ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ಅಪಾಯದ ಮಟ್ಟಮೀರಿ ಹರಿಯುತ್ತಿರುವ ದೃಶ್ಯ ಕಂಡುಬಂದಿದೆ. ಈಗಾಗಲೇ ಮಡಿಕೇರಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜನರು ಜಾಗೃತೆಯಲ್ಲಿರುವಂತೆ ಜಿಲ್ಲಾಡಳಿತ ಸೂಚಿಸಿದೆ.
ಮಡಿಕೇರಿ(ಸೆ.06): ಕಾವೇರಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ಅಪಾಯದ ಮಟ್ಟಮೀರಿ ಹರಿಯುತ್ತಿರುವ ದೃಶ್ಯ ಕಂಡುಬಂದಿದೆ.
ಈ ಹಿನ್ನಲೆಯಲ್ಲಿ ಕುಶಾಲನಗರ ಪಟ್ಟಣದ ತಗ್ಗು ಪ್ರದೇಶದ ಮನೆಗಳ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕುಶಾಲನಗರದ ಸಾಯಿ ಬಡಾವಣೆ ಸೇರಿದಂತೆ ನದಿ ತಟದ ಬಡಾವಣೆಗಳ ಜನತೆ ಇದರಿಂದ ಕಂಗಾಲಾಗಿದ್ದಾರೆ. ಹಾರಂಗಿ ಜಲಾಶಯಕ್ಕೆ ಎರಡು ದಿನಗಳಿಂದ ನೀರಿನ ಒಳಹರಿವು ಹೆಚ್ಚಳವಾಗಿದ್ದು ಅಣೆಕಟ್ಟೆಯಿಂದ ಸರಾಸರಿ 15 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಬಿಡಲಾಗುತ್ತಿದೆ.
ನದಿ ಪಾತ್ರದ ಜನರಿಗೆ ಎಚ್ಚರಿಕೆ:
ಅಣೆಕಟ್ಟೆಗೆ ದಿನವಿಡೀ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದ್ದು ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂದು ಹಾರಂಗಿ ಅಣೆಕಟ್ಟೆವಿಭಾಗದ ಅಧೀಕ್ಷಕ ಅಭಿಯಂತರ ಮಂಜುನಾಥ್ ಳಿಸಿದ್ದಾರೆ.
ಮಳೆ ಕ್ಷೀಣಿಸುವ ಸಾಧ್ಯತೆ ಇದೆ:
ಹವಾಮಾನ ತಜ್ಞರ ವರದಿಯಂತೆ ಮಳೆ ಪ್ರಮಾಣ ಕ್ಷೀಣಿಸುವ ಸಾಧ್ಯತೆಯಿದೆ ಎಂದಿರುವ ಅವರು ನದಿ ಪಾತ್ರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ನದಿಯಲ್ಲಿ ನೀರಿನ ಹರಿವು ಏರಿಕೆ ಕಂಡುಬಂದ ಹಿನ್ನಲೆಯಲ್ಲಿ ತಗ್ಗು ಪ್ರದೇಶದ ಜನತೆ ಆತಂಕದಲ್ಲಿ ದಿನದೂಡುವಂತಾಗಿದೆ.
48 ಗಂಟೆಗಳಲ್ಲಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ : ಜಾಗೃತೆ