
ಮಡಿಕೇರಿ: ಕೊಡಗು ಜಿಲ್ಲಾ ಪ್ರಧಾನ ನ್ಯಾಯಾಲಯ ಸಂಕೀರ್ಣಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಜಿಲ್ಲೆಯಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಇಂದು ಮಧ್ಯಾಹ್ನ 2 ಗಂಟೆಯ ವೇಳೆಗೆ ಸೈನೈಡ್ ಬಾಂಬ್ ಬಳಸಿ ನ್ಯಾಯಾಲಯವನ್ನು ಸ್ಫೋಟಿಸಲಾಗುವುದು ಹಾಗೂ ಐಸಿಸ್ (ISIS) ಉಗ್ರ ಸಂಘಟನೆಯ ಆತ್ಮ*ಹತ್ಯಾ ಬಾಂಬರ್‌ಗಳು ದಾಳಿ ನಡೆಸಲಿದ್ದಾರೆ ಎಂದು ಇ-ಮೇಲ್‌ನಲ್ಲಿ ಎಂದು ಬೆದರಿಕೆ ಹಾಕಲಾಗಿದೆ.
ಇಂದು ಮುಂಜಾನೆ ಸುಮಾರು 6 ಗಂಟೆಯ ವೇಳೆಗೆ ಕೊಡಗು ಜಿಲ್ಲಾ ನ್ಯಾಯಾಲಯದ ಅಧಿಕೃತ ಇ-ಮೇಲ್ ಐಡಿಗೆ ಸಂದೇಶವೊಂದು ಬಂದಿದೆ. 'ಸಹನಾ' ಎಂಬ ಹೆಸರಿನ ಐಡಿಯಿಂದ ಈ ಇ-ಮೇಲ್ ರವಾನೆಯಾಗಿದೆ. ಬೆಳಿಗ್ಗೆ ಕಚೇರಿಗೆ ಬಂದ ಸಿಬ್ಬಂದಿ ಇ-ಮೇಲ್ ಪರಿಶೀಲಿಸಿದಾಗ ಈ ಆಘಾತಕಾರಿ ಬಾಂಬ್ ಬೆದರಿಕೆ ವಿಷಯ ಬೆಳಕಿಗೆ ಬಂದಿದ್ದು, ತಕ್ಷಣವೇ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ.
ಬಂದಿರುವ ಇ-ಮೇಲ್ ಅತ್ಯಂತ ಸಂವೇದನಾಶೀಲ ಮತ್ತು ಆಕ್ರೋಶದ ಭಾಷೆಯಿಂದ ಕೂಡಿದೆ ಎಂದು ಮೂಲಗಳು ತಿಳಿಸಿವೆ.
ಸೈನೈಡ್ ಬಾಂಬ್ ಸ್ಫೋಟ: ಇಂದು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಭೀಕರ 'ಸೈನೈಡ್ ಬಾಂಬ್' ಬಳಸಿ ನ್ಯಾಯಾಲಯವನ್ನು ಉಡಾಯಿಸುವುದಾಗಿ ಬೆದರಿಸಲಾಗಿದೆ.
ಐಸಿಸ್ ಸುಸೈಡ್ ಬಾಂಬರ್ಸ್: ಸ್ಫೋಟದ ಜೊತೆಗೆ ಇಸ್ಲಾಮಿಕ್ ಸ್ಟೇಟ್ (ISIS) ಸಂಘಟನೆಯ ಆತ್ಮ*ಹತ್ಯಾ ಬಾಂಬರ್‌ಗಳು ದಾಳಿ ನಡೆಸಲು ಬರಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಪ್ರವಾದಿ ನಿಂದನೆ ಮತ್ತು ಪೊಲೀಸ್ ದೌರ್ಜನ್ಯ: ಮೊಹಮ್ಮದ್ ಪೈಗಂಬರ್ ಅವರನ್ನು ನಿಂದಿಸಲಾಗಿದೆ ಹಾಗೂ ಮುಸ್ಲಿಮರ ಮೇಲೆ ಪೊಲೀಸರ ದೌರ್ಜನ್ಯ ನಡೆಯುತ್ತಿದೆ ಎಂದು ಮೇಲ್‌ನಲ್ಲಿ ಆರೋಪಿಸಲಾಗಿದೆ.
