
ಕಾರವಾರ: ಗೋವಾ ರಾಜ್ಯದ ಸಮೀಪದಲ್ಲಿರುವುದರಿಂದ ಮೋಜು-ಮಸ್ತಿಯ ಆಕರ್ಷಣೆಗೆ ಒಳಗಾಗಿ ಕಾರವಾರ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಅಪಾಯಕರ ಜೀವನ ಶೈಲಿಯತ್ತ ತಿರುಗುತ್ತಿರುವ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ಸಾಮಾಜಿಕ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದು, ಕಾಲೇಜು ಆಡಳಿತದ ಮೇಲೂ ಪ್ರಶ್ನೆಗಳು ಎದ್ದಿವೆ.
ಕಾರವಾರ ತಾಲೂಕು ಗೋವಾ ರಾಜ್ಯದ ಗಡಿಯನ್ನು ಹಂಚಿಕೊಂಡಿದ್ದು, ನಗರದಿಂದ ಗೋವಾ ಗಡಿ ಕೇವಲ 11 ಕಿಲೋಮೀಟರ್ ದೂರದಲ್ಲಿದೆ. ತರಗತಿಗಳು ಮುಗಿದ ನಂತರ ಹಲವಾರು ವೈದ್ಯಕೀಯ ವಿದ್ಯಾರ್ಥಿಗಳು ನಿತ್ಯವೂ ಮನರಂಜನೆಗಾಗಿ ಗೋವಾಕ್ಕೆ ತೆರಳುತ್ತಿರುವುದಾಗಿ ತಿಳಿದುಬಂದಿದೆ. ಅಲ್ಲಿ ಮದ್ಯಪಾನ ಮಾಡಿ, ತಡರಾತ್ರಿ ವಾಹನ ಚಲಾಯಿಸಿಕೊಂಡು ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಾಸ್ಟೆಲ್‌ಗೆ ಮರಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಈ ರೀತಿಯ ನಿರ್ಲಕ್ಷ್ಯದಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಅಪಘಾತಗಳು ಸಂಭವಿಸಿವೆ. ದ್ವಿಚಕ್ರ ವಾಹನ ಅಪಘಾತಗಳಲ್ಲಿ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಅಲ್ಲದೆ, ಮದ್ಯಪಾನದ ಮತ್ತಿನಲ್ಲಿ ವಾಹನ ಚಲಾಯಿಸಿದ ವಿದ್ಯಾರ್ಥಿಗಳಿಂದ ಇಬ್ಬರು ಸ್ಥಳೀಯರು ಜೀವ ಕಳೆದುಕೊಂಡ ಘಟನೆಗಳೂ ನಡೆದಿವೆ.
ಇತ್ತೀಚೆಗೆ ಗೋವಾದ ಪೊಳೆಲಂ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರವಾರದ ವೈದ್ಯಕೀಯ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿ, ಚಿತ್ರದುರ್ಗ ಮೂಲದ ಪ್ರೀತಮ್ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ಗದಗ ಮೂಲದ ಬಸವರಾಜ ಎಂಬ ವಿದ್ಯಾರ್ಥಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಗೋವಾದ ಬಾಂಬೋಲಿಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವರಾಜ ಪ್ರಸ್ತುತ ಜೀವ-ಮರಣ ಮಧ್ಯೆ ಹೋರಾಡುತ್ತಿದ್ದಾನೆ.
2025ರ ಅಕ್ಟೋಬರ್ ತಿಂಗಳಲ್ಲಿ ಆದರ್ಶ ಪೂಜಾರಿ ಎಂಬ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರೆ, ನವೆಂಬರ್ 13ರಂದು ಮದ್ಯಪಾನ ಮಾಡಿ ವಾಹನ ಚಲಾಯಿಸಿದ ವೈದ್ಯಕೀಯ ವಿದ್ಯಾರ್ಥಿಗಳಿಂದ ಕಾರವಾರದ 15 ವರ್ಷದ ಬಾಲಕನೊಬ್ಬ ಬಲಿಯಾಗಿದ್ದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ವೈದ್ಯಕೀಯ ಕಾಲೇಜಿನ ಆಡಳಿತ ಮತ್ತು ಹಾಸ್ಟೆಲ್ ವ್ಯವಸ್ಥೆಯ ಮೇಲೆ ಸ್ಥಳೀಯರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಿದ್ಯಾರ್ಥಿಗಳ ಮೇಲೆ ಕಾಲೇಜು ಮುಖ್ಯಸ್ಥರ ಹಿಡಿತವಿಲ್ಲದಿರುವುದು ಹಾಗೂ ಹಾಸ್ಟೆಲ್ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಲ್ಲಿಲ್ಲವೆಂಬುದು ಪ್ರಮುಖ ಆರೋಪವಾಗಿದೆ. ತಡರಾತ್ರಿ ವೇಳೆಯಲ್ಲಿಯೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ಅವಕಾಶ ನೀಡಲಾಗುತ್ತಿದೆ ಎನ್ನಲಾಗಿದ್ದು, ಹಾಸ್ಟೆಲ್ ವಾರ್ಡನ್‌ಗಳ ಮೇಲ್ವಿಚಾರಣೆ ಕೇವಲ ನಾಮಕಾವಸ್ಥೆಯಲ್ಲೇ ಉಳಿದಿದೆ ಎಂಬ ಟೀಕೆ ವ್ಯಕ್ತವಾಗಿದೆ.
ಸಾಮಾಜಿಕ ಹೋರಾಟಗಾರ ಮಾಧವ ನಾಯಕ ಈ ಬಗ್ಗೆ ಮಾತನಾಡಿ, ವೈದ್ಯಕೀಯ ಶಿಕ್ಷಣ ಪಡೆಯಲು ಬಂದಿರುವ ವಿದ್ಯಾರ್ಥಿಗಳು ಮೋಜುಮಸ್ತಿಯಲ್ಲಿ ತೊಡಗುತ್ತಿರುವುದು ದುರಂತ. ಪೋಷಕರು ಸಾಲ ಮಾಡಿ ಮಕ್ಕಳನ್ನು ಓದಲು ಕಳುಹಿಸುತ್ತಾರೆ. ಆದರೆ ಇಲ್ಲಿ ಅವರು ದಾರಿ ತಪ್ಪುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾಲೇಜು ಹಾಗೂ ಹಾಸ್ಟೆಲ್ ಆಡಳಿತವು ವಿದ್ಯಾರ್ಥಿಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರದಿದ್ದರೆ ಇಂತಹ ಅಪಘಾತಗಳು ಮುಂದುವರಿಯುತ್ತವೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಘಟನೆಗಳು ವೈದ್ಯಕೀಯ ವಿದ್ಯಾರ್ಥಿಗಳ ಜವಾಬ್ದಾರಿತನ ಹಾಗೂ ಕಾಲೇಜು ಆಡಳಿತದ ಮೇಲ್ವಿಚಾರಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿವೆ.