ಮೂಲ ವೇತನದ ಶೇ. 17ರಷ್ಟುಮಧ್ಯಂತರ ಪರಿಹಾರ ಮಂಜೂರು ಹಾಗೂ ಒಪಿಎಸ್ ಜಾರಿ ಮಾಡಲು ಸಮಿತಿ ರಚಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಬುಧವಾರ ಬೆಳಗ್ಗೆ ಆರಂಭಿಸಿದ ಅನಿರ್ದಿಷ್ಟಾವಧಿ ಮುಷ್ಕರ ಮಧ್ಯಾಹ್ನದ ವೇಳೆಗೆ ಅಂತ್ಯಗೊಂಡಿತು.
ರಾಮನಗರ (ಮಾ.2) : ಮೂಲ ವೇತನದ ಶೇ. 17ರಷ್ಟುಮಧ್ಯಂತರ ಪರಿಹಾರ ಮಂಜೂರು ಹಾಗೂ ಒಪಿಎಸ್ ಜಾರಿ ಮಾಡಲು ಸಮಿತಿ ರಚಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಬುಧವಾರ ಬೆಳಗ್ಗೆ ಆರಂಭಿಸಿದ ಅನಿರ್ದಿಷ್ಟಾವಧಿ ಮುಷ್ಕರ ಮಧ್ಯಾಹ್ನದ ವೇಳೆಗೆ ಅಂತ್ಯಗೊಂಡಿತು.
ರಾಜ್ಯ ಸರ್ಕಾರಿ ನೌಕರರ ಸಂಘ(Government Employees Union) 7ನೇ ವೇತನ ಆಯೋಗ(7th Pay Commission) ಮತ್ತು ಒಪಿಎಸ್ ಯೋಜನೆ(OPS Scheme) ಜಾರಿಗೊಳಿಸುವಂತೆ ರಾಜ್ಯಸರ್ಕಾರವನ್ನು ಆಗ್ರಹಿಸಿ ಜಿಲ್ಲೆಯ ಒಟ್ಟು 12 ಸಾವಿರ ಸರ್ಕಾರಿ ನೌಕರರು ಬುಧವಾರ ಬೆಳಗ್ಗೆಯಿಂದ ಮುಷ್ಕರ ಆರಂಭಿಸಿದ್ದರು.
7th Pay Commission: ಮಾರ್ಚ್ 1ರಿಂದ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು!
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ, ತಾಲೂಕು ಕಚೇರಿ ಸೇರಿದಂತೆ 45 ಇಲಾಖೆಗಳು ಹಾಗೂ ತಾಲೂಕು ಮಟ್ಟದ 25 ಇಲಾಖೆಯ ಕಚೇರಿಗಳ ಬಾಗಿಲು ಮುಚ್ಚಿದ್ದವು. ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಮನೆಯಲ್ಲೇ ಉಳಿದಿದ್ದರು. ನೌಕರರಿಲ್ಲದೆ ಕಚೇರಿಗಳು ಬಿಕೋ ಎನ್ನುತ್ತಿದ್ದವು. ಕಚೇರಿ ಕೆಲಸಗಳಿಗಾಗಿ ಆಗಮಿಸಿದ್ದ ಜನರು ನೌಕರರಿಲ್ಲದೆ ಪರದಾಡಿದರು. ತುರ್ತು ಕೆಲಸದ ಮೇಲೆ ಬಂದಿದ್ದವರು ನೌಕರರು ಸಿಗದೆ ಪರಿತಪಿಸಿದರು.
ಜನರಿಗೆ ತಟ್ಟಿದ ಮುಷ್ಕರದ ಬಿಸಿ:
ಸರ್ಕಾರಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳ ಬಾಗಿಲು ಬೀಗಿ ಹಾಕಿದ್ದರಿಂದ ಆಡಳಿತ ಯಂತ್ರವೂ ಸಂಪೂರ್ಣವಾಗಿ ನಿಷ್ಕಿ್ರಯಗೊಂಡಿತ್ತು. ಇದರ ಪರಿಣಾಮ ಸಾರ್ವಜನಿಕರಿಗೆ ಮುಷ್ಕರ ಬಿಸಿ ತಟ್ಟಿತ್ತು. ಸರ್ಕಾರಿ ಕಚೇರಿಗೆ ತೆರಳಿ ವಾಪಸಾಗುತ್ತಿದ್ದ ದೃಶ್ಯ ಕಂಡು ಬಂದಿತು.
ಮುಷ್ಕರದಿಂದಾಗಿ ಆರೋಗ್ಯ ಇಲಾಖೆಯ ಸೇವೆಯಲ್ಲಿಯೂ ವ್ಯತ್ಯಯ ಉಂಟಾಯಿತು. ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕ ಮಾತ್ರ ಕಾರ್ಯನಿರ್ವಹಿಸಿತು. ಉಳಿದಂತೆ ಕನಕಪುರ ಹಾಗೂ ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ಬೀಗ ಹಾಕಿ ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದಾಗಿ ರೋಗಿಗಳು ಸಾಕಷ್ಟುತೊಂದರೆ ಅನುಭವಿಸುವಂತಾಯಿತು.
