2018 ನೇ ಇಸವಿಯಿಂದಲೂ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಭೀಕರ ಭೂಕುಸಿತ, ಪ್ರವಾಹ ಎದುರಾಗಿದ್ದು ಗೊತ್ತೇ ಇದೆ. ಆದರೂ ಸರ್ಕಾರಗಳಿಂದಲೇ ಜಿಲ್ಲೆಯ ಪ್ರಕೃತಿಯ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇದೀಗ ಕರ್ನಾಟಕ ಗೃಹ ಮಂಡಳಿ ನೂರಾರು ಎಕರೆ ಬೆಟ್ಟ ಪ್ರದೇಶವನ್ನು ನೆಲಸಮ ಮಾಡಿ ಅಲ್ಲಿ ಬಡಾವಣೆ ಮಾಡುತ್ತಿದೆ. ಇದು ಕೊಡಗಿನಲ್ಲಿ ಸಾರ್ವಜನಿಕರ ತೀವ್ರ ವಿರೋಧ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ.21): 2018 ನೇ ಇಸವಿಯಿಂದಲೂ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಭೀಕರ ಭೂಕುಸಿತ, ಪ್ರವಾಹ ಎದುರಾಗಿದ್ದು ಗೊತ್ತೇ ಇದೆ. ಆದರೂ ಸರ್ಕಾರಗಳಿಂದಲೇ ಜಿಲ್ಲೆಯ ಪ್ರಕೃತಿಯ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇದೀಗ ಕರ್ನಾಟಕ ಗೃಹ ಮಂಡಳಿ ನೂರಾರು ಎಕರೆ ಬೆಟ್ಟ ಪ್ರದೇಶವನ್ನು ನೆಲಸಮ ಮಾಡಿ ಅಲ್ಲಿ ಬಡಾವಣೆ ಮಾಡುತ್ತಿದೆ. ಇದು ಕೊಡಗಿನಲ್ಲಿ ಸಾರ್ವಜನಿಕರ ತೀವ್ರ ವಿರೋಧ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
undefined
ಹೌದು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 22/1 ರಲ್ಲಿ ರೈತರ 102 ಎಕರೆ ಖಾಸಗಿ ತೋಟಗಳನ್ನು ಖರೀದಿಸಿ ಅದೆಲ್ಲವನ್ನು ನೆಲಸಮ ಮಾಡಿ ಬಡಾವಣೆ ನಿರ್ಮಿಸಲಾಗುತ್ತಿದೆ. ದೊಡ್ಡ ಬುಲ್ಡೋಜರ್, ಹಿಟ್ಯಾಚಿ ಮತ್ತು ದೊಡ್ಡ ದೊಡ್ಡ ಟಿಪ್ಪರ್ ಲಾರಿಗಳನ್ನು ಬಳಸಿ ಬೆಟ್ಟಗಳನ್ನು ಕೊರೆದು ನೆಲಸಮಮಾಡಿ ಬಡಾವಣೆ ನಿರ್ಮಿಸಲಾಗುತ್ತಿದೆ. ಇದರಿಂದ ಈಗಾಗಲೇ ಮಳೆ ಆರಂಭವಾಗಿದ್ದು, ತೀವ್ರಗೊಂಡಲ್ಲಿ ಈ ಭಾಗದಲ್ಲಿ ಬೆಟ್ಟಗಳು ಕುಸಿಯುವ ಆತಂಕ ಎದುರಾಗಿದೆ. ಬೆಟ್ಟ ಕೊರೆಯುವ ಸಂದರ್ಭ ಅಲ್ಲಿದ್ದ ನೂರಾರು ಮರಗಳನ್ನು ಕಡಿಯಲಾಗಿದೆ. ಇದಕ್ಕೂ ಅರಣ್ಯ ಇಲಾಖೆಯೂ ಸಹ ಯಾವುದೇ ಗಮನ ಹರಿಸಿಲ್ಲ ಎನ್ನುವುದು ಸ್ಥಳೀಯ ಪಂಚಾಯಿತಿ ಸದಸ್ಯರ ಅಸಮಾಧಾನ.
ಉತ್ತಮ ಮಳೆಗೆ ಜೀವಕಳೆ ಪಡೆದ ಕಾವೇರಿ: ಚುರುಕುಗೊಂಡ ಕೊಡಗು ಪ್ರವಾಸೋದ್ಯಮ
ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಮತ್ತು ಪ್ರವಾಹ ಆಗುತ್ತಿದ್ದರೂ ಮತ್ತೆ ಮತ್ತೆ ಕೊಡಗಿನಲ್ಲಿ ಬೆಟ್ಟ ಗುಡ್ಡಗಳನ್ನೇ ಭೂಪರಿವರ್ತನೆ ಮಾಡಲು ಕಂದಾಯ ಇಲಾಖೆ ಅಧಿಕಾರಿಗಳು ಅವಕಾಶ ಕೊಡುವುದಾದರೂ ಹೇಗೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಈ ರೀತಿ ಭೂಕುಸಿತ ಮತ್ತು ಪ್ರವಾಹ ಆಗುತ್ತಿರುವುದಕ್ಕೆ ಪ್ರಕೃತಿಯ ಮೇಲೆ ಮಾನವನ ದೌರ್ಜನ್ಯ, ಹಸ್ತಕ್ಷೇಪವೇ ನೇರ ಕಾರಣ ಎಂದು ಈಗಾಗಲೇ ಐಐಎಸ್ಸಿ ವಿಜ್ಞಾನಿಗಳ ತಂಡ ಸರ್ಕಾರಕ್ಕೆ ವರದಿಯನ್ನೇ ನೀಡಿದೆ. ಇಷ್ಟಾದರೂ ಕೊಡಗು ಜಿಲ್ಲೆಯಲ್ಲಿ ಅದರಲ್ಲೂ ಸರ್ಕಾರದ ಇಲಾಖೆಗಳೇ ಇಷ್ಟು ದೊಡ್ಡ ಬೆಟ್ಟ ಗುಡ್ಡಗಳನ್ನು ಸಮತಟ್ಟು ಮಾಡಿ ಬಡಾವಣೆ ಮಾಡುತ್ತಿರುವುದು ಇನ್ನೂ ಸೋಜಿಗದ ಸಂಗತಿ.
