಖಂಡರು, ಸಮುದ್ರದಲ್ಲಿ ಅಂತಾರಾಜ್ಯ ಗಡಿ ಸಮಸ್ಯೆಯ ಬಗ್ಗೆ ಗಮನ ಸೆಳೆದರು. ಮೀನುಗಾರಿಕೆ ವೇಳೆ ಗಡಿ ದಾಟುವ ರಾಜ್ಯದ ಮೀನುಗಾರರಿಗೆ ಕೇರಳ, ಗೋವಾ, ಮಹಾರಾಷ್ಟ್ರದಲ್ಲಿ ತೀವ್ರ ಕಿರುಕುಳ ನೀಡಲಾಗುತ್ತಿದೆ. 5ರಿಂದ 10 ಲಕ್ಷ ರು. ದಂಡ ವಿಧಿಸಲಾಗುತ್ತಿದೆ ಎಂದು ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್ ತಿಳಿಸಿದರು. ಇದಕ್ಕೆ ಉತ್ತರಿಸಿದ ನಳಿನ್ ಕುಮಾರ್, ಸಚಿವಾಲಯದ ಗಮನಕ್ಕೆ ತಂದು ಸೂಕ್ತ ರೀತಿಯಲ್ಲಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಮೀನುಗಾರಿಕೆ ವಿವಿ: ಮಂಗಳೂರಿನ ಮೀನುಗಾರಿಕಾ ಕಾಲೇಜನ್ನು ಮೀನುಗಾರಿಕಾ ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೆ ಏರಿಸಬೇಕು. ಬೀದರ್‌ಗೆ ಸ್ಥಳಾಂತರ ಮಾಡಬಾರದು ಎಂದು ಪರ್ಸೀನ್ ಬೋಟ್ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ಆಗ್ರಹಿಸಿದರು. ಬೀದರ್‌ನಲ್ಲಿ ಆರಂಭಿಸಲು ಬೇಡಿಕೆ ಇರುವುದು ಸಹಜ. ಆದರೆ ಅದಕ್ಕೆ ಪೂರಕ ವಾತಾವರಣ ಅಲ್ಲಿಲ್ಲ. ಅಲ್ಲಿ ಒಳನಾಡು ಮೀನುಗಾರಿಕೆ ಮಾತ್ರ ಇದೆ. ಇಲ್ಲಿ ಸಮುದ್ರದ ಮೀನುಗಾರಿಕೆ ಇರುವುದರಿಂದ ಪೂರಕವಾಗಿದೆ. ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲೇ ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಸಂಸದರು ಹೇಳಿದರು.
‘ಸೀಮೆ ಎಣ್ಣೆ ಮುಕ್ತ ಭಾರತ’ ವ್ಯವಸ್ಥೆಯಿಂದ ಮೀನುಗಾರರನ್ನು ಪ್ರತ್ಯೇಕಿಸಿ, ಅವರಿಗೆ ಸಬ್ಸಿಡಿ ದರದಲ್ಲಿ ಸೀಮೆ ಎಣ್ಣೆ ದೊರಕಿಸಬೇಕು ಎಂದು ಗಿಲ್‌ನೆಟ್ ದೋಣಿ ಮೀನುಗಾರರ ಸಂಘದ ಗೌರವಾಧ್ಯಕ್ಷ ಸುಭಾಷ್ ಒತ್ತಾಯಿಸಿದರು.
ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ಕಮಾಂಡರ್ ಜನರಲ್ ಎಂ.ವಿ. ಬಾಡ್ಕರ್ ಸಲಹೆ ನೀಡಿದರು. ಮೀನುಗಾರ ಮುಖಂಡರಾದ ಚೇತನ್ ಬೆಂಗರೆ, ಶಶಿಕುಮಾರ್ ಬೆಂಗಡೆ ಮತ್ತಿತರರು ವಿವಿಧ ಸಮಸ್ಯೆಗಳನ್ನು ಸಂಸದರ ಗಮನಕ್ಕೆ ತಂದರು. ಕೋಸ್ಟ್ ಗಾರ್ಡ್ ಡಿಐಜಿ ಕಮಾಂಡರ್ ಪಿ.ಕೆ.ಮಿಶ್ರ ಇದ್ದರು.
Udupi news: 15 ದಿನಗಳಲ್ಲಿ ಸೀಮೆಎಣ್ಣೆ ಪೂರೈಕೆಗೆ ಮೀನುಗಾರರ ಹಕ್ಕೊತ್ತಾಯ
ತಿಂಗಳೊಳಗೆ ಕುಮ್ಕಿ, ಕಾನ ಬಾಣೆ ಹಕ್ಕು: ನಳಿನ್
ರಾಜ್ಯದ ರೈತರಿಗೆ ಕುಮ್ಕಿ, ಕಾನ, ಬಾಣೆ ಭೂಮಿಯ ಮೇಲಿನ ಹಕ್ಕು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇನ್ನೊಂದು ತಿಂಗಳೊಳಗೆ ಸಚಿವ ಸಂಪುಟದಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು. ಕುಮ್ಕಿ, ಕಾನ ಮತ್ತು ಬಾಣೆ ಜಮೀನುಗಳು ಕೃಷಿ ಭೂಮಿಗೆ ಹೊಂದಿಕೊಂಡಿದ್ದು, ಅನೇಕ ವರ್ಷಗಳಿಂದ ರೈತರು ಇದರ ಹಕ್ಕು ಬೇಕು ಎನ್ನುವ ಬೇಡಿಕೆ ಮುಂದಿಡುತ್ತ ಬಂದಿದ್ದಾರೆ.