ಕಸಬಾ ಏತ ನೀರಾವರಿ ಯೋಜನೆ ಕಾಮಗಾರಿಗೆ ಇನ್ನೊಂದು ವಾರದಲ್ಲಿ ಚಾಲನೆ ನೀಡಲಾಗುವುದು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಈ ಕುರಿತಾಧ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿಕಾರಿಪುರ(ಜೂ.11): ಮೂರು ಸಾವಿರ ಹೆಕ್ಟೇರ್ ಜಮೀನಿಗೆ ನೀರುಣಿಸುವ ಕಸಬಾ ಏತ ನೀರಾವರಿ ಯೋಜನೆ ಕಾಮಗಾರಿಗೆ ವಾರದಲ್ಲಿ ಚಾಲನೆ ನೀಡಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಬುಧವಾರ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ, ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘ ನಿ.ಬಸವೇಶ್ವರ ಸಹಕಾರ ಒಕ್ಕೂಟದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎಪಿಎಂಸಿ ಆವರಣದಲ್ಲಿ ನಡೆದ ವನಮಹೋತ್ಸವ, ಸಸಿ ವಿತರಣೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 2 ತಿಂಗಳಿನಿಂದ ಕೊರೋನಾ ಸೋಂಕಿನಿಂದ ಮನುಕುಲ ಬಹು ದೊಡ್ಡ ಸವಾಲನ್ನು ಎದುರಿಸುತ್ತಿದ್ದು ಸೋಂಕಿನಿಂದ ಸಾಮಾಜಿಕ ಅಂತರ, ಶುಚಿತ್ವ ಮತ್ತಿತರ ರೀತಿಯಲ್ಲಿನ ಹೊಸ ಪಾಠವನ್ನು ಕಲಿತಿದ್ದೇವೆ. ತಿಂಗಳ ಕಾಲ ಪ್ರಧಾನಿ ಕರೆ ಮೇರೆಗೆ ಕಟ್ಟುನಿಟ್ಟಿನ ಲಾಕ್‌ಡೌನ್‌ಗೆ ದೇಶದ 138 ಕೋಟಿ ಜನತೆ ಪೂರಕವಾಗಿ ಸ್ಪಂದಿಸಿದ್ದು ಸೋಂಕು ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಆಶಾ ಕಾರ್ಯಕರ್ತೆಯರ ಶ್ರಮ ವಿಪರೀತ ಎಂದರು. ಈ ದಿಸೆಯಲ್ಲಿ ಮುಖ್ಯಮಂತ್ರಿಗಳು ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿಯಾಗಿ ರು.3 ಸಾವಿರ ಗೌರವಧನ ವಿತರಣೆಗೆ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಎಂಎಲ್‌ಸಿ ಟಿಕೆಟ್ ಆಕಾಂಕ್ಷಿಗಳಿಗೆ ಕಟೀಲ್ ಶಾಕ್!
ಶಿವಮೊಗ್ಗ ಹಾಗೂ ಶಿಕಾರಿಪುರಕ್ಕೆ ತಲಾ 5 ಕೋಟಿ ವೆಚ್ಚದಲ್ಲಿನ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಘಟಕ ನಿರ್ಮಾಣಕ್ಕೆ ಎಪಿಎಂಸಿ ನಿರ್ದೇಶಕ ಮಂಡಳಿ ಚರ್ಚಿಸಿ ಶಿರಾಳಕೊಪ್ಪದ ಸಮಿತಿ ಆವರಣದಲ್ಲಿ ಸೂಕ್ತ ಸ್ಥಳವನ್ನು ಗುರುತಿಸಿ ಕೂಡಲೇ ತೀರ್ಮಾನ ಕೈಗೊಳ್ಳುವಂತೆ ತಿಳಿಸಿದರು. ಹೊಸಳ್ಳಿ ಬಳಿ ತುಂಗಾ ನದಿಯಿಂದ ಅಂಜನಾಪುರ ಜಲಾಶಯಕ್ಕೆ, ಪುರದಕೆರೆಯಿಂದ ಉಡುಗಣಿ ತಾಳಗುಂದ ಹೋಬಳಿಯ 350 ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಏತನೀರಾವರಿ ಯೋಜನೆ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದ್ದು ವೇಗದ ಕಾಮಗಾರಿ ಚಾಲ್ತಿಯಲ್ಲಿದೆ. ಕಸಬಾ ಹೋಬಳಿಯ 3 ಸಾವಿರ ಹೆಕ್ಟೇರ್ ಜಮೀನಿಗೆ ನೀರುಣಿಸುವ ಏತ ನೀರಾವರಿ ಯೋಜನೆ ಕಾಮಗಾರಿಗೆ ವಾರದಲ್ಲಿ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.
ಆಶಾಕಾರ್ಯಕರ್ತೆಯರಿಗೆ ಚೆಕ್ ವಿತರಿಸಲಾಯಿತು. ಸಾನಿಧ್ಯವನ್ನು ಸ್ಥಳೀಯ ಕಾಳೇನಹಳ್ಳಿ ಶಿವಯೋಗಾಶ್ರಮದ ಶ್ರೀ ರೇವಣಸಿದ್ದ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಎಪಿಎಂಸಿ ಅಧ್ಯಕ್ಷ ಡಿ.ವಿ. ಸಿದ್ರಾಮಪ್ಪ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ದಯಾನಂದ್, ಡಾ. ಬಿ.ಡಿ. ಭೂಕಾಂತ್, ನಗರದ ರವಿಕಿರಣ್, ರತ್ನಮ್ಮ, ನಿರ್ಮಲಾ, ವೀರನಗೌಡ್ರು, ಸುಧೀರ್, ರುದ್ರಮುನಿ, ಶಿವಲಿಂಗ, ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಪ್ಪ, ಎಸಿಎಫ್ ಗೋಪ್ಯಾನಾಯ್ಕ ಮತ್ತಿತರರು ಉಪಸ್ಥಿತರಿದ್ದರು.