ಕರಾವಳಿಯ ಕಂಬಳಕ್ಕೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ: 23 ಕೂಟಗಳಿಗೆ ಬಂಪರ್‌ ಅನುದಾನ ಘೋಷಣೆ

Published : Jul 16, 2026, 04:32 PM IST
Kambala Grant

ಸಾರಾಂಶ

ರಾಜ್ಯ ಸರ್ಕಾರವು ಕರಾವಳಿಯ 23 ಕಂಬಳ ಕೂಟಗಳಿಗೆ ತಲಾ 5 ಲಕ್ಷದಂತೆ ಒಟ್ಟು 1.15 ಕೋಟಿ ರೂಪಾಯಿ ಅನುದಾನ ಘೋಷಿಸಿದೆ. ಈ ನಿರ್ಧಾರವನ್ನು ಕಂಬಳ ಸಮಿತಿ ಸ್ವಾಗತಿಸಿದ್ದು, ಇದೇ ವೇಳೆ ಮೈಸೂರು ಕಂಬಳ ಆಯೋಜನೆಗೆ ಸಂಬಂಧಿಸಿದ ವಿವಾದದ ಬಗ್ಗೆ ಸಮಿತಿ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಡುಪಿ (ಜು.16): ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಜಾನಪದ ಕ್ರೀಡೆ ಕಂಬಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಆಯೋಜಕರಿಗೆ ಬಿಗ್ ಸಿಹಿ ಸುದ್ದಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಕಂಬಳದ ಸುತ್ತ ಹಲವು ವಿವಾದಗಳು ಸೃಷ್ಟಿಯಾಗುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಕಂಬಳ ಕೂಟಗಳ ಸುಗಮ ಆಯೋಜನೆಗಾಗಿ ಭಾರಿ ಮೊತ್ತದ ಅನುದಾನವನ್ನು ಪ್ರಕಟಿಸಿದೆ. 2025-26ನೇ ಸಾಲಿನ ಕಂಬಳ ಋತುವಿಗಾಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಒಟ್ಟು 1 ಕೋಟಿ 15 ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಸರ್ಕಾರದ ಈ ನಿರ್ಧಾರವನ್ನು ಕಂಬಳ ಆಯೋಜಕರು ಹಾಗೂ ಅಭಿಮಾನಿಗಳು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.

ಪ್ರತಿ ಕಂಬಳಕ್ಕೂ 5 ಲಕ್ಷ ರೂಪಾಯಿ ನೆರವು

ಈ ಬಾರಿ ಕರಾವಳಿ ಅವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಧಿಕೃತವಾಗಿ ನಡೆಯುವ ಒಟ್ಟು 23 ಕಂಬಳ ಕೂಟಗಳನ್ನು ಈ ಯೋಜನೆಯಡಿ ಗುರುತಿಸಲಾಗಿದೆ. ಸರ್ಕಾರದ ಆದೇಶದನ್ವಯ, ಆಯ್ಕೆಯಾಗಿರುವ ಪ್ರತಿಯೊಂದು ಕಂಬಳ ಕೂಟದ ಆಯೋಜನೆಗೂ ತಲಾ 5 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯ ಹರಿದುಬರಲಿದೆ. ಪ್ರಸ್ತುತ ದಿನಗಳಲ್ಲಿ ಕಂಬಳ ಆಯೋಜನೆ ಮಾಡುವುದು ಆಯೋಜಕರಿಗೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದ್ದು, ಸರ್ಕಾರದ ಈ ಸಕಾಲಿಕ ನೆರವು ತುಳುನಾಡಿನ ಕೀರ್ತಿ ಹಾಗೂ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿಯಲು ದೊಡ್ಡ ಬಲ ನೀಡಿದಂತಾಗಿದೆ.