ರಾಜಕಾರಣಿ ಉದಯನಿಧಿ ಹೆಸರು ಪ್ರಸ್ತಾಪ: ತಮಿಳುನಾಡಿನ ಪ್ರಭಾವಿ ರಾಜಕಾರಣಿ ಉದಯನಿಧಿ ಸ್ಟಾಲಿನ್ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳನ್ನು ಕೂಡ ಈ ಇ-ಮೇಲ್‌ನಲ್ಲಿ ಉಲ್ಲೇಖಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬಾಂಬ್ ಬೆದರಿಕೆ ಸುದ್ದಿ ತಿಳಿಯುತ್ತಿದ್ದಂತೆ ಅಲರ್ಟ್ ಆದ ಕೊಡಗು ಜಿಲ್ಲಾ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಸ್ಥಳಕ್ಕೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (BDDS) ಹಾಗೂ ಶ್ವಾನ ದಳ (Dog Squad) ಧಾವಿಸಿದ್ದು, ತಪಾಸಣೆ ತೀವ್ರಗೊಳಿಸಿವೆ. ನ್ಯಾಯಾಲಯದ ಕೊಠಡಿಗಳು, ದಾಖಲೆಗಳ ಕೊಠಡಿ, ಕಚೇರಿ ಆವರಣ ಹಾಗೂ ವಾಹನ ನಿಲ್ದಾಣ ಸೇರಿದಂತೆ ಸಂಕೀರ್ಣದ ಮೂಲೆ ಮೂಲೆಗಳಲ್ಲೂ ಕಟ್ಟುನಿಟ್ಟಿನ ಶೋಧ ಕಾರ್ಯ ನಡೆಸಲಾಗುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದ ಒಳಗಿದ್ದ ನ್ಯಾಯಾಧೀಶರು, ವಕೀಲರು ಹಾಗೂ ಸಮಸ್ತ ನ್ಯಾಯಾಲಯದ ಸಿಬ್ಬಂದಿಯನ್ನು ತಕ್ಷಣವೇ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಸದ್ಯ ನ್ಯಾಯಾಧೀಶರು ಮತ್ತು ಸಿಬ್ಬಂದಿ ನ್ಯಾಯಾಲಯದ ಆವರಣದ ಹೊರಗಡೆ ಆತಂಕದಿಂದ ಕಾಯುತ್ತ ನಿಂತಿದ್ದು, ಇಡೀ ಕೋರ್ಟ್ ಸಂಕೀರ್ಣವನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಮೇಲ್ ಕಳುಹಿಸಿದ 'ಸಹನಾ' ಯಾರು? ಇದರ ಹಿಂದೆ ಇರುವ ದುಷ್ಕರ್ಮಿಗಳ ಪತ್ತೆಗೆ ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದೀಗ ಕೊಡಗು ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಬಂದಿದ್ದು ಹುಸಿ ಎಂದು ತಿಳಿದುಬಂದಿದೆ. ಬಾಂಬ್ ಪತ್ತೆ ದಳ ಹುಸಿ ಬಾಂಬ್ ಕರೆ ಎಂಬುದನ್ನು ಬಹಿರಂಗಗೊಳಿಸಿದೆ. ನ್ಯಾಯಾಲಯ ಸಂಕೀರ್ಣದ ಎಲ್ಲೆಡೆ ಶೋಧಿಸಿ ಹುಸಿ ಬಾಂಬ್ ಕರೆ ಎಂದು ಘೋಷಣೆ ಮಾಡಿದೆ. ಆ ಬಳಿಕ ನಿಟ್ಟುಸಿರು ಬಿಟ್ಟ ನ್ಯಾಯಾಧೀಶರು ಮತ್ತು ಸಿಬ್ಬಂದಿ ಮತ್ತು ವಕೀಲರು ಸದ್ಯ ನ್ಯಾಯಾಲಯದ ಕಾರ್ಯಕಲಾಪಕ್ಕೆ ತೆರಳಿದರು.