
ಬೆಂಗಳೂರು (ಸೆ.12): ಕರ್ನಾಟಕದಲ್ಲಿ ಶಾಸಕರುಗಳಿಗೆ ಇರುವ ಭತ್ಯೆ, ಸರ್ಕಾರದ ವೇತನ ಇವೆಲ್ಲವೂ ಯಾವಾಗಲೂ ಸುದ್ದಿಯಾಗುತ್ತಿರುತ್ತದೆ. ಶಾಸಕರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿರುವ ಜೊತೆಗೆ, ಸರ್ಕಾರವು ಅವರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತದೆ. ಇತ್ತೀಚೆಗೆ, ವಿಧಾನಸಭೆ ಶಾಸಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ವೆಚ್ಚಗಳ ಮರುಪಾವತಿಗಾಗಿಯೇ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಹಾಲಿ ಇರುವ ಶಾಸಕರಿಗೆ ಸರ್ಕಾರ ಭಾರೀ ಪ್ರಮಾಣದ ಹಣ ಖರ್ಚು ಮಾಡೋದು ಮಾತ್ರವಲ್ಲ, ಮಾಜಿ ಶಾಸಕರು ಹಾಗೂ ದಿವಂಗತ ಮಾಜಿ ಶಾಸಕರುಗಳ ಕುಟುಂಬಗಳಿಗೂ ಸರ್ಕಾರ ಭತ್ಯಯನ್ನು ನೀಡುತ್ತದೆ.
ಇತ್ತೀಚೆಗೆ ವಿಜಯ್‌ರಾವ್ ಕುಲಕರ್ಣಿ ಎನ್ನುವವರು ಆರ್‌ಟಿಐ ಮೂಲಕ ಮಾಹಿತಿ ಕೇಳಿ ಅರ್ಜಿ ಹಾಕಿದ್ದರು. ಇದಕ್ಕೆ ಕರ್ನಾಟಕ ವಿಧಾನಸಭೆಯ ಸಚಿವಾಲಯದ ಕಾರ್ಯದರ್ಶಿ ಉತ್ತರ ನೀಡಿದ್ದಾರೆ. ಆಗಸ್ಟ್ 18 ರಂದು ಸಲ್ಲಿಕೆ ಮಾಡಿದ್ದ ಅರ್ಜಿ, ಆಗಸ್ಟ್ 22 ರಂದು ಕಾರ್ಯಾಲಯಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ.
'ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ. ಮಾಹಿತಿ ಹಕ್ಕು ಅಧಿನಿಯಮ 2005ರಡಿ ಉಲ್ಲೇಖಿತ ಅರ್ಜಿಯಲ್ಲಿ ಕೋರಿರುವಂತೆ ಮಾಜಿ ಶಾಸಕರು ಮತ್ತು ದಿವಂಗತ ಮಾಜಿ ಶಾಸಕರ ಅವಲಂಬಿತ ಕುಟುಂಬದ ಸದಸ್ಯರುಗಳಿಗೆ ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನ ಮತ್ತು ವೈದ್ಯಕೀಯ ಭತ್ಯೆಯನ್ನು ಈ ಕೆಳಕಂಡ ಕೋಷ್ಠಕದಲ್ಲಿ ವಿವರಿಸಿರುವಂತೆ ಪಾವತಿಸಲಾಗುತ್ತಿದೆ' ಎಂದು ಮಾಹಿತಿ ನೀಡಿದೆ.
ಇದರ ಅನ್ವಯ ಮಾಜಿ ಶಾಸಕರು ಹಾಗೂ ದಿವಂಗತ ಮಾಜಿ ಶಾಸಕರುಗಳ ಕುಟುಂಬಗಳಿಗೆ, ಪ್ರತಿ ತಿಂಗಳ ನಿವೃತ್ತಿ ವೇತನವಾಗಿ ಸರ್ಕಾರ 75 ಸಾವಿರ ರೂಪಾಯಿ ಪಾವತಿ ಮಾಡುತ್ತದೆ. ಹಾಗೇನಾದರೂ ಪ್ರತಿ ಹೆಚ್ಚುವರಿ ಅವಧಿಗೆ ಆಯ್ಕೆ ಆಗಿದ್ದರೆ, ಪ್ರತಿ ತಿಂಗಳಿಗೆ 20 ಸಾವಿರ ರೂಪಾಯಿ ಮೊತ್ತವನ್ನು ನೀಡಲಾಗುತ್ತದೆ. ವೈದ್ಯಕೀಯ ಭತ್ಯೆ ಎಂದು ಪ್ರತಿ ತಿಂಗಳು 20 ಸಾವಿರ ರೂಪಾಯಿ ಪಾವತಿ ಮಾಡಲಾಗುತ್ತದೆ.ಹಾಗೇನಾದರೂ ಪ್ರತಿ ಹೆಚ್ಚುವರಿ ಅವಧಿಗೆ ಆಯ್ಕೆ ಆಗಿದ್ದರೆ, 10 ಸಾವಿರ ರೂಪಾಯಿ ಹಣವನ್ನು ಸರ್ಕಾರ ಪಾವತಿ ಮಾಡುತ್ತದೆ.
ಇನ್ನು ಕುಟುಂಬ ನಿವೃತ್ತಿ ವೇತನ ಎನ್ನುವ ರೂಪದಲ್ಲಿ ಪ್ರತಿ ತಿಂಗಳು 37,500 ರೂಪಾಯಿ ಹಣ ನೀಡಲಾಗುತ್ತಿದೆ.ಪ್ರತಿ ಹೆಚ್ಚುವರಿ ಅವಧಿಗೆ ಪ್ರತಿ ತಿಂಗಳು 10 ಸಾವಿರ ರೂ ನೀಡಲಾಗುತ್ತದೆ.ವೈದ್ಯಕೀಯ ಭತ್ಯೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಇರಲಿದೆ. ಇನ್ನು ಮಾಜಿ ಶಾಸಕರಿಗೆ ರೈಲ್ವೆ ಹಾಗೂ ವಿಮಾನ ಪ್ರಯಾಣ ಭತ್ಯೆ ಎಂದು ವಾರ್ಷಿಕವಾಗಿ 2 ಲಕ್ಷ ರೂಪಾಯಿವನ್ನು ಸರ್ಕಾರ ಪಾವತಿ ಮಾಡುತ್ತದೆ. ಅದರೊಂದಿಗೆ ಮಾಜಿ ಶಾಸಕರುಗಳಿಗೆ ಸರ್ಕಾರದ ವತಿಯಿಂದ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯವನ್ನೂ ಒದಗಿಸಲಾಗಿದೆ.