'ಸರ್ಕಾರ ನುಡಿದಂತೆ ನಡೆದಿದೆ' - ಡಾ. ದೇವಿಪ್ರಸಾದ್ ಶೆಟ್ಟಿ ಹರ್ಷ

ರಾಜ್ಯ ಸರ್ಕಾರದ ಈ ಮಹತ್ವದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಂಬಳ ಆಯೋಜಕರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡು ಸಿಹಿ ಸುದ್ದಿ ನೀಡಿದ್ದಾರೆ. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಪ್ರವಾಸೋದ್ಯಮ ಹಾಗೂ ಕ್ರೀಡಾ ಇಲಾಖೆಯಿಂದ ಕಂಬಳಕ್ಕೆ ಅನುದಾನ ಸಿಕ್ಕಿತ್ತು. ಅದಕ್ಕೂ ಮುನ್ನ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಕಂಬಳಕ್ಕೆ 1 ಕೋಟಿ ರೂಪಾಯಿ ನೀಡಿದ್ದರು. ರಾಜಕೀಯ ಭೇದಭಾವವಿಲ್ಲದೆ ಎಲ್ಲಾ ಸರ್ಕಾರಗಳು ಕಂಬಳವನ್ನು ಪೋಷಿಸಿಕೊಂಡು ಬಂದಿವೆ. ಇದು ಕ್ರೀಡೆಗೆ ಸಿಕ್ಕ ಗೌರವ ಎಂದು ಮೆಚ್ಚಿಕೊಂಡಿದ್ದಾರೆ. ಇದೇ ವೇಳೆ, ಮುಂದಿನ ರಾಜ್ಯ ಬಜೆಟ್‌ನಲ್ಲಿ ಕಂಬಳ ಕ್ರೀಡೆಗಾಗಿಯೇ ಪ್ರತ್ಯೇಕವಾಗಿ 5 ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ.

ಸಾಂಪ್ರದಾಯಿಕ ಹಾಗೂ ಒಂಟಿ ಕರೆ ಕಂಬಳಗಳಿಗೂ ಮಾನ್ಯತೆ

ಸಾಂಪ್ರದಾಯಿಕ ಕಂಬಳಗಳ ಕುರಿತು ಮಾತನಾಡಿದ ಸಮಿತಿ ಅಧ್ಯಕ್ಷರು, ಜೋಡುಕರೆಯಲ್ಲಿ ಸದ್ಯ ಎಂಟು ಸಾಂಪ್ರದಾಯಿಕ ಕಂಬಳಗಳಿದ್ದು, ಅವುಗಳಿಗೂ ಈ ಅನುದಾನ ಲಭ್ಯವಾಗಲಿದೆ. ಇದರೊಂದಿಗೆ ಬೈಂದೂರು ಹಾಗೂ ಕುಂದಾಪುರ ಭಾಗಗಳಲ್ಲಿ ಸುದೀರ್ಘ ಕಾಲದಿಂದ ನಡೆಸಿಕೊಂಡು ಬರುತ್ತಿರುವ 'ಒಂಟಿ ಕರೆ' ಕಂಬಳಗಳ ಆಯೋಜಕರನ್ನೂ ಸಹ ರಾಜ್ಯ ಕಂಬಳ ಅಸೋಸಿಯೇಷನ್‌ಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಈ ಸಾಂಪ್ರದಾಯಿಕ ಒಂಟಿ ಕರೆ ಕಂಬಳಗಳಿಗೂ ಸರ್ಕಾರದಿಂದ ಆರ್ಥಿಕ ಅನುದಾನ ದೊರಕಿಸಿಕೊಡುವಂತೆ ಅಧಿಕೃತ ಮನವಿ ಸಲ್ಲಿಸಲಾಗುವುದು ಎಂದರು.

ಮೈಸೂರು ಕಂಬಳ ವಿವಾದ: ಕರಾವಳಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ!

