‘ರಸ್ತೆ ಗುಂಡಿ ದುರಸ್ತಿ ಪರಿಶೀಲನೆಗೆ ತಜ್ಞರ ತಂಡ’

By Kannadaprabha NewsFirst Published Feb 7, 2020, 9:38 AM IST
Highlights

ರಸ್ತೆ ಗುಂಡಿಗಳನ್ನು ದುರಸ್ಥಿ ಮಾಡುವ ಸಲುವಾಗಿ ತಂಡವನ್ನು ರಚನೆ ಮಾಡಲು ಬಿಬಿಎಂಪಿಗೆ ಹೈ ಕೋರ್ಟ್ ಸೂಚನೆ ನೀಡಿದೆ. 

ಬೆಂಗಳೂರು [ಫೆ.07]:   ನಗರದಲ್ಲಿನ ರಸ್ತೆಗಳ ಗುಂಡಿಗಳ ಮುಚ್ಚುವ ಮತ್ತು ದುರಸ್ತಿಯಲ್ಲಿ ಗುಣಮಟ್ಟಕಾಯ್ದುಕೊಳ್ಳಲು ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್ಸಿ) ತಜ್ಞರನ್ನು ನೇಮಕ ಮಾಡಬೇಕು, ಮಾ.31ರೊಳಗೆ ನಗರದ ಎಲ್ಲ ರಸ್ತೆ ಗುಂಡಿಗಳ ಸಮೀಕ್ಷೆ ನಡೆಸಬೇಕು ಮತ್ತು ಹಂತ ಹಂತವಾಗಿ ಗುಂಡಿಗಳನ್ನು ಮುಚ್ಚಲು ಹೈಕೋರ್ಟ್‌ ಬಿಬಿಎಂಪಿಗೆ ಸೂಚನೆ ನೀಡಿದೆ.

ರಸ್ತೆ ಗುಂಡಿಗಳನ್ನು ಮುಚ್ಚದ ಕುರಿತಂತೆ ಕೋರಮಂಗಲದ ವಿಜಯನ್‌ ಮೆನನ್‌ ಎಂಬುವರು 2015ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಎ.ಎಸ್‌.ಓಕ್‌ ಮತ್ತು ನ್ಯಾ.ಹೇಮಂತ ಚಂದನಗೌಡರ್‌ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ, ವಿಚಾರಣೆಯನ್ನು ಏ.1ಕ್ಕೆ ಮುಂದೂಡಿತು.

‘ಉತ್ತಮ ಗುಂಡಿ ರಹಿತ ರಸ್ತೆ’ ಹೊಂದುವುದು ಪ್ರಜೆಗಳ ಮೂಲಭೂತ ಹಕ್ಕು, ಅದನ್ನು ಒದಗಿಸಬೇಕಾದ್ದು ಪಾಲಿಕೆಯ ಸಾಂವಿಧಾನಿಕ ಕರ್ತವ್ಯ ಎಂದೂ ಹೈಕೋರ್ಟ್‌ ಪುನರುಚ್ಛಿಸಿದೆ. ರಸ್ತೆ ದುರಸ್ತಿ, ಗುಂಡಿ ಮುಚ್ಚುವ ಕುರಿತು ಹೈಕೋರ್ಟ್‌ ಈವರೆಗೂ ನೀಡಿರುವ ಎಲ್ಲ ಆದೇಶಗಳ ಪಾಲಿಸಿರುವ ಬಗ್ಗೆ ಮಾಚ್‌ರ್‍ 31 ರೊಳಗೆ ಕಾರ್ಯಪಾಲನಾ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.

ಐಐಎಸ್ಸಿ ತಜ್ಞರ ನೇಮಿಸಿ:

ರಸ್ತೆಗಳ ಗುಣಮಟ್ಟಪರಿಶೀಲಿಸಲು ಬಿಬಿಎಂಪಿ ಎರಡು ವಾರದಲ್ಲಿ ಐಐಎಸ್‌ಸಿ ತಜ್ಞರನ್ನು ನೇಮಕ ಮಾಡಬೇಕು. ಮೊದಲಿಗೆ ಪಾಲಿಕೆ 74 ರಸ್ತೆಗುಂಡಿ ಮುಕ್ತವಾಗಿವೆ ಎಂದು ಹೇಳಲಾಗಿರುವ ರಸ್ತೆಗಳನ್ನು ಪರಿಶೀಲಿಸಬೇಕು. ಆ ನಂತರ ಇತರೆ ರಸ್ತೆಗಳನ್ನು ಪರಿಶೀಲಿಸಬೇಕು. ಒಟ್ಟಾರೆ ಐಐಎಸ್‌ಸಿಯಿಂದ ಬಿಬಿಎಂಪಿ ದುರಸ್ತಿಪಡಿಸಿದ ಪ್ರತಿ ರಸ್ತೆಯ ಆಡಿಟ್‌ ವರದಿ ಸಿದ್ಧವಾಗಬೇಕು. ಐಐಎಸ್‌ಸಿ ತಜ್ಞರು ಬಿಬಿಎಂಪಿಗೆ ಸಲಹೆ ನೀಡಬಹುದು ಮತ್ತು ಬಿಬಿಎಂಪಿ ರಸ್ತೆ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ಹೊಣೆ ನಿಗದಿಪಡಿಸಬೇಕು ಎಂದು ಆದೇಶದಲ್ಲಿ ತಿಳಿಸಿತು.

ಬಿಬಿಎಂಪಿ ವ್ಯಾಪ್ತಿಯ 417 ರಸ್ತೆಗಳು ಹಾಗೂ ಇನ್ನುಳಿದ ಎಲ್ಲ ರಸ್ತೆಗಳಲ್ಲಿ ಗುಂಡಿಗಳ ಸಮೀಕ್ಷೆ ನಡೆಸಬೇಕು. ಜೊತೆಗೆ ಗುಂಡಿಗಳನ್ನೂ ಹಂತ ಹಂತವಾಗಿ ಮುಚ್ಚಬೇಕು. ಆ ಕುರಿತ ಸಮಗ್ರ ಪ್ರಮಾಣಪತ್ರ ಸಲ್ಲಿಸಬೇಕು. ಅಲ್ಲದೆ, ಜಲಮಂಡಳಿ, ಮೆಟ್ರೋ ನಿಗಮ, ಬೆಸ್ಕಾಂ, ಗೇಲ್‌ ಮತ್ತಿತರ ಯಾವುದೇ ಸರ್ಕಾರಿ ಸಂಸ್ಥೆಗಳು ಕಾಮಗಾರಿಗೆ ರಸ್ತೆ ಅಗೆದರೆ ಅಂತಹ ಕಾಮಗಾರಿಗೆ ಕಾಲಮಿತಿ ನಿಗದಿಪಡಿಸಬೇಕು. ಅವುಗಳಿಂದಲೇ ಹಣ ವಸೂಲು ಮಾಡಿ ರಸ್ತೆಗಳನ್ನು ದುರಸ್ತಿಪಡಿಸುವ ಷರತ್ತುಗಳನ್ನು ವಿಧಿಸಬೇಕು ಎಂದ ಕೋರ್ಟ್‌, ಈ ಸಂಸ್ಥೆಗಳು ಅಗೆದಿರುವ ರಸ್ತೆಗಳನ್ನು ಏ.30 ರೊಳಗೆ ದುರಸ್ತಿಪಡಿಸಬೇಕು ಎಂದು ಸೂಚನೆ ನೀಡಿತು.

ಮೇಯರ್‌ಗೆ ನೋಟಿಸ್‌

ರಸ್ತೆ ಗುಂಡಿಗಳಿಂದ ಗಾಯಗೊಳ್ಳುವವರಿಗೆ ಮತ್ತು ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರ ನೀಡಬೇಕೆಂಬ ಆದೇಶ ಪಾಲನೆ ಮಾಡದಿರುವ ಬಗ್ಗೆ ಸಭೆ ನಡೆಸಿದ್ದ ವಿಚಾರಕ್ಕೆ ಸಂಬಂಧಿಸಿದ್ದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್‌ ಮೇಯರ್‌, ಉಪಮೇಯರ್‌, ಆಡಳಿತ ಪಕ್ಷದ ನಾಯಕ, ವಿಪಕ್ಷದ ನಾಯಕರಿಗೆ ನೋಟಿಸ್‌ ನೀಡಿದೆ.

ಅಲ್ಲದೆ, ಅವರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಿಲ್ಲ, ಆದರೆ ಮಾ.16 ರೊಳಗೆ ತಮ್ಮ ವಕೀಲರ ಮೂಲಕ ಪ್ರಮಾಣ ಪತ್ರ ಇಲ್ಲವೇ ತಮ್ಮ ವಕೀಲರ ಮೂಲಕ ಸಲ್ಲಿಸಿ, ಆಯುಕ್ತರು ಹಿಂದೆ ಪ್ರಮಾಣಪತ್ರದಲ್ಲಿ ತಿಳಿಸಿದ್ದಂತೆ ಸಭೆ ನಡೆಸಲಾಗಿದೆಯೇ, ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆದೇಶಿಸಿತು.

ಸುಮ್ಮನೆ ಕೂರುವುದಿಲ್ಲ’

ಹೈಕೋರ್ಟ್‌ ಆದೇಶವನ್ನು ಧಿಕ್ಕರಿಸಿ ಸಭೆ ನಡೆಸಿ, ನ್ಯಾಯಾಲಯದ ಯಾವುದೇ ಆದೇಶಗಳಿಗೆ ಬೆಲೆ ನೀಡದ ಬಿಬಿಎಂಪಿ ಆಯುಕ್ತರ ಕ್ರಮವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ನ್ಯಾಯಾಲಯದ ಅಧಿಕಾರ ಮತ್ತು ಘನತೆಗೆ ಚ್ಯುತಿಯಾಗುವಂತೆ ಅಧಿಕಾರಿಗಳು ನಡೆದುಕೊಂಡರೆ ಅದನ್ನು ನೋಡಿಕೊಂಡು ನ್ಯಾಯಮೂರ್ತಿ ಮೂಕ ಪ್ರೇಕಕನಂತೆ ಕುಳಿತಿರುವುದಿಲ್ಲ ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿತು.

ರಸ್ತೆ ಗುಂಡಿ ಮತ್ತಿತರ ಕುರಿತು ದೂರುಗಳನ್ನು ನೀಡಲು ಅಭಿವೃದ್ಧಿಪಡಿಸಿರುವ ‘ಸಹಾಯ್‌ ಆ್ಯಪ್‌’ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕಡಿಮೆ ವೆಚ್ಚದ ವಿನೂತನ ಕ್ರಮಗಳನ್ನು ಅನುಸರಿಸಿ ಹೆಚ್ಚು ಪ್ರಚಾರ ಮಾಡಬೇಕು. ಬಿಬಿಎಂಪಿ ರಸ್ತೆಗಳ ದುರಸ್ತಿಗೆ ಖರ್ಚು ಮಾಡುವ ಹಣಕ್ಕೆ ಹೋಲಿಸಿದರೆ, ಪ್ರಚಾರಕ್ಕೆ ವ್ಯಯ ಮಾಡುವ ಹಣ ತೀರಾ ಕಡಿಮೆ ಎಂದು ಪೀಠ ಹೇಳಿತು.

click me!