ಇಲ್ಲಿ ಬಡಾವಣೆ ನಿರ್ಮಾಣಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದಲೂ ಪರವಾನಗಿ ಪಡೆಯದೆ ನಿಯಮ ಉಲ್ಲಂಘನೆ ಮಾಡಲಾಗಿದೆ. ಪರಿಸರ ಹಾಳು ಮಾಡುತ್ತಿರುವುದಾಗಿ ಪಂಚಾಯಿತಿಯಿಂದ ಗೃಹ ನಿರ್ಮಾಣ ಮಂಡಳಿಗೆ ನೋಟಿಸ್ ನೀಡಿದರೂ ಇಲಾಖೆ ಅಧಿಕಾರಿಗಳು ಮಾತ್ರ ಇದುವರೆಗೆ ಕ್ಯಾರೇ ಎಂದಿಲ್ಲ. ಈ ಕುರಿತು ಪೊಲೀಸ್ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗೃಹ ನಿರ್ಮಾಣ ಮಂಡಳಿ ಮತ್ತು ಜಿಲ್ಲಾಧಿಕಾರಿಗಳಿಗೂ ದೂರು ನೀಡಿದೆ. ಆದರೆ ಯಾರಿಂದಲೂ ಪಂಚಾಯಿತಿಗೆ ಮರು ಉತ್ತರವಿಲ್ಲ. ಈ ಕುರಿತು ಜಿಲ್ಲಾಧಿಕಾರಿ ವೆಂಕಟರಾಜಾ ಅವರನ್ನು ಕೇಳಿದರೆ, ಗೃಹ ನಿರ್ಮಾಣ ಮಂಡಳಿ ಬಡಾವಣೆ ನಿರ್ಮಿಸುವ ಸಂಬಂಧ ನಾನು ಬಂದ ಮೇಲೆ ಇದುವರೆಗೆ ಯಾವುದೇ ಅರ್ಜಿ ಬಂದಿಲ್ಲ. ಭೂಪರಿವರ್ತನೆಗೂ ಅರ್ಜಿ ಬಂದಿಲ್ಲ. ಒಂದು ವೇಳೆ ಹಿಂದೆ ಇದಕ್ಕೆ ಅವಕಾಶ ನೀಡಿದ್ದರೆ ಅದು ಯಾವೆಲ್ಲಾ ನಿಯಮಗಳನ್ನು ಹಾಕಿ ಅವಕಾಶ ನೀಡಲಾಗಿದೆ ಎನ್ನುವುದನ್ನು ಪರಿಶೀಲಿಸುತ್ತೇವೆ ಎಂದಿದ್ದಾರೆ.
Kodagu: ನಾಲ್ಕು ವರ್ಷ ಕಳೆದರೂ ಜಲಜೀವನ್ ಮಿಷನ್ ಕಾಮಗಾರಿ ಅಪೂರ್ಣ!
ಏನೇ ಆಗಲಿ ಸೂಕ್ಷ್ಮ ಪರಿಸರ ವಲಯದಲ್ಲಿ ಭೂಪರಿವರ್ತನೆ ಮಾಡಿ ಬಡಾವಣೆ ನಿರ್ಮಿಸುತ್ತಿದ್ದರೆ ಅದು ಸರಿಯಾದ ಕ್ರಮ ಅಲ್ಲ ಎಂದಿದ್ದಾರೆ. ಬಡಾವಣೆ ನಿರ್ಮಿಸುತ್ತಿರುವುದರಿಂದ ಜಲಮೂಲಗಳಿಗೂ ತೊಂದರೆ ಆಗಲಿದೆ ಎಂದು ಜನರಿಂದ ಒಂದಷ್ಟು ದೂರುಗಳು ಬಂದಿವೆ. ಇದೆಲ್ಲವನ್ನು ಗಮನಿಸಲಾಗುವುದು ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯಿತಿ ಸದಸ್ಯ ದಿನು ಬೋಪಣ್ಣ ಕಳೆದ 8 ವರ್ಷಗಳಿಂದಲೂ ಇಲ್ಲಿ ಬಡಾವಣೆ ನಿರ್ಮಾಣ ಕಾಮಗಾರಿಗೆ ವಿರೋಧಿಸುತ್ತಲೇ ಇದ್ದೇವೆ. ಆದರೆ ಯಾವ ಅಧಿಕಾರಿಗಳೂ ಇದಕ್ಕೆ ಮಣಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.