ರಾಜ್ಯದಲ್ಲಿ ಇವತ್ತು ಮೂರು ಪ್ರತ್ಯೇಕ ದುರಂತಗಳು, ದಾರುಣವಾಗಿ ಪ್ರಾಣಬಿಟ್ಟ ಐವರು

Published : Oct 23, 2026, 11:04 PM IST
Karnataka Road Accidents

ಸಾರಾಂಶ

ರಾಜ್ಯದ ಶಿಕಾರಿಪುರ, ಬೀದರ್ ಮತ್ತು ಕಲಬುರಗಿಯಲ್ಲಿ ನಡೆದ ಮೂರು ಪ್ರತ್ಯೇಕ ದುರ್ಘಟನೆಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಐವರು ಮೃತಪಟ್ಟಿದ್ದಾರೆ. ರಸ್ತೆ ಅಪಘಾತ ಹಾಗೂ ಕೆರೆಯಲ್ಲಿ ಮುಳುಗಿ ಈ ಸಾವುಗಳು ಸಂಭವಿಸಿದ್ದು, ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಲಬುರಗಿ/ ಶಿವಮೊಗ್ಗ/ ವಿಜಯಪುರ: ಇವತ್ತು ನಡೆದ ಮೂರು ಪ್ರತ್ಯೇಕ ದುರ್ಘಟನೆಗಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ.

ಶಿಕಾರಿಪುರದಲ್ಲಿ ಅಪಘಾತ

ಕಾರು ಮತ್ತು ಕ್ಯಾಂಟರ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿಕಾರಿಪುರ ತಾಲೂಕಿನ ತರಲಘಟ್ಟ ಕ್ಯಾಂಪ್ ಬಳಿ ನಡೆದಿದೆ. ಶಿರಾಳಕೊಪ್ಪ ಸಮೀಪದ ಮುತ್ತಿಗೆ ಗ್ರಾಮದ ಕಾರು ಚಾಲಕ ಸಿದ್ದು (34) ಹಾಗೂ ಲಲಿತಮ್ಮ (65) ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಉಜ್ಜಪ್ಪ (74), ಹನುಮಂತಪ್ಪ (65) ಹಾಗೂ ಜಯಮ್ಮ (55) ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕ ಎನ್ನಲಾಗಿದೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೀದರ್‍‌ನಲ್ಲಿ ಮತ್ತೊಂದು ಅನಾಹುತ

ತುಳಜಾಪುರ ಅಂಬಾಭವಾನಿ ಭಕ್ತರ ಮೇಲೆ ಲಾರಿ ಹರಿದು 7 ಮಂದಿ ಗಾಯಗೊಂಡಿದ್ದಾರೆ. ಓರ್ವ ಪ್ರಾಣ ಬಿಟ್ಟಿದ್ದಾರೆ. ಬಸವಕಲ್ಯಾಣದಿಂದ ಪಾದಯಾತ್ರೆ ಹೊರಟಿದ್ದ ವೇಳೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ದುರಂತ ಸಂಭವಿಸಿದೆ. ಮಹಾರಾಷ್ಟ್ರದ ನಳದುರ್ಗ ಬಳಿ ದುರ್ಘಟನೆ ನಡೆದಿದೆ. ಅಂಬಾ ಭವಾನಿ ಗುರು ಕುಂಬಾರ (27) ಮೃತ ದುರ್ದೈವಿ. ಈತ ಬಸವಕಲ್ಯಾಣದ ನಿವಾಸಿಯಾಗಿದ್ದ ಎಂದು ತಿಳಿದುಬಂದಿದೆ.

ಇನ್ನು ದುರ್ಘಟನೆಯಲ್ಲಿ ಈತನ ಸಹೋದರ ವೀರೇಶ ಕುಂಬಾರ ಸ್ಥಿಯ ಚಿಂತಾಜನಕವಾಗಿದೆ. ರೋಹನ ಹಂಚಾಟೆ, ಮಹಾದೇವ ಸ್ವಾಮಿ, ಚಂದ್ರಕಾಂತ ಜಮಾದಾರ, ವೀರೇಶ ಚೌದ್ರಿ, ಸಂಗಮೇಶ್ವರ ಅನುಶಾ ಬಿ, ರಮೇಶ ಹೈದ್ರಾಬಾದ್ ಅನ್ನೋರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಂಬಾಭವಾನಿ ದರ್ಶನಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ನವರಾತ್ರಿ ನಿಮಿತ್ಯ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಐತಿಹಾಸಿಕ ತುಳಜಾಪುರ ಅಂಬಾಭವಾನಿ ದರ್ಶನಕ್ಕೆ ತೆರಳುತ್ತಾರೆ.

ಕಲಬುರಗಿಯಲ್ಲಿ ಮಕ್ಕಳು ಸಾವು

ಕೆರೆಯಲ್ಲಿ ಈಜಲು ತೆರಳಿದ್ದ ಕಲಬುರಗಿ ಜಿಲ್ಲೆಯ ಇಬ್ಬರು ಬಾಲಕರು ದಾರುಣವಾಗಿ ಮೃತಪಟ್ಟಿದ್ದಾರೆ. ಬೋಪನಾರಂ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ಬಾಲಕರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕುಂಚಾವರಂ ತಾಂಡಾ ನಿವಾಸಿಗಳಾಗಿದ್ದಾರೆ. ಅಜಯ್ (14), ಪಾಂಡು (15) ಮೃತ ಬಾಲಕರು. ಶಾಲೆ ರಜೆ ಹಿನ್ನೆಲೆಯಲ್ಲಿ ಮಕ್ಕಳೆಲ್ಲ ಊರಾಚೆಗಿನ ಕೆರೆಯಲ್ಲಿ ಈಜಲು ಹೋಗಿದ್ದರು. ಅವರಲ್ಲಿ ಓರ್ವ ನೀರಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ. ಆತನ ಕಾಪಾಡಲು ಮತ್ತೊಬ್ಬ ಹೋಗಿ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಎರಡೂ ಮಕ್ಕಳಿಗೂ ಈಜಲು ಬರುತ್ತಿರಲಿಲ್ಲ. ಆದರೂ ಕೆರೆಯಲ್ಲಿ ಸ್ನಾನಕ್ಕೆ ಹೋಗಿದ್ದರು. ಮಕ್ಕಳು ಕೆರೆಯಲ್ಲಿ ಈಜಲು ಹೋಗಿರೋದು ಪೋಷಕರ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದ ಮುಗಿಲು ಮುಟ್ಟಿದೆ.

PREV
Read more Articles on
click me!

Recommended Stories

ದಸರಾ ಸಂಭ್ರಮದಲ್ಲಿ ಮೈಸೂರು ಮೃಗಾಲಯಕ್ಕೆ ಬಂಪರ್ ಆದಾಯ: 1.57 ಲಕ್ಷ ಪ್ರವಾಸಿಗರಿಂದ ಬಂತು ಕೋಟಿ ಕೋಟಿ ಆದಾಯ!
ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ನಿಶ್ಚಿತಾರ್ಥ, ರಾಯಚೂರಿನ ಸೊಸೆ ಆಗಲಿದ್ದಾರೆ ಸತೀಶ್‌ ಜಾರಕಿಹೊಳಿ ಪುತ್ರಿ!