ಸೇನಾ ಆಸ್ಪತ್ರೆಯಲ್ಲಿ ಹಾಸಿಗೆ ಸೌಲಭ್ಯ ಖಾತರಿ ಪಡಿಸಿ: ಕೇಂದ್ರಕ್ಕೆ ಹೈಕೋರ್ಟ್‌ ನಿರ್ದೇಶನ

By Kannadaprabha NewsFirst Published Apr 28, 2021, 12:11 PM IST
Highlights

ಬೆಂಗಳೂರಿನಲ್ಲಿ ಆತಂಕಕಾರಿ ಪರಿಸ್ಥಿತಿ| ಇದು ಜೀವಿಸುವ ಹಕ್ಕಿಗೆ ಸಂಬಂಧಿಸಿದ ವಿಚಾರ| ಎಚ್‌ಡಿಯು ಹಾಸಿಗೆಗಳ ಸಂಖ್ಯೆ3,490ಕ್ಕೆ ಏರಿಕೆ| ವೆಂಟಿಲೇಟರ್‌ ಸಹಿತ ಐಸಿಯು ಹಾಸಿಗೆಗಳ ಸಂಖ್ಯೆ 418ಕ್ಕೆ ಮತ್ತು ಐಸಿಯು ಸಂಖ್ಯೆ 497ಕ್ಕೆ ಏರಿಕೆ| 

ಬೆಂಗಳೂರು(ಏ.28):  ಕೋವಿಡ್‌-19 ಉಲ್ಬಣಗೊಳುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಸೇನಾ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಹಾಸಿಗೆ ಸೌಲಭ್ಯ ಕಲ್ಪಿಸುವ ಬಗ್ಗೆ ಖಾತರಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ರಾಜ್ಯದಲ್ಲಿ ಕೋವಿಡ್‌-19 ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.

ವಿಚಾರಣೆ ವೇಳೆ ಬಿಬಿಎಂಪಿ ವರದಿ ಸಲ್ಲಿಸಿ, ಹೈಕೋರ್ಟ್‌ ಸೂಚನೆ ನಂತರ ನಗರದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಸೀಮಿತವಾಗಿ ಹೆಚ್ಚಳ ಮಾಡಲಾಗಿದೆ. ಎಚ್‌ಡಿಯು ಹಾಸಿಗೆಗಳ ಸಂಖ್ಯೆ3,490ಕ್ಕೆ ಏರಿಕೆ ಮಾಡಲಾಗಿದೆ. ವೆಂಟಿಲೇಟರ್‌ ಸಹಿತ ಐಸಿಯು ಹಾಸಿಗೆಗಳ ಸಂಖ್ಯೆ 418ಕ್ಕೆ ಮತ್ತು ಐಸಿಯು ಸಂಖ್ಯೆ 497ಕ್ಕೆ ಏರಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿತು.

ಕೋವಿಡ್‌ ಅನಾಹುತಕ್ಕೆ ಮೂಕ ಪ್ರೇಕ್ಷಕ ಆಗೋದಿಲ್ಲ: ಸುಪ್ರೀಂ!

ಅದನ್ನು ಪರಿಗಣಿಸಿದ ನ್ಯಾಯಪೀಠ, ಸೇನಾ ಆಸ್ಪತ್ರೆಗಳಲ್ಲಿ ಕೋವಿಡ್‌-19 ಸೋಂಕಿತರ ಚಿಕಿತ್ಸೆಗೆ ಹಾಸಿಗೆಗಳನ್ನು ಕಲ್ಪಿಸುವಂತೆ ಕೋರಿ ಬಿಬಿಎಂಪಿ ಸಲ್ಲಿಸಿರುವ ಮನವಿ ಪತ್ರವನ್ನು ನಗರದ ಮಿಲಿಟರಿ ಹಾಗೂ ವಾಯು ಸೇನೆಯು ತಿರಸ್ಕರಿಸಿದೆ. ಬೆಂಗಳೂರಿನಲ್ಲಿ ಆತಂಕಕಾರಿ ಪರಿಸ್ಥಿತಿ ನೆಲೆಸಿದೆ. ಇದು ಜೀವಿಸುವ ಹಕ್ಕಿಗೆ ಸಂಬಂಧಿಸಿದ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟಿತು.

ಕೇಂದ್ರ ಸರ್ಕಾರದ ಪರ ವಕೀಲರು ಬಿಬಿಎಂಪಿಯ ಮನವಿಯನ್ನು ಸಂಬಂಧಪಟ್ಟ ಪ್ರಾಧಿಕಾರಿಗಳ ಮುಂದಿಟ್ಟು ಸೇನಾ (ಕಮಾಂಡ್‌) ಆಸ್ಪತ್ರೆಯಲ್ಲಿ ಕೆಲ ಹಾಸಿಗೆಗಳನ್ನು ಸಾರ್ವಜನಿಕರಿಗೆ ಕಲ್ಪಿಸುವ ಬಗ್ಗೆ ಖಾತರಿಪಡಿಸಬೇಕು. ರಾಜ್ಯ ಸರ್ಕಾರ ಸಹ ಸೇನಾಧಿಕಾರಿಗಳ ಜೊತೆಗೆ ಸಭೆ ನಡೆಸಿ, ಹಾಸಿಗೆ ಲಭ್ಯವಾಗುವ ವಿಚಾರವಾಗಿ ಸಹಕಾರ ಕೋರಬಹುದು ಎಂದು ನಿರ್ದೇಶಿಸಿತು.
 

click me!