ಕಾರವಾರ ಮೀಟರ್ ಬಡ್ಡಿ ದಂಧೆ ಕಿಂಗ್ ಪಿನ್ ಜಮೀರ್ ಕೊಲೆ ಕೇಸ್: ಐವರ ಬಂಧನ! ಸುಪಾರಿ ಕೊಟ್ಟಿದ್ದು ಹಳೆ ವೈರಿ 'ಮಂಜ್ಯಾ'

Published : Apr 26, 2026, 08:21 PM IST
Karwar Zameer Durgawale murder

ಸಾರಾಂಶ

ಉತ್ತರ ಕನ್ನಡದ ಮುಂಡಗೋಡಿನಲ್ಲಿ ಮೀಟರ್ ಬಡ್ಡಿ ದಂಧೆಕೋರ ಜಮೀರ್ ಅಹ್ಮದ್‌ನನ್ನು ವೃತ್ತಿ ವೈಷಮ್ಯಕ್ಕಾಗಿ ಸುಪಾರಿ ಕೊಟ್ಟು ಕೊಲೆ ಮಾಡಲಾಗಿದೆ. ಈ ಪ್ರಕರಣದ ಮಾಸ್ಟರ್‌ಮೈಂಡ್ ಮಂಜುನಾಥ್‌ನ ಸಂಚಿನಂತೆ ಕೃತ್ಯ ಎಸಗಲಾಗಿದ್ದು, ಪೊಲೀಸರು ಐವರು ಆರೋಪಿಗಳನ್ನು ಬೆಂಗಳೂರಿನ ಬಳಿ ಬಂಧಿಸಿದ್ದಾರೆ.

ಉತ್ತರ ಕನ್ನಡ (ಏ.26): ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮೀಟರ್ ಬಡ್ಡಿ ದಂಧೆ ಕಿಂಗ್ ಪಿನ್ ಜಮೀರ್ ಅಹ್ಮದ್ ದರ್ಗಾವಾಲೆ ಕೊಲೆ ಪ್ರಕರಣದ ಸುರುಳಿ ಈಗ ಬಿಚ್ಚಿಕೊಂಡಿದೆ. ಬಡ್ಡಿ ದಂಧೆಯ ವೃತ್ತಿ ವೈಷಮ್ಯಕ್ಕಾಗಿ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನ ನೆಲಮಂಗಲ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೃತ್ತಿ ವೈಷಮ್ಯವೇ ಕೊಲೆಗೆ ಕಾರಣ:

ಈ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಮೀಟರ್ ಬಡ್ಡಿ ದಂಧೆಕೋರ ಕಾಜಗಾರ ಮಂಜುನಾಥ್ ಅಲಿಯಾಸ್ ಮಂಜ್ಯಾ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಮುಂಡಗೋಡಿನ ನಿವಾಸಿಯಾಗಿದ್ದ ಮಂಜುನಾಥ್, ಕಳೆದ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಹರ್ಷ ಎಂಬುವವರ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಮಂಜುನಾಥ್ ಕೂಡ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದನು. ಆದರೆ ಜಮೀರ್ ಅಹ್ಮದ್ ಬೆಳೆಯುತ್ತಿದ್ದ ರೀತಿ ಮತ್ತು ಆತನ ಹಾವಳಿ ಮಂಜುನಾಥ್‌ನ ದಂಧೆಗೆ ಅಡ್ಡಿಯಾಗಿತ್ತು.

ಜಮೀರ್ ದರ್ಪಕ್ಕೆ ಮುಂಡಗೋಡ ಬಿಟ್ಟಿದ್ದ ಮಂಜ್ಯಾ:

