
ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ, ಬೆಂಗಳೂರಿನಲ್ಲಿ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ, ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ.
ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿ ಎ.ಸಿ.ಎಫ್.ಶ್ರೀನಿವಾಸ್ ಅವರ ಮನೆ ಮತ್ತು ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್‌ನಲ್ಲಿರುವ ನಿವಾಸ, ಕಡೂರಿನಲ್ಲಿರುವ ಶ್ರೀನಿವಾಸ್ ಸೋದರಿ ನಿವಾಸಕ್ಕೆ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ದೂರು ಬಂದ ಹಿನ್ನೆಲೆ ಲೋಕಾಯುಕ್ತ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ದಾವಣಗೆರೆಯಲ್ಲಿ ಮೂವರು ಅಧಿಕಾರಿಗಳ ಕಚೇರಿ, ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಕೃಷ್ಣಾ ನಾಯ್ಕ್ ಅವರ ಸಿದ್ದವೀರಪ್ಪ ಬಡಾವಣೆಯಲ್ಲಿರೋ ಎರಡು ಮನೆ, NWKRTC ಮುಖ್ಯ ಯಾಂತ್ರಿಕ ಮೆಕ್ಯಾನಿಕಲ್ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ್ ಅವರ ಸರಸ್ವತಿ ನಗರದಲ್ಲಿ ಮನೆ, ಕೆಆರ್‌ಐಡಿಎಲ್ ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗುತ್ತಿದೆ. ದಾವಣಗೆರೆಯ ಶಿವಕುಮಾರ್ ಬಡಾವಣೆಯಲ್ಲಿಯ ಮನೆ, ಹರಪನಹಳ್ಳಿ ಒಂದು ಮನೆ ಮೇಲೆ ದಾಳಿ ಸೇರಿದಂತೆ ಒಟ್ಟು 12 ಕಡೆ ದಾಳಿ ನಡೆದಿದೆ. ಬೆಳಗಾವಿ, ಹುಬ್ಬಳ್ಳಿ, ವಿಜಯನಗರ ದಾವಣಗೆರೆಯಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆದಿದೆ.
ಕಲಬುರಗಿ
ಕಲಬುರಗಿಯಲ್ಲಿ ಪಂಚಾಯತ್ ರಾಜ್ ಇಲಾಖೆ ನಿವೃತ್ತ ಸುಪರಿಡೆಂಟ್ ಇಂಜಿನಿಯರ್ ಮಾಣಿಕ್ ಕನಕಟ್ಟಿ ಮನೆ ಸೇರಿದಂತೆ ಐದು ಕಡೆ ಮೇಲೆ ದಾಳಿ ನಡೆದಿದೆ. ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದ ಮನೆ, ಹುಮ್ನಾಬಾದ್ ನ ಎರಡು ಕಾಂಪ್ಲೆಂಕ್ಸ್ , ಹಳ್ಳಿಖೇಡ ಗ್ರಾಮದ ತೋಟದ ಮನೆಯ ಮೇಲೆ ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಬೀದರ ಜಿಲ್ಲೆ ಹುಮನಾಬಾದನಲ್ಲಿ ಎರಡು ಕಾಂಪ್ಲೆಕ್ಸ್, ಹಳ್ಳಿ ಖೇಡನಲ್ಲಿ 20 ಎಕರೆ ತೋಟ, ಕಲಬುರಗಿಯಲ್ಲಿ ಎರಡು ಮನೆ ಸೇರಿದಂತೆ ಆರಂಭದಲ್ಲೇ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ನಿವೃತ ಅಧಿಕಾರಿ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಬೆಂಗಳೂರು:
ಬೆಂಗಳೂರಿನ ಎರಡು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ರಾಜಣ್ಣ ಅಡಿಷನಲ್ ಡೈರೆಕ್ಟರ್ ಕರ್ನಾಟಕ ಹೌಸಿಂಗ್ ಬೋರ್ಡ್ ಮತ್ತು ಬೆಸ್ಕಾಂ ಎಇಇ ಉದಯ್ ಕುಮಾರ್ ಅವರ ಯಲಹಂಕದ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ಇಬ್ಬರು ಅಧಿಕಾರಿಗಳಿಂದ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿದೆ.