ಮಗ ಕಾಣೆಯಾಗಿದ್ದಾನೆಂದು ಸುಳ್ಳು ದೂರು ನೀಡಿದ ತಾಯಿಗೆ ಹೈಕೋರ್ಟ್‌ನಿಂದ 2 ಲಕ್ಷ ರೂ. ದಂಡ

Published : Sep 07, 2025, 06:15 PM IST
Karnataka HC Fines Woman for Missing Son Case

ಸಾರಾಂಶ

ಮಗ ಕಾಣೆಯಾಗಿದ್ದಾನೆಂದು ಸುಳ್ಳು ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಕ್ಕೆ ತಾಯಿಗೆ ಹೈಕೋರ್ಟ್ ₹2 ಲಕ್ಷ ದಂಡ ವಿಧಿಸಿದೆ. ಪೊಲೀಸರನ್ನು ಸಿಲುಕಿಸಲು ಉದ್ದೇಶಪೂರ್ವಕವಾಗಿ ಸುಳ್ಳು ಪ್ರಕರಣ ದಾಖಲಿಸಿ ನ್ಯಾಯಾಂಗದ ಸಮಯ ವ್ಯರ್ಥ ಮಾಡಿದ್ದಕ್ಕೆ ಈ ಶಿಕ್ಷೆ ವಿಧಿಸಲಾಗಿದೆ.

ಬೆಂಗಳೂರು: ಮಗ ಕಾಣೆಯಾಗಿದ್ದಾನೆಂದು ಸುಳ್ಳು ಪ್ರಕರಣ ದಾಖಲಿಸಿದ್ದ ಮಹಿಳೆಗೆ ಕರ್ನಾಟಕ ಹೈಕೋರ್ಟ್ ಗಂಭೀರ ಎಚ್ಚರಿಕೆ ನೀಡಿ 2 ಲಕ್ಷ ರೂಪಾಯಿ ದಂಡ ವಿಧಿಸಿರುವ ಘಟನೆ ನಡೆದಿದೆ. ಈ ದಂಡದ ಮೊತ್ತವನ್ನು ಎರಡು ವಾರಗಳೊಳಗೆ ಪಾವತಿಸಲು ಸೂಚನೆ ನೀಡಲಾಗಿದ್ದು, ಅದರಲ್ಲಿ 1 ಲಕ್ಷ ರೂ.ವನ್ನು ಕಾನೂನು ಸೇವಾ ಪ್ರಾಧಿಕಾರಕ್ಕೆ ಹಾಗೂ ಉಳಿದ 1 ಲಕ್ಷ ರೂ.ವನ್ನು ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲು ಆದೇಶಿಸಿದೆ. ನಿಗದಿತ ಅವಧಿಯಲ್ಲಿ ದಂಡ ಪಾವತಿಸದಿದ್ದರೆ, ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ತಾಯಿ ಸಿಲುಕುವಂತೆ ಕೋರ್ಟ್ ಎಚ್ಚರಿಕೆ ನೀಡಿದೆ.

ಪಕ್ಕದ ಮನೆಯವರ ಮೇಲೆ ದೂರು – ನಂತರ ಪೊಲೀಸರ ಮೇಲಿನ ಸಿಟ್ಟು

ಬೆಂಗಳೂರು ಇಂದಿರಾನಗರ 2ನೇ ಹಂತದಲ್ಲಿ ವಾಸವಿದ್ದ ಮಹೇಶ್ವರಿ ಹಾಗೂ ಅವರ ಮಗ ಕೃಪಲಾನಿ, ಪಕ್ಕದ ಮನೆಯವರ ವಿರುದ್ಧ ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದರು. ಪಕ್ಕದ ಮನೆಯವರು ರಾತ್ರಿ ವೇಳೆ ಗಲಾಟೆ ಮಾಡುತ್ತಾರೆ ಎಂಬ ದೂರಿನೊಂದಿಗೆ, ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಕೃಪಲಾನಿ ಇಂದಿರಾನಗರ ಪೊಲೀಸ್ ಠಾಣೆಗೆ ನೀಡಿದ್ದರು. ಈ ಸಂಬಂಧ ಎನ್‌ಸಿಆರ್ (NCR) ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದಾಗ ದೂರುಗಳು ಅಸತ್ಯವೆಂದು ತಿಳಿದುಬಂದಿತು.