ಕೆಲ ಸಂಘಟನೆಗಳು ಸಮಸ್ಯೆ ಬಗೆಹರಿಸಿಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಆದರೆ, ಮುಷ್ಕರದ ಕಾರಣ ಅಲ್ಲಿಯೂ ಮನವಿ ಪಡೆಯಲು ಯಾರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ವಲ್ಪ ಸಮಯದ ನಂತರ ಜಿಲ್ಲಾಧಿಕಾರಿ ಕಚೇರಿ ತಹಸೀಲ್ದಾರ್ ಆಗಮಿಸಿ ಮನವಿ ಸ್ವೀಕರಿಸಿದರು.
ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಮುಷ್ಕರದಿಂದಾಗಿ ಕಾಯಂ ನೌಕರರು ಕರ್ತವ್ಯಕ್ಕೆ ಗೈರಾಗಿದ್ದರು. ಹಾಗಾಗಿ ಗುತ್ತಿಗೆ ಆಧಾರದ ಸಿಬ್ಬಂದಿಯಿಂದಲೇ ಮಧ್ಯಾಹ್ನದವರೆಗೆ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲಾಯಿತು.
ಕಚೇರಿ ಟೂ ಕಚೇರಿ ಭೇಟಿ:
ಈ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಬಾಹ್ಯ ಬೆಂಬಲ ವ್ಯಕ್ತಪಡಿಸಿದ್ದರು. ಈ ಇಲಾಖೆಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಎಂದಿನಂತೆ ಕರ್ತವ್ಯ ನಿರ್ವಹಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ತಂಡ ಪ್ರತಿಯೊಂದು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ, ಮುಷ್ಕರ ಸಂಬಂಧ ಮಾಹಿತಿ ಪಡೆದುಕೊಳ್ಳುವ ಕೆಲಸ ಮಾಡಿತು. ಈ ವೇಳೆ ಕಚೇರಿ ತೆರೆದಿದ್ದರೆ, ಸಿಬ್ಬಂದಿ ಕೆಲಸ ಮಾಡುತ್ತಿದ್ದರೆ ಅವರ ಮನವೊಲಿಸಿ ಮುಷ್ಕರಕ್ಕೆ ಬೆಂಬಲಿಸುವಂತೆ ಕಿವಿಮಾತು ಹೇಳುವ ಕೆಲಸ ಸಹ ಮಾಡಿತು.
ರಾಜ್ಯ ಸರ್ಕಾರ ಸರ್ಕಾರಿ ನೌಕರರ ಮೂಲ ವೇತನದ ಶೇ.17ರಷ್ಟುಮಧ್ಯಂತರ ಪರಿಹಾರ ಮಂಜೂರು ಹಾಗೂ ಒಪಿಎಸ್ ಜಾರಿ ಮಾಡಲು ಸಮಿತಿ ರಚಿಸಿ ಆದೇಶ ಹೊರಡಿಸಿದ ನಂತರ ಸರ್ಕಾರಿ ನೌಕರರು ಹರ್ಷ ವ್ಯಕ್ತಪಡಿಸಿದರು. ಸಂಘದ ಸೂಚನೆ ಮೆರೆಗೆ ಕೆಲವು ಇಲಾಖೆ ಅಧಿಕಾರಿಗಳು ಬುಧವಾರ ಮಧ್ಯಾಹ್ನವೇ ಕರ್ತವ್ಯಕ್ಕೆ ಹಾಜರಾದರು. ಕೆಲವು ಇಲಾಖೆಗಳ ಕಚೇರಿಗಳು ಮಾತ್ರ ಬೀಗ ಹಾಕಲಾಗಿತ್ತು.
ಎಮ್ಮೆ ಕರುವಿನ ಮೇಲೆ ದಾಳಿ; ಕಿವಿ, ಬಾಯಿ, ಹೊಟ್ಟೆಕಚ್ಚಿ ತಿಂದ ಬೀದಿ ನಾಯಿಗಳ ಗುಂಪು!
ರಾಜ್ಯಸರ್ಕಾರ ಮಧ್ಯತರ ಪರಿಹಾರ(ಐಆರ್) ಶೇ.17ರಷ್ಟುನೀಡಿದೆ. ಹಾಗಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಈಗ ಮುಷ್ಕರವನ್ನು ಅಂತ್ಯಗೊಳಿಸಲಾಗಿದ್ದು, ನೌಕರರು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜತೆಗೆ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಿಗೆ ಧನ್ಯವಾದ ತಿಳಿಸುತ್ತೇವೆ
- ಸತೀಶ್,ಜಿಲ್ಲಾಧ್ಯಕ್ಷರು ,ಸರ್ಕಾರಿ ನೌಕರರ ಸಂಘ, ರಾಮನಗರ.