
ಬೆಂಗಳೂರು (ಆ.12): ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು, ಇಂದು ಕೂಡ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಳೆಯಿಂದ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಧಾರವಾಡ, ಹಾವೇರಿ, ಶಿವಮೊಗ್ಗ, ಗದಗ, ಬೆಳಗಾವಿ, ಬಾಗಲಕೋಟೆ, ಕಲಬುರಗಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಈ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇದ್ದು, ಜನ ಸಾಮಾನ್ಯರಿಗೆ ತೊಂದರೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಸಾರ್ವಜನಿಕರು ಮತ್ತು ಪ್ರಯಾಣಿಕರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ನಾಳೆಯ ಯೆಲ್ಲೋ ಅಲರ್ಟ್ ಅನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಲಾಗಿದೆ.
ಸೋಮವಾರ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಮಳೆ ತೀವ್ರಗೊಂಡಿತ್ತು. ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಹಲವು ಫ್ಲೈಓವರ್‌ಗಳು, ರಿಚ್ಮಂಡ್ ಸರ್ಕಲ್, ಶಿವಾಜಿನಗರ ಹಾಗೂ ಹೆಬ್ಬಾಳದಂತಹ ಪ್ರಮುಖ ಜಂಕ್ಷನ್‌ಗಳಲ್ಲಿ ನೀರು ತುಂಬಿ ಸಂಚಾರ ದಟ್ಟಣೆ ಉಂಟಾಗಿತ್ತು. ನಗರದಲ್ಲಿ 17ಕ್ಕೂ ಹೆಚ್ಚು ಮರಗಳು ಬುಡಮೇಲಾಗಿದ್ದು, 32ಕ್ಕೂ ಹೆಚ್ಚು ಕಡೆಗಳಲ್ಲಿ ಮರದ ಕೊಂಬೆಗಳು ಮುರಿದು ಬಿದ್ದಿವೆ ಎಂದು ಬಿಬಿಎಂಪಿ ವರದಿಗಳು ತಿಳಿಸಿವೆ.
ಇನ್ನು ಕೊಡಗು, ಮಂಡ್ಯ, ದಕ್ಷಿಣ ಕನ್ನಡ ಮತ್ತು ಉಡುಪಿಯಂತಹ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಿದ್ದು, ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮಡಿಕೇರಿಯಲ್ಲಿ ಭೂಕುಸಿತದ ಸಣ್ಣಪುಟ್ಟ ಘಟನೆಗಳು ವರದಿಯಾಗಿವೆ. ಮಂಡ್ಯದಲ್ಲಿ ಜಲಾಶಯಗಳಿಂದ ನೀರು ಬಿಡುಗಡೆಗೊಂಡಿದ್ದರಿಂದ ಹಲವು ಕೃಷಿ ಪ್ರದೇಶಗಳಿಗೆ ನೀರು ನುಗ್ಗಿ ಬೆಳೆಗಳಿಗೆ ಹಾನಿಯಾದ ಬಗ್ಗೆಯೂ ವರದಿಗಳಿವೆ. ಉಡುಪಿಯಲ್ಲಿ ಸಮುದ್ರ ತೀರದ ಪ್ರದೇಶಗಳಲ್ಲಿ ಎತ್ತರದ ಅಲೆಗಳು ಕಾಣಿಸಿಕೊಂಡಿದ್ದು, ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.