ಇನ್ಸ್‌ಪೆಕ್ಟರ್ ವಿರುದ್ಧ ಸುಳ್ಳು ದೂರಿನ ಆಟ

ಈ ಹಿನ್ನಲೆಯಲ್ಲಿ ಕೃಪಲಾನಿ ಸ್ಥಳೀಯ ಇನ್ಸ್‌ಪೆಕ್ಟರ್ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿದ್ದರು. ಇದರಿಂದ ಅಸಮಾಧಾನಗೊಂಡ ತಾಯಿ ಮಹೇಶ್ವರಿ, ಮಗ ಕಾಣೆಯಾಗಿದ್ದಾನೆಂದು ಹೆಬಿಯಸ್ ಕಾರ್ಪಸ್ ಅರ್ಜಿ ಹಾಕಿ ಹೈಕೋರ್ಟ್‌ಗೆ ಮೊರೆ ಹೋಗಿದರು. “ನನ್ನ ಮಗ ಪೊಲೀಸರ ಠಾಣೆಗೆ ಹೋದ ನಂತರ ವಾಪಸ್ ಬಂದಿಲ್ಲ” ಎಂದು ಅವರು ಕೋರ್ಟ್‌ಗೆ ದೂರಿದ್ದರು.

ಮಗನ ನಿಜವಾದ ಸ್ಥಳ ಪೊಲೀಸರಿಗೆ ಪತ್ತೆ

ಆದರೆ ತನಿಖೆ ಮುಂದುವರೆಸಿದ ಪೊಲೀಸರು, ಕೃಪಲಾನಿ ತಾಯಿ ಮಹೇಶ್ವರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದುದನ್ನು ಸಿಡಿಆರ್ (Call Detail Records) ಮೂಲಕ ಪತ್ತೆಹಚ್ಚಿದರು. ಅಲ್ಲದೆ, ಮಗ ಚೆನ್ನೈನ ಮ್ಯಾರಿಯಟ್ ಹೋಟೆಲ್‌ನಲ್ಲಿ ವಾಸಿಸುತ್ತಿದ್ದ ಮಾಹಿತಿ ಪೊಲೀಸರಿಗೆ ದೊರಕಿತು. ತಕ್ಷಣವೇ ಚೆನ್ನೈನಿಂದ ಕೃಪಲಾನಿಯನ್ನು ಕರೆತಂದು ಹೈಕೋರ್ಟ್ ಮುಂದೆ ಹಾಜರುಪಡಿಸಲಾಯಿತು.

ಕೋರ್ಟ್ ತೀರ್ಪು

ಈ ಎಲ್ಲಾ ದಾಖಲೆಗಳನ್ನು ಕೋರ್ಟ್ ಮುಂದೆ ಮಂಡಿಸಿದ ನಂತರ, ಮಹೇಶ್ವರಿ ತಮ್ಮ ಮಗ ಕಾಣೆಯಾಗಿದ್ದಾನೆಂದು ಸುಳ್ಳು ಅರ್ಜಿ ಸಲ್ಲಿಸಿರುವುದು ಸ್ಪಷ್ಟವಾಯಿತು. ಪೊಲೀಸರು ಹಾಗೂ ಇನ್ಸ್‌ಪೆಕ್ಟರ್‌ರನ್ನು ಸಿಲುಕಿಸಲು ಉದ್ದೇಶಪೂರ್ವಕವಾಗಿ ಈ ಸುಳ್ಳು ಪ್ರಕರಣ ಹೂಡಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಇದರಿಂದ ನ್ಯಾಯಾಂಗದ ಸಮಯ ವ್ಯರ್ಥವಾಗಿದೆ, ಪೊಲೀಸರು ಅನಗತ್ಯವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಹೈಕೋರ್ಟ್ ಗಂಭೀರವಾಗಿ ಟೀಕಿಸಿ, ಮಹಿಳೆ ಮಹೇಶ್ವರಿಗೆ 2 ಲಕ್ಷ ರೂ. ದಂಡ ವಿಧಿಸಿತು.

PREV
Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