ಅನುಮತಿ ಇಲ್ಲದೆ ಕರ್ನಾಟಕ ಕಾಮಗಾರಿ ನಡೆಸುತ್ತಿದೆ ಎಂಬ ಗೋವಾ ತಕರಾರಿಗೆ ನಾಳೆ ಸುಪ್ರೀಂನಲ್ಲಿ ತಿರುಗೇಟು ನಾಳೆ ವಿಚಾರಣೆ | ಒಪ್ಪಿಗೆ ಯಿಲ್ಲದೆ ಯಾವುದೇ ಕಾಮಗಾರಿ ನಡೆಸಿಲ್ಲ ಎಂದು ವಾದ ಮಂಡಿಸಲು ಕರ್ನಾಟಕ ಸಿದ್ಧ|
ಬೆಂಗಳೂರು(ಮಾ.01): ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಗೋವಾ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿ ಸೋಮವಾರ ವಿಚಾರಣೆಗೆ ಬರಲಿದ್ದು, ರಾಜ್ಯ ಸರ್ಕಾರವು ಕೇಂದ್ರದ ಅನುಮತಿ ಇಲ್ಲದೆ ಯಾವುದೇ ಕಾಮಗಾರಿ ಮಾಡಿಲ್ಲ ಎಂದು ವಾದ ಮಂಡಿಸಲು ಕರ್ನಾಟಕ ಎಲ್ಲಾ ಸಿದ್ಧತೆ ನಡೆಸಿದೆ.
ಮಹದಾಯಿ ನ್ಯಾಯಾಧಿಕರಣದ ಅಂತಿಮ ತೀರ್ಪಿನಂತೆ ಸರ್ಕಾರಿ ಅಧಿಸೂಚನೆ ಹೊರಡಿಸಲು ಸುಪ್ರೀಂಕೋರ್ಟ್ ಇತ್ತೀಚೆಗೆ ಸೂಚನೆ ನೀಡಿತ್ತು. ಇದರಂತೆ ಕೇಂದ್ರ ಸರ್ಕಾರವು ಗುರುವಾರ ಅಧಿಸೂಚನೆ ಹೊರಡಿಸಿ ರಾಜ್ಯದ ಪಾಲಿನ ನೀರನ್ನು ಬಳಸಿಕೊಂಡು ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಿದೆ. ಈ ನಡುವೆ ಮೂರೂ ರಾಜ್ಯಗಳು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನ ಉಲ್ಲಂಘಿಸಿ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ಮಹದಾಯಿ ಕಾಮಗಾರಿ ನಡೆಸಿದೆ ಎಂದು ಗೋವಾ ಸರ್ಕಾರ ತಕರಾರು ತೆಗೆದಿದೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಸಂಬಂಧದ ವಿಶೇಷ ಮೇಲ್ಮನವಿ ಅರ್ಜಿಯು ಸೋಮವಾರ ವಿಚಾರಣೆಗೆ ಬರಲಿದೆ. ಸೋಮವಾರ ರಾಜ್ಯ ಸರ್ಕಾರದ ಪರ ವಾದ ಮಂಡಿಸಲು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ನೇತೃತ್ವದ ವಕೀಲರ ತಂಡ ಶನಿವಾರ ಸಂಜೆ ದೆಹಲಿಗೆ ತೆರಳಿದೆ. ವಿಚಾರಣೆಗೆ ಮೊದಲು ಅಂತಿಮ ಸಿದ್ಧತೆ ಸಭೆ ನಡೆಸಿ ರಾಜ್ಯ ಸರ್ಕಾರವು ಕೇಂದ್ರದ ಅನುಮತಿ ಇಲ್ಲದೆ ಯಾವುದೇ ಕಾಮಗಾರಿ ನಡೆಸಿಲ್ಲ. ಈ ವಿಷಯದಲ್ಲಿ ಗೋವಾ ಅನಗತ್ಯ ತಕರಾರು ತೆಗೆಯುತ್ತಿದೆ ಎಂದು ವಾದ ಮಂಡಿಸಲು ಸಿದ್ಧತೆ ನಡೆಸಿಕೊಳ್ಳುತ್ತಿದೆ ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾತನಾಡಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಗೋವಾ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿಲ್ಲ. ಕರ್ನಾಟಕವು ಕೇಂದ್ರದ ಅನುಮತಿ ಇಲ್ಲದೆ ಕಾಮಗಾರಿ ನಡೆಸಿದೆ ಎಂದು ಆಕ್ಷೇಪಿಸಿ ವಿಶೇಷ ಮೇಲ್ಮನವಿ ಸಲ್ಲಿಸಿದೆ. ಈ ಬಗ್ಗೆ ನಮ್ಮ ವಾದ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.