ಜಮೀರ್ ಅಹ್ಮದ್ ದರ್ಗಾವಾಲೆ ಮುಂಡಗೋಡಿನಲ್ಲಿ ಅಕ್ಷರಶಃ ದರ್ಬಾರ್ ನಡೆಸುತ್ತಿದ್ದನು. ಮಂಜುನಾಥ್ ಜೊತೆ ಕೆಲಸ ಮಾಡುತ್ತಿದ್ದ ಹುಡುಗರನ್ನು ಜಮೀರ್ ತನ್ನತ್ತ ಸೆಳೆದುಕೊಂಡಿದ್ದನು. ಅಲ್ಲದೆ, ಮಂಜುನಾಥ್ ನಡೆಸುತ್ತಿದ್ದ ದಂಧೆಗಳಿಗೆ ಅಡ್ಡಗಾಲು ಹಾಕುತ್ತಿದ್ದನು. ಜಮೀರ್ ನೀಡುತ್ತಿದ್ದ ನಿರಂತರ ಕಿರುಕುಳ ತಾಳಲಾರದೆ ಮಂಜುನಾಥ್ ತನ್ನ ಊರಾದ ಮುಂಡಗೋಡನ್ನು ಬಿಟ್ಟು ಹುಬ್ಬಳ್ಳಿಗೆ ಶಿಫ್ಟ್ ಆಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಮಂಜುನಾಥ್ ಮನಸ್ಸಿನಲ್ಲಿ ಜಮೀರ್ ವಿರುದ್ಧ ತೀವ್ರ ದ್ವೇಷ ಹುಟ್ಟುಹಾಕಿತ್ತು.

ಬಡ್ಡಿ ದಂಧೆಯ ಕರಾಳ ಮುಖ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎಂ. ನಾರಾಯಣ್ ಅವರು ವರ್ಗಾವಣೆಯಾದ ಬಳಿಕ ಮುಂಡಗೋಡಿನಲ್ಲಿ ಮೀಟರ್ ಬಡ್ಡಿ ದಂಧೆಯ ಹಾವಳಿ ಮಿತಿಮೀರಿತ್ತು. ಜಮೀರ್ ಅಹ್ಮದ್ ಸುಮಾರು 300ಕ್ಕೂ ಹೆಚ್ಚು ಜನರ ಮೇಲೆ ಚೆಕ್ ಬೌನ್ಸ್ ಕೇಸ್ ದಾಖಲಿಸಿ ಹಣ ವಸೂಲಿ ಮಾಡುತ್ತಿದ್ದನು. ಈ ದಂಧೆಯ ಮೂಲಕ ಜಮೀರ್ ಕೋಟ್ಯಂತರ ರೂಪಾಯಿ ಹಣ ಮಾಡುತ್ತಿರುವುದು ಹುಬ್ಬಳ್ಳಿಯಲ್ಲಿದ್ದ ಮಂಜುನಾಥ್ ಕಣ್ಣು ಕೆಂಪಾಗಿಸಿತ್ತು. ಹೇಗಾದರೂ ಮಾಡಿ ಜಮೀರ್‌ನನ್ನು ಮುಗಿಸಬೇಕೆಂದು ಸಂಚು ರೂಪಿಸಿದ ಮಂಜುನಾಥ್, ಹುಬ್ಬಳ್ಳಿ ಮೂಲದ ಹಂತಕರಿಗೆ ಸುಪಾರಿ ನೀಡಿ ಜಮೀರ್‌ನನ್ನು ಹತ್ಯೆ ಮಾಡಿಸಿದ್ದಾನೆ.

ನೆಲಮಂಗಲ ಬಳಿ ಹಂತಕರ ಬಂಧನ:

ಜಮೀರ್ ಕೊಲೆ ಮಾಡಿದ ಬಳಿಕ ಹಂತಕರು ಪರಾರಿಯಾಗಿದ್ದರು. ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಳಿ ಐವರು ಆರೋಪಿಗಳನ್ನು ಸುತ್ತುವರಿದು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೀಟರ್ ಬಡ್ಡಿ ದಂಧೆಯ ಈ ರಕ್ತಸಿಕ್ತ ಕಥೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಪೊಲೀಸರು ಈ ದಂಧೆಯ ಬೆನ್ನತ್ತಲು ನಿರ್ಧರಿಸಿದ್ದಾರೆ.

PREV
Read more Articles on
click me!

Recommended Stories

ರಾಮಲಿಂಗಾ ರೆಡ್ಡಿ, ಮುನಿಯಪ್ಪ ಅಸಮಾಧಾನ ಪಕ್ಷದಲ್ಲೇ..: ಶಾಸಕಿ ರೂಪಕಲಾ ಹೇಳಿದ್ದೇನು?
ಭಟ್ಕಳ: ಕಳಿನಡ ದುರಂತದಲ್ಲಿ ಸಾವು ಕಂಡ ಕುಟುಂಬದ ಸದಸ್ಯನಿಗೆ ಬ್ಯಾಂಕ್‌ನಲ್ಲಿ ಕೆಲಸ ಕೊಡಿಸಿದ ಶಾಸಕ ಮಂಕಾಳ ವೈದ್ಯ