ಇದೇ ಸಂದರ್ಭದಲ್ಲಿ ಮೈಸೂರು ಕಂಬಳ ಆಯೋಜನೆಗೆ ವ್ಯಕ್ತವಾಗುತ್ತಿರುವ ವಿರೋಧದ ಕುರಿತು ಡಾ. ದೇವಿಪ್ರಸಾದ್ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಂಬಳ ಎಂಬುದು ರಾಜಕೀಯ ಮತ್ತು ಧರ್ಮವನ್ನು ಮೀರಿದ ಒಂದು ಸಾಂಸ್ಕೃತಿಕ ಕ್ರೀಡೆ. ಇಲ್ಲಿ ಎಲ್ಲಾ ಪಕ್ಷದವರೂ ಒಟ್ಟಾಗಿ ಕಂಬಳ ನಡೆಸುತ್ತಾರೆ. ಮೈಸೂರು ಸಂಸದರು ಇದನ್ನು ವಿರೋಧಿಸುತ್ತಾರೆ ಎಂಬ ಒಂದೇ ಕಾರಣಕ್ಕೆ, ಅವರದ್ದೇ ಪಕ್ಷದ (ಬಿಜೆಪಿ) ಕರಾವಳಿಯ ಶಾಸಕರು ಮತ್ತು ಜನಪ್ರತಿನಿಧಿಗಳು ಮೈಸೂರು ಕಂಬಳವನ್ನು ವಿರೋಧಿಸುತ್ತಿರುವುದು ಸರಿಯಲ್ಲ. ನೀವು ಕಂಬಳಕ್ಕೆ ಗೌರವ ತಂದಿಲ್ಲ, ಬದಲಿಗೆ ಕಂಬಳವೇ ನಿಮಗೆ ಸಮಾಜದಲ್ಲಿ ಗೌರವ ಕೊಟ್ಟಿದೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದ್ದಾರೆ.

"ಕಂಬಳ ಕೇವಲ ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವೇ? ಮೈಸೂರಿನಲ್ಲಿ ಕಂಬಳ ಯಾಕೆ ನಡೆಯಬಾರದು? ಅಲ್ಲಿ ಕಂಬಳದ ಬಗ್ಗೆ ಅನಗತ್ಯ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ಕೆಳವರ್ಗದವರ ಮೇಲಿನ ದಬ್ಬಾಳಿಕೆ ಎಂಬಂತೆ ಬಿಂಬಿಸಲು ಕೆಲವರು ಯತ್ನಿಸುತ್ತಿದ್ದಾರೆ. ಆದರೆ ನಾವು ಹಿಂದುಳಿದ ವರ್ಗದ ಆರಾಧ್ಯ ದೈವಗಳಾದ ಕೋಟಿ-ಚೆನ್ನಯ್ಯ, ಕಾಂತಬಾರೆ-ಬೂದಬಾರೆ ಹಾಗೂ ಸೂರ್ಯ-ಚಂದ್ರರ ಹೆಸರಿನಲ್ಲಿ ಕಂಬಳ ಮಾಡುತ್ತೇವೆ. ಇದು ಇಡೀ ದೇಶಕ್ಕೇ ಮಾದರಿಯಾದ ವ್ಯವಸ್ಥೆ. ಕರಾವಳಿಯ ಜನಪ್ರತಿನಿಧಿಗಳು ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಗಳಂತೆ ವರ್ತಿಸದೆ, ಕಂಬಳದ ವೈಭವವನ್ನು ರಾಜ್ಯಾದ್ಯಂತ ಪಸರಿಸಲು ಧೈರ್ಯದಿಂದ ಕೆಲಸ ಮಾಡಬೇಕು ಎಂದು ಕರಾವಳಿಯ ಬಿಜೆಪಿ ಜನಪ್ರತಿನಿಧಿಗಳಿಗೆ ದೇವಿಪ್ರಸಾದ್ ಶೆಟ್ಟಿ ನೇರ ಮನವಿ ಹಾಗೂ ಒತ್ತಾಯ ಮಾಡಿದರು.

PREV
Read more Articles on
click me!

Recommended Stories

ಮಂಗಳೂರು: ಉಪ್ಪಿನಂಗಡಿಯಲ್ಲಿ ಖೋಟಾನೋಟು ದಂಧೆ ಪತ್ತೆ, ಪ್ರಿಂಟಿಂಗ್ ಮೆಷಿನ್, RBI ಸೀಲ್ ಸಹಿತ 7 ಮಂದಿ ಅರೆಸ್ಟ್!
ಉಡುಪಿ:ಹೌಸ್ ಕೀಪಿಂಗ್ ಮಗಳು, ಕನ್ನಡ ಶಾಲೆಯ ಹಳ್ಳಿ ಪ್ರತಿಭೆ ಸ್ಪೂರ್ತಿ ಶೆಟ್ಟಿ'ಮಿಸ್ ಯೂನಿವರ್ಸ್ ಇಂಡಿಯಾ' ಫೈನಲಿಸ್ಟ್!