ಚಂಡಮಾರುತ ಹಾಗೂ ಭಾರಿ ಮಳೆ ಮುನ್ಸೂಚನೆ: ಕರಾವಳಿ ಜಿಲ್ಲೆಗಳಲ್ಲಿ 61 ದಿನಗಳ ಕಾಲ ಮೀನುಗಾರಿಕೆ ನಿಷೇಧ

Published : May 21, 2026, 05:21 PM IST
fishing ban

ಸಾರಾಂಶ

ಮುಂಗಾರು ಪೂರ್ವ ಮಳೆ ಹಾಗೂ ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 1 ರಿಂದ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಸುರಕ್ಷತಾ ಕ್ರಮವಾಗಿ ಗೋಕರ್ಣ, ಮುರ್ಡೇಶ್ವರ ಸೇರಿದಂತೆ ಕರಾವಳಿಯಾದ್ಯಂತ ಜಲಸಾಹಸ ಕ್ರೀಡೆಗಳು ಮತ್ತು ಪ್ರವಾಸಿ ಬೋಟಿಂಗ್ ಚಟುವಟಿಕೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.

ಮಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಬ್ಬರ ಮುಂದುವರಿದಿದೆ. ಭಾರತೀಯ ಹವಾಮಾನ ಇಲಾಖೆ ಚಂಡಮಾರುತ ಹಾಗೂ ಭಾರಿ ಮಳೆ ಉಂಟಾಗುವ ಸಾಧ್ಯತೆ ಕುರಿತು ಮುನ್ಸೂಚನೆ ನೀಡಿರುವುದರಿಂದ ಸುರಕ್ಷತೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಟೆರಿಟೋರಿಯಲ್ ವಾಟರ್ಸ್ (12 ನಾಟಿಕಲ್ ಮೈಲ್ ವರೆಗಿನ) ಭಾಗದಲ್ಲಿ ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ ಎಲ್ಲ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಮೋಟಾರೀಕೃತ ದೋಣಿ ಮುಖಾಂತರ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಜೂನ್ 1 ರಿಂದ ಜುಲೈ 31 ರವರೆಗೆ (ಉಭಯ ದಿನಗಳು ಸೇರಿ) ಒಟ್ಟು 61 ದಿನಗಳ ನಿಷೇಧ ವಿಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ನಿಷೇಧದ ಅವಧಿಯಲ್ಲಿ ಏನು ಮಾಡೋದು?

ನಿಷೇಧದ ಅವಧಿಯಲ್ಲಿ ಜಿಲ್ಲೆಯಲ್ಲಿ ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿಯೇ 10 ಅಶ್ವಶಕ್ತಿ ರೆಗಿನ ಸಾಮರ್ಥ್ಯದ ಮೋಟಾರೀಕೃತ ದೋಣಿ ಮತ್ತು ಸಾಂಪ್ರದಾಯಿಕ ನಾಡದೋಣಿಗಳು ಕರಾವಳಿ ಮೀನುಗಾರಿಕೆಯನ್ನು ಕೈಗೊಳ್ಳಲು ಅನುಮತಿಸಿದೆ.

ಮೀನುಗಾರಿಕೆ ನಿಷೇಧಿಸಿದ ಆದೇಶವನ್ನು ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಮತ್ತು ಮೀನುಗಾರರು ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ-1986ರಲ್ಲಿ ವಿಧಿಸಲಾಗಿರುವ ದಂಡನೆಗಳಿಗೆ ಹೊಣೆಯಾಗುವುದಲ್ಲದೆ, ಒಂದು ವರ್ಷದ ಅವಧಿಗೆ ರಾಜ್ಯ ಮಾರಾಟ ಕರ ರಹಿತ ಡೀಸೆಲ್ ಪಡೆಯಲು ಅನರ್ಹರಾಗುತ್ತಾರೆ. ಈ ಆದೇಶವನ್ನು ಕರಾವಳಿ ಪ್ರದೇಶದ ಎಲ್ಲ ಮೀನುಗಾರರು ಪಾಲಿಸಬೇಕು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಾಳಿ ಮಳೆ ಸಾಧ್ಯತೆ, ಜಲಸಾಹಸ ಚಟುವಟಿಕೆ ನಿರ್ಬಂಧ

ಚಂಡಮಾರುತ, ಭಾರಿ ಮಳೆ ಸಾಧ್ಯತೆ ಹಿನ್ನೆಲೆ ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆಗಳನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ. ಭಾರತೀಯ ಹವಾಮಾನ ಇಲಾಖೆ ಚಂಡಮಾರುತ ಹಾಗೂ ಭಾರಿ ಮಳೆ ಉಂಟಾಗುವ ಸಾಧ್ಯತೆ ಕುರಿತು ಮುನ್ಸೂಚನೆ ನೀಡಿರುವುದರಿಂದ ಸುರಕ್ಷತೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಗೋಕರ್ಣ, ಮುರ್ಡೇಶ್ವರ, ಕಾರವಾರ ಬೀಚ್‌ಗಳಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ಗೋಕರ್ಣದ ಓಂ ಬೀಚ್, ಕುಡ್ಲೆ ಬೀಚ್, ಹಾಫ್‌ಮೂನ್ ಬೀಚ್, ಪ್ಯಾರಡೈಸ್ ಬೀಚ್ ಜಲಸಾಹಸ ಚಟುವಟಿಕೆ ಬಂದ್ ಮಾಡಲು ಆದೇಶಿಸಲಾಗಿದೆ. ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್‌ಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಶರಾವತಿ ಹಿನ್ನೀರು, ಅಘನಾಶಿನಿ ನದಿಯಲ್ಲಿ ಪ್ರವಾಸಿಗರ ಬೋಟಿಂಗ್ ಕೂಡ ಸ್ಥಗಿತಗೊಳಿಸಲಾಗಿದೆ. ಅಪ್ಸರಕೊಂಡ ಬೀಚ್‌ನಲ್ಲಿ ಪ್ರೀವೆಡ್ಡಿಂಗ್ ಸೆಟ್ ಅಳವಡಿಕೆಗೂ ನಿರ್ಬಂಧ ಹೇರಲಾಗಿದೆ. ಪ್ರವಾಸಿಗರು ಹಾಗೂ ಮೀನುಗಾರರು ಕಡಲತೀರ ಹಾಗೂ ನದಿತೀರ ಪ್ರದೇಶಗಳಿಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

PREV
Read more Articles on
click me!

Recommended Stories

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಚಾಲೆಂಜರ್ 2026 ಭರ್ಜರಿ ತಾಲೀಮು, 3000 ಸಿಬ್ಬಂದಿಗಳಿಂದ ತುರ್ತು ಕಾರ್ಯಾಚರಣೆ
ಗಂಗಾವತಿ ಕಾಂಗ್ರೆಸ್‌ನಲ್ಲಿ ಹೆಚ್ಚಿದ ಗುಂಪುಗಾರಿಕೆ: ತ್ರಿಶಂಕು ಸ್ಥಿತಿಯಲ್ಲಿ ಕಾರ್ಯಕರ್